ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಬಳಕೆಗೆ ಲಭಿಸದ ‘ಕೂರ್ಗ್ ವಿಲೇಜ್‌’

ಕಟ್ಟಡ ನಿರ್ಮಿಸಿ ‘ಮೌನ‘ವಾದ ಪ್ರವಾಸೋದ್ಯಮ ಇಲಾಖೆ, ಅಂದಾಜು ₹ 98.50 ಲಕ್ಷದ ಯೋಜನೆ
Last Updated 3 ನವೆಂಬರ್ 2020, 3:07 IST
ಅಕ್ಷರ ಗಾತ್ರ
ADVERTISEMENT
""
""
""

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಇತ್ತೀಚೆಗೆ ಅಲ್ಲಿ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿದ್ದರೂ ಅಭಿವೃದ್ಧಿ ಕೆಲಸಗಳು ನಡೆದ ಮೇಲೆ ನಿರ್ವಹಣೆಯಲ್ಲಿ ಲೋಪ ಕಾಣಿಸುತ್ತಿದೆ ಎಂಬುದು ಸ್ಥಳೀಯರ ಆರೋಪ. ಅದರಲ್ಲೂ ನಗರದ ಹೃದಯ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿರುವ ‘ಕೂರ್ಗ್‌ ವಿಲೇಜ್‌’ (ಕೊಡಗು ಸಂತೆ) ಈಗ ಬಳಕೆಗೆ ಲಭ್ಯವಾಗಿಲ್ಲ.

ರಾಜಾಸೀಟ್‌ ಬಳಿಯ ಜಾಗದಲ್ಲಿ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆಯು ‘ಕೂರ್ಗ್‌ ವಿಲೇಜ್‌’ ಕಾಮಗಾರಿ ಆರಂಭಿಸಿತ್ತು. ‘ನಿರ್ಮಿತಿ ಕೇಂದ್ರ’ವು ಕಟ್ಟಿರುವ ಕಟ್ಟಡಕ್ಕೆ ಅಂದಾಜು ₹ 98.50 ಲಕ್ಷ ವೆಚ್ಚವಾಗಿದೆ. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದರೂ ಯಾವುದೇ ಒಂದು ಮಳಿಗೆಯೂ ಬಳಕೆಗೆ ಲಭಿಸಿಲ್ಲ! ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ‘ಕೂರ್ಗ್‌ ವಿಲೇಜ್‌’ನಲ್ಲಿ ಈಗ ಗಿಡಗಂಟಿಗಳು ಬೆಳೆದು ನಿಂತಿವೆ. ಕಾಡಿನ ಮಧ್ಯೆ ಮಳಿಗೆ ನಿರ್ಮಿಸಿ ಹಾಗೆಯೇ ಬಿಟ್ಟಂತೆ ಭಾಸವಾಗುತ್ತಿದೆ. ಸಾವಿರಾರು ರೂಪಾಯಿ ವ್ಯಯಿಸಿ ದೊಡ್ಡ ದೊಡ್ಡ ಬಲ್ಬ್‌ ಅಳವಡಿಸಲಾಗಿದೆ. ಆದರೆ, ಅವುಗಳು ಮಾತ್ರ ‘ಬೆಳಕು’ ನೀಡುತ್ತಿಲ್ಲ!

ಕೂರ್ಗ್‌ ವಿಲೇಜ್‌ ಮಳಿಗೆ

ಕೊಡಗು ಸಂತೆಯ ಉದ್ದೇಶ:

ಕೊಡಗಿನಲ್ಲಿ ದೊಡ್ಡ ಕೈಗಾರಿಕೆಗಳು ಇಲ್ಲ. ಜೀವನ ನಿರ್ವಹಣೆಗೆ ಜನರು ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಸಾಕಷ್ಟು ಯಶಸ್ವಿ ಆಗಿದ್ದಾರೆ. ವೈನ್‌, ಚಾಕೋಲೇಟ್‌, ಉಪ್ಪಿನಕಾಯಿ, ಅಲಂಕಾರಿ ವಸ್ತು, ಕೊಡಗಿನ ಜೇನು, ಸಾಂಬಾರ್‌ ಪದಾರ್ಥ... ಹೀಗೆ ನಾನಾ ಉತ್ಪನ್ನಗಳನ್ನು ತಯಾರಿಸಿ ಆನ್‌ಲೈನ್‌ ಮೂಲಕ ಮಾರುಕಟ್ಟೆಗೆ ಪರಿಚಯಿಸುವ ಕೆಲಸವೂ ಸದ್ದಿಲ್ಲದೆ ನಡೆಯುತ್ತಿದೆ. ಇನ್ನು ಪ್ರವಾಸಿ ತಾಣದ ಬಳಿಯೂ ಅಲ್ಲಲ್ಲಿ ಕೊಡಗಿನ ‘ಹೋಂ ಮೇಡ್‌ ಉತ್ಪನ್ನ’ಗಳ ಮಾರಾಟ ಮಳಿಗೆಗಳು ಇವೆ. ಅದರಲ್ಲೂ ದುಬಾರೆ, ನಿಸರ್ಗಧಾಮದಲ್ಲಿ ಸಾಕಷ್ಟು ಮಳಿಗೆಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ, ಮಡಿಕೇರಿ ರಾಜಾಸೀಟ್‌ ಬಳಿ ಇಂತಹ ಮಳಿಗೆಗಳ ಕೊರತೆ ಕಾಡುತ್ತಿತ್ತು. ಆಗಲೇ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಹೊಳೆದಿದ್ದು ‘ಕೂರ್ಗ್‌ ವಿಲೇಜ್‌’ ಪರಿಕಲ್ಪನೆ.

‘ಮೂರು ಕಡೆ ಒಟ್ಟು 15 ಮಳಿಗೆ ನಿರ್ಮಾಣವಾಗಿದ್ದು, ಬೇರೆ ಬೇರೆ ಇಲಾಖೆಗೆ ಮಳಿಗೆ ಹಂಚಿಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಆ ಇಲಾಖೆ ವ್ಯಾಪ್ತಿಯ ಅನುದಾನದಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುಸದೆ ಸಂತೆಯ ಉದ್ದೇಶ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಆವರಣದಲ್ಲಿರುವ ನೀರಿನ ಕೊಳ

ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆ:

‘ಈ ಸ್ಥಳದಲ್ಲಿ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಇರಲಿದೆ. ರಾತ್ರಿ ವೇಳೆ ಬಗೆ ಬಗೆಯ ವಿದ್ಯುತ್‌ ದೀಪಗಳು ಕಂಗೊಳಿಸಲಿವೆ. ಅದು ಕೂರ್ಗ್‌ ವಿಲೇಜ್‌ಗೆ ಆಕರ್ಷಣೆ ತರಲಿದೆ. ಕೊಳದ ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಕಲ್ಲು ಹಾಸು ಹಾಕಲಾಗಿದೆ. ರಾಜಾಸೀಟ್‌ ಹಾಗೂ ನೆಹರೂ ಮಂಟಪಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂರ್ಗ್ ವಿಲೇಜ್‌ಗೆ ಬಂದರೆ ಸುಂದರ ಪರಿಸರದಲ್ಲಿ ವಿಹರಿಸಿ ಒಂದೇ ಸೂರಿನಡಿ ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಕೊಡಗಿನ ಗೃಹೋಪಯೋಗಿ ವಸ್ತು ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಂತಾಗಲಿದೆ’ ಎಂದು ರಾಘವೇಂದ್ರ ಹೇಳಿದರು.

ವಿರೋಧ ವ್ಯಕ್ತವಾಗಿತ್ತು:
‘ಕೂರ್ಗ್‌ ವಿಲೇಜ್‌’ ಕಾಮಗಾರಿ ಆರಂಭಿಸಿದಾಗ ಪರಿಸರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ರಾಜಾಸೀಟ್‌ ಬಳಿಯ ಸುಂದರ ಪರಿಸರ ಹಾಳಾಗಲಿದೆ. ಅದನ್ನು ಹಾಗೆಯೇ ಬಿಡಬೇಕು. ನೀರಿನ ಕೊಳವಿದ್ದು ಅದಕ್ಕೂ ಧಕ್ಕೆ ಆಗಲಿದೆ ಎಂದು ಆಪಾದಿಸಿದ್ದರು. ಕೆಲವರು ಕಾಮಗಾರಿ ಸ್ಥಗಿತಕ್ಕೆ ಕೋರಿ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದರು.

ಕಲ್ಲಿನ ಮೆಟ್ಟಿಲು

ಸಂತ್ರಸ್ತರಿಗೆ ಹೆಚ್ಚಿನ ಅವಕಾಶ:
2018ರಲ್ಲಿ ಜಿಲ್ಲೆಯು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿತ್ತು. ಸಾಕಷ್ಟು ಮಂದಿ ನಿರಾಶ್ರಿತರಾಗಿದ್ದರು. ಅದಾದ ಮೇಲೆ ಸಾಕಷ್ಟು ಮಹಿಳೆಯರು ಜೀವನೋಪಯೋಗಕ್ಕೆ ಉಪ ಕುಸುಬು ಆರಂಭಿಸಿದ್ದರು. ಕಾಲೂರು ಮಹಿಳೆಯರು ಅಡುಗೆ ಪದಾರ್ಥಗಳ ಫುಡ್‌ ಫ್ಯಾಕ್ಟರಿಯನ್ನೇ ಆರಂಭಿಸಿದ್ದು ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಅಂತಹ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವುದು ಕೂರ್ಗ್‌ ವಿಲೇಜ್‌ನ ಉದ್ದೇಶವೂ ಆಗಿದೆ ಎಂದು ಅಧಿಕಾರಿಗಳು ಹೇಳಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶೀಘ್ರವೇ ಕೂರ್ಗ್‌ ವಿಲೇಜ್‌ ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸಲಾಗುವುದು. ಕೋವಿಡ್‌–19 ಕಾರಣಕ್ಕೆ ವಿಳಂಬವಾಗಿತ್ತು
-ರಾಘವೇಂದ್ರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಪ್ರವಾಸೋದ್ಯಮ ಇಲಾಖೆ ಪರಿಕಲ್ಪನೆ ಉತ್ತಮವಾಗಿದೆ. ಅತಿವೃಷ್ಟಿ ಹಾಗೂ ಕೋವಿಡ್‌ನಿಂದ ಯಾರ ಬಳಿಯೂ ಹಣವಿಲ್ಲ. ಯಾರಿಗೂ ಹೊರೆಯಾಗದಂತೆ ಮಳಿಗೆ ನೀಡುವ ವ್ಯವಸ್ಥೆ ಆಗಬೇಕು
-ಇಂದಿರಾ, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT