ಭಾನುವಾರ, ಜನವರಿ 17, 2021
22 °C
ದಕ್ಷಿಣ ಕೊಡಗು ಭಾಗದ ಜನರ ದಶಕಗಳ ಕನಸು ನನಸು; ಜನರಲ್ಲಿ ಸಂತಸ

ಕೊಡಗು: 4ನೇ ತಾಲ್ಲೂಕು ಪೊನ್ನಂಪೇಟೆ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ: ಇಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸಿ, ಸರ್ಕಾರದ ಸವಲತ್ತುಗಳು ಸುಲಭವಾಗಿ ಸಿಗುವಂತೆ ಮಾಡಲು ಪೊನ್ನಂಪೇಟೆಯನ್ನು ಹೊಸ ತಾಲ್ಲೂಕು ಆಗಿ ವಿರಾಜಪೇಟೆಯಿಂದ ವಿಂಗಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು

ಪೊನ್ನಂಪೇಟೆಯಲ್ಲಿ ನೂತನ ತಾಲ್ಲೂಕು ಕಚೇರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಪೊನ್ನಂಪೇಟೆ ತಾಲ್ಲೂಕು ಹಲವಾರು ವರ್ಷಗಳಿಂದ ಅವಶ್ಯಕತೆಯಿತ್ತು. ಭೌಗೋಳಿಕವಾಗಿ 120 ಚದರ ಕಿ.ಮೀ ಇದೆ. 21 ಗ್ರಾ.ಪಂಗಳನ್ನು ಸೇರಿಸಿ ಪೊನ್ನಂಪೇಟೆ ತಾಲ್ಲೂಕು ಮಾಡಲಾಗಿದೆ. 12 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಪೊನ್ನಂಪೇಟೆ ಭಾಗದ ಜನರು ವಿರಾಜಪೇಟೆ ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿಗೆ ಹೋಗಲು 2ರಿಂದ 3 ಗಂಟೆ ಕಾಲಾವಕಾಶ ಬೇಕಿತ್ತು. ಇದರಿಂದ ಪ್ರಯಾಣದ ವೆಚ್ಚ ಹಾಗೂ ಸಮಯ ವ್ಯರ್ಥವಾಗುವ ಸಂದರ್ಭ ಎದುರಾಗಿತ್ತು. ನೂತನ ತಾಲ್ಲೂಕು ಘೋಷಣೆಯಿಂದ ಜನರಿಗೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

ಗ್ರೇಡ್‌ 1 ತಹಶೀಲ್ದಾರ್ ಹುದ್ದೆ ಹಾಗೂ ಆಡಳಿತಾತ್ಮಕವಾಗಿ ಸಹಕಾರಿಯಾಗಲು 12 ಕೆಳಹಂತದ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ನೂತನ ತಾಲ್ಲೂಕು ರಚನೆಯಲ್ಲಿ ಪೊನ್ನಂಪೇಟೆಯ ನಾಗರಿಕ ವೇದಿಕೆ ನಿರಂತರವಾಗಿ ಹೋರಾಟ ನಡೆಸಿ ಯಶಸ್ಸು ಕಂಡಿದೆ. ವೇದಿಕೆಯ ಹಿರಿಯರ ಪ್ರಯತ್ನದಿಂದ ದಶಕಗಳ ಹೋರಾಟಕ್ಕೆ ಜಯ ಸಿಕ್ಕೆದೆ. ನೂತನ ತಾಲ್ಲೂಕು ರಚನೆಯನ್ನು ಕಣ್ತುಂಬಿಕೊಳ್ಳುವುದು ಪೊನ್ನಂಪೇಟೆ ಭಾಗದ ಅನೇಕ ಹಿರಿಯರ ಬಯಕೆಯಾಗಿತ್ತು. ಇದೀಗ ಹೋರಾಟಗಾರರಿಗೆ ಸಂತೋಷವಾಗಿದೆ ಎಂದು ಹೇಳಿದರು.

ಹೊಸ ಪಿಂಚಣಿ ವ್ಯವಸ್ಥೆ:

ಸರ್ಕಾರ ಜನರ ಭಾವನೆಗೆ ಸ್ಪಂದನೆ ಮಾಡಿದೆ. ಪಿಂಚಣಿಗೆ ವಾರ್ಷಿಕ ₹ 7.5 ಸಾವಿರ ಕೋಟಿ ಖರ್ಚು ಮಾಡುತ್ತಿತ್ತು. ಆಧಾರ್ ಕಾರ್ಡ್ ಮೂಲಕ ಪಿಂಚಣಿ ನೀಡಲಾಗುತ್ತಿದೆ. ಇದರಿಂದ ಬೋಗಸ್‌ ಪಿಂಚಣಿಗಳು ರದ್ದಾಗುತ್ತದೆ. ಇನ್ನು ಮುಂದೆ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಆಧಾರ್ ಮೂಲಕ 60 ವರ್ಷ ಆದವರಿಗೆ ಪಿಂಚಣಿ ನೀಡಲಾಗುತ್ತದೆ. ಅರ್ಜಿಯನ್ನು ಬ್ರೋಕರ್ ಸಹಾಯವಿಲ್ಲದೆ ಹಾಗೂ ಪಿಂಚಣಿಯನ್ನು 15 ದಿನದ ಒಳಗಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.

ಜಿಲ್ಲೆಗೆ ₹15 ಕೋಟಿ ಮೊತ್ತವನ್ನು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ್ದೇವೆ. ರೈತರಿಗೆ ₹18 ಕೋಟಿ ಹಣವನ್ನು ಬೆಳೆ ಹಾನಿಗೆ ನೀಡಲಾಗಿದೆ. ಮಡಿಕೇರಿ ಕೋಟೆಗೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹67 ಕೋಟಿ ಇದೆ. ಸರ್ಕಾರದ ಹಣದಲ್ಲಿ ಸಮಸ್ಯೆ ಇಲ್ಲ. ಸರ್ಕಾರ ಹಣವನ್ನು ಸಮರ್ಪಕವಾಗಿ ಬಿಡುಗಡೆ ಮಾಡುತ್ತಿದೆ. ಮಾರ್ಚ್ ವೇಳೆಗೆ ಆರ್ಥಿಕ ಪರಿಸ್ಥಿತಿ ಸರಿಹೋಗಲಿದೆ. ಇದರಿಂದ ಸರ್ಕಾರಿ ಕೆಲಸ ಕಾರ್ಯಗಳು ಮತ್ತಷ್ಟು ವೇಗ ಪಡೆಯಲಿದೆ ಎಂದು ಹೇಳಿದರು.

ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆ 5ನೇ ತಾಲ್ಲೂಕು ಆಗಿ ಕುಶಾಲನಗರ ಘೋಷಣೆಯಾಗಲಿದೆ. ಮೂಲಭೂತ ಸೌಕರ್ಯಗಳಿಗೆ ಅನುದಾನ ಕೂಡ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಪೊನ್ನಂಪೇಟೆ ಪ್ರತ್ಯೇಕ ತಾಲ್ಲೂಕಿಗೆ ನಾಗರಿಕ ಹೋರಾಟ ಸಮಿತಿಯಿಂದ ಒತ್ತಾಯ ಮಾಡಲಾಯಿತು. ಇದರ ಪರಿಣಾಮ ತಾಲ್ಲೂಕು ರಚನೆಯಾಗಿದೆ. ಇದರ ಪ್ರತಿಫಲ ಹೋರಾಟಗಾರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕುಶಾಲನಗರ ತಾಲ್ಲೂಕು ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ₹25 ಲಕ್ಷ ಬಿಡುಗಡೆ ಮಾಡಲಾಗಿದೆ. ಪೌತಿ ಖಾತೆಗೆ ಸಂಬಂಧಿಸಿದಂತೆ ಸುತ್ತೋಲೆ ಬಂದಿದ್ದು ಅಧಿಕಾರಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪೊನ್ನಂಪೇಟೆಗೆ ಕಾಯಂ ತಹಶೀಲ್ದಾರ್ ಆಗಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಂಡರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ವಿಧಾನ ಸಭೆಯಲ್ಲಿ ತಾಲೂಕು ರಚನೆ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಡಳಿತಾವಧಿಯಲ್ಲಿ ಅವರು ತಾಲ್ಲೂಕು ಘೋಷಣೆ ಮಾಡಿದ್ದರು. ಕಂದಾಯ ಸಚಿವರು ಈಗ ₹25 ಲಕ್ಷ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನೂತನ ಎರಡು ತಾಲೂಕುಗಳ ಅಭಿವೃದ್ಧಿಗೆ ₹10 ಕೋಟಿ ನೀಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯರಾದ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ, ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ವಿರಾಜಪೇಟೆ ತಹಶೀಲ್ದಾರ್ ನಂದೀಶ್, ಪೊನ್ನಂಪೇಟೆ ತಹಶೀಲ್ದಾರ್ ಕುಸುಮಾ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು