ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಕೊರತೆ: ಕಂಗಾಲಾದ ತರಕಾರಿ ವ್ಯಾಪಾರಸ್ಥರು

ಮೂರು ಕಡೆ ವ್ಯಾಪಾರಕ್ಕೆ ಅನುಕೂಲ: ಆದರೆ ವ್ಯಾಪಾರವೇ ಇಲ್ಲ
Last Updated 12 ಮೇ 2021, 14:05 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೋವಿಡ್ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಪೊನ್ನಂಪೇಟೆ ತಾಲ್ಲೂಕು ಆಡಳಿತ ಬುಧವಾರ ಮೂರು ಕಡೆ ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದರೂ ಗ್ರಾಹಕರೇ ಇಲ್ಲದೆ ವ್ಯಾಪಾರಸ್ಥರು ಕಂಗಾಲಾದರು.

ಜನರು ಒಂದು ಕಡೆ ಗುಂಪು ಸೇರುವುದನ್ನು ನಿಯಂತ್ರಿಸುವುದಕ್ಕಾಗಿ ಆರ್‌ಎಂಸಿ ಆವರಣ, ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ಹಾಗೂ ಬೈಪಾಸ್ ರಸ್ತೆಯ ವೆಂಕಟಪ್ಪ ಲೇಔಟ್‌ನಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿತ್ತು. ಈ ಹಿಂದೆ ಸೋಮವಾರ ಮತ್ತು ಶುಕ್ರವಾರವಿದ್ದ ವ್ಯಾಪಾರವನ್ನು ಬುಧವಾರವೂ ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ನಡೆಸುವಂತೆ ಮಾರ್ಪಾಡು ಮಾಡಲಾಗಿತ್ತು. ಇದರಿಂದ ಹರ್ಷಿತರಾದ ವ್ಯಾಪಾರಸ್ಥರು ಮಂಗಳವಾರ ಸಂಜೆ ಮೈಸೂರಿಗೆ ತೆರಳಿ ಬಹಳಷ್ಟು ತರಕಾರಿ ತಂದಿದ್ದರು.

‘ಗ್ರಾಹಕರು ಬರಬಹುದು ಎಂಬ ನಿರೀಕ್ಷೆಯೊಂದಿಗೆ ತಾಲ್ಲೂಕು ಆಡಳಿತ ಸೂಚಿಸಿದ ಸ್ಥಳದಲ್ಲಿ ತರಕಾರಿ ಅಂಗಡಿಗಳನ್ನು ತೆರೆದಿದ್ದರು. ಆದರೆ ಬೆರಳೆಣಿಕೆಯಷ್ಟು ಜನ ಮಾತ್ರ ಬಂದರು. ಕೆಲವು ಅಂಗಡಿಗಳಲ್ಲಿ ಸ್ವಲ್ಪವೂ ವ್ಯಾಪಾರ ನಡೆಯಲಿಲ್ಲ. ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಒಂದಷ್ಟು ವ್ಯಾಪಾರವಾಗುತ್ತದೆ. ಆದರೆ, ಇದನ್ನು ಯಾರ ಬಳಿ ಹೇಳವುದು’ ಎಂದು ನೊಂದು ನುಡಿದರು ವ್ಯಾಪಾರಸ್ಥರು.

ಪ್ರಾಥಮಿಕ ಶಾಲಾ ಮೈದಾನದಲ್ಲಿ ತೆರೆದಿದ್ದ ಅಂಗಡಿ ಮಾಲೀಕ ನಿಸಾರ್ ತಮ್ಮ ನೋವು ತೋಡಿಕೊಂಡು 7 ಗಂಟೆಗೆ ಅಂಗಡಿ ಹಾಕಿದ್ದೇನೆ. 9.30ಕ್ಕೆ ಮತ್ತೆ ತುಂಬಿಸಬೇಕು. ಬೆಳಗಿನಿಂದ ಬೋನಿ ಕೂಡಾ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ‌

ಪಿರಿಯಾಪಟ್ಟಣದಿಂದ ಸೊಪ್ಪಿನ ವ್ಯಾಪಾರಕ್ಕೆ ಬಂದಿದ್ದ ಮಹದೇವ, ‘ನನ್ನದೇ ಓಮಿನಿ ಕಾರಿನಲ್ಲಿ ₹ 3,500 ಮೌಲ್ಯದ ತರಕಾರಿ ಕೊಂಡು ತಂದಿದ್ದೇನೆ. ಒಬ್ಬರೂ ಕೇಳುವವರಿಲ್ಲ. ಈಗ ಕಸದ ತೊಟ್ಟಿಗೆ ಹಾಕಿ ಹೋಗಬೇಕಾಗಿದೆ’ ಎಂದು ಅಳಲು ತೋಡಿಕೊಂಡರು. ಆದರೆ ಬೈಪಾಸ್ ರಸ್ತೆಯ ಮೀನು ಮಾರಾಟ ಮಳಿಗೆ ಮುಂದೆ ಸಾಕಷ್ಟು ಜನ ಸೇರಿದ್ದರು.

ತರಕಾರಿ ಗ್ರಾಹಕರಿಗೆ ಸಂತಸ, ದಿನಸಿ ಗ್ರಾಹಕರಿಗೆ ಸಂಕಟ: ತರಕಾರಿಯನ್ನು ತಾವು ಬಯಸಿದ ಕಡೆ ಕೊಂಡು ಕೊಳ್ಳಲು ಅವಕಾಶ ನೀಡಿದ್ದರಿಂದ ತರಕಾರಿ ಗ್ರಾಹಕರು ಖುಷಿಪಟ್ಟರು. ಆದರೆ, ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಿದವರು ಒಂದು ಕಿ.ಮೀ ದೂರದಲ್ಲಿ ನಿಲ್ಲಿಸಿದ್ದ ವಾಹನಗಳತ್ತ ಹೊತ್ತು ಸಾಗಲಾಗದ ಸಂಕಟ ಅನುಭವಿಸಿದರು. ಪಡಿತರ ವಸ್ತುಗಳನ್ನು ಪಡೆದವರು ತಲೆಯ ಮೇಲೆ ಹೊತ್ತುಕೊಂಡೇ ಸಾಗಿದರು. ವಯಸ್ಸಾದವರಿಗಾದರೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೆಲವರು ಅಂಗಲಾಚಿದರು.

ಪೊಲೀಸರು ನಿರಾಳ: ಗೋಣಿಕೊಪ್ಪಲಿನ ಮುಖ್ಯ ರಸ್ತೆಗೆ ಬರುವ ಸಂಪರ್ಕ ರಸ್ತೆಯ ತಿರುವುಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಗಟ್ಟಿದ್ದರಿಂದ ಯಾವುದೇ ವಾಹನ ಪಟ್ಟಣದೊಳಗೆ ಸುಳಿದಾಡಲಿಲ್ಲ. ಜನರು ಮಾತ್ರ ನಡೆದಾಡಿದರು. ಇದರಿಂದ ಟ್ರಾಫಿಕ್ ಸಮಸ್ಯೆ ಇಲ್ಲದೆ ಪೊಲೀಸರು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನಿರಾಳವಾಗಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT