ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಯಿಂದ ಶಮನಗೊಂಡ ನೀರಿನ ಸಮಸ್ಯೆ

ಬತ್ತಿದ್ದ ವಿರಾಜಪೇಟೆಯ ಕದನೂರು ಹೊಳೆಯಲ್ಲಿ ಚಿಮ್ಮಿತು ಜಲಧಾರೆ
ಹೇಮಂತ್ ಎಂ.ಎನ್.
Published 3 ಜೂನ್ 2024, 7:21 IST
Last Updated 3 ಜೂನ್ 2024, 7:21 IST
ಅಕ್ಷರ ಗಾತ್ರ

ವಿರಾಜಪೇಟೆ: ಈ ಬೇಸಿಗೆ ಇಡೀ ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆ ಈಚೆಗೆ ಸುರಿಯುತ್ತಿರುವ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇದೇ ಮಾರ್ಚ್‌ನಿಂದ ಮೇ ಮಧ್ಯಭಾಗದವರೆಗೆ ಮಳೆ ಇಲ್ಲದೆ ಇಳೆ ಕಾದು ಜನತೆ ಬಸವಳಿದಿದ್ದರು. ನೀರಿನ ಮೂಲಗಳು ಬರಿದಾಗಿ ಜೀವರಾಶಿಗಳು ಸಂಕಷ್ಟವನ್ನು ಎದುರಿಸುವಂತಾಗಿತ್ತು. ಹನಿ ಮಳೆಯಿಲ್ಲದೆ ಕೆಲವೆಡೆ ಕಾಫಿ ಗಿಡಗಳು ಬಾಡಿ ಹೋಗಿದ್ದವು. ವಿರಾಜಪೇಟೆ ಪಟ್ಟಣಕ್ಕೆ ನೀರುಣಿಸುವ ಭೇತ್ರಿ ಕಾವೇರಿ ಹೊಳೆಯ ಹರಿವು ಸಂಪೂರ್ಣ ಕ್ಷೀಣಗೊಂಡಿದ್ದರೆ, ಕೆಲ ವರ್ಷಗಳ ಹಿಂದೆ ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಕದನೂರು ಹೊಳೆಯು ಹರಿವು  ಸ್ತಬ್ಧವಾಗಿತ್ತು. ಕೆರೆಕಟ್ಟೆ ಬಾವಿಗಳಲ್ಲಿ ನೀರಿನ ಮಟ್ಟ ತಳ ಕಂಡಿತ್ತು. ಬರ ಪರಿಸ್ಥಿತಿ ಇದೇ ರೀತಿಯಾಗಿ ಕೆಲವೇ ಕೆಲವು ದಿನಗಳು ಮುಂದುವರಿದಿದ್ದರೆ ಪರಿಸ್ಥಿತಿ ಅತ್ಯಂತ ಗಂಭೀರವಾಗುತ್ತಿತ್ತು.

ಆದರೆ, ಕೆಲ ದಿನಗಳಿಂದ ಅಂದರೆ ಮೇ ಮಧ್ಯಭಾಗದಿಂದ ಸುರಿಯುತ್ತಿರುವ ಮಳೆಯು ಜೀವಜಲವಾಗಿ ಜೀವರಾಶಿಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ. ಇಳೆ ತಂಪುಗೊಂಡಿರುವುದು ಮಾತ್ರವಲ್ಲ, ಬತ್ತಿರುವ ಜಲಮೂಲಗಳಲ್ಲಿ ಜೀವಸೆಲೆ ಕಾಣಿಸಿಕೊಂಡಿದೆ. ಮಳೆಯಿಂದ ಬತ್ತಿಹೋಗಿದ್ದ ಕೆರೆ ಬಾವಿಗಳಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದೆ.

ವಿಶೇಷವೆಂದರೆ ಕೇವಲ 2 ವಾರಗಳ ಕಾಲ ಸುರಿದ ಮಳೆಯು ಬತ್ತಿಹೋಗಿದ್ದ ಕದನೂರು ಹೊಳೆಯಲ್ಲಿ ಜೀವಕಳೆ ತುಂಬಿದ್ದು, ಮತ್ತೆ ನೀರು ಹರಿಯತೊಡಗಿದೆ. ನಿಧಾನವಾಗಿ ಅಂರ್ತಜಲದ ಮಟ್ಟವು ಏರಿಕೆಯಾಗುತ್ತಿದೆ. ಇದರಿಂದಾಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಬವಣೆಯು ಇಲ್ಲವಾಗಿದೆ. ಜೊತೆಗೆ, ಮತ್ತೆ ಹಸಿರಿನಿಂದ ಕಾಫಿ ತೋಟ ಸೇರಿದಂತೆ ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ವಿರಾಜಪೇಟೆ ಸಮೀಪದ ಕದನೂರು ಹೊಳೆ ಸುಮಾರು 20 ದಿನಗಳ ಹರಿವು ನಿಲ್ಲಿಸಿ ಬತ್ತಿಹೋಗಿತ್ತು 
ವಿರಾಜಪೇಟೆ ಸಮೀಪದ ಕದನೂರು ಹೊಳೆ ಸುಮಾರು 20 ದಿನಗಳ ಹರಿವು ನಿಲ್ಲಿಸಿ ಬತ್ತಿಹೋಗಿತ್ತು 
ಕುಶಾಲನಗರದಲ್ಲಿ ಬತ್ತಿದ್ದ ಕಾವೇರಿ ನದಿ ಈಚೆಗೆ ಸುರಿದ ಮಳೆಯಿಂದ ಮತ್ತೆ ತುಂಬುತ್ತಿದೆ
ಕುಶಾಲನಗರದಲ್ಲಿ ಬತ್ತಿದ್ದ ಕಾವೇರಿ ನದಿ ಈಚೆಗೆ ಸುರಿದ ಮಳೆಯಿಂದ ಮತ್ತೆ ತುಂಬುತ್ತಿದೆ

ವಿರಾಜಪೇಟೆ, ಕುಶಾಲನಗರದಲ್ಲಿ ಎದುರಾಗಿತ್ತು ನೀರಿನ ಆತಂಕ ಮಳೆ ಇಲ್ಲದೇ ಕಂಗಾಲಾಗಿದ್ದ ಜನತೆ ಮಳೆ ಬಂದಿದ್ದರಿಂದ ಕಡಿಮೆಯಾಯಿತು ನೀರಿನ ಸಮಸ್ಯೆ

ಸುರಿಯುತ್ತಿರುವ ಮಳೆಯಿಂದಾಗಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬೇಸಿಗೆಯಲ್ಲಿ ಪುರಸಭೆಯ ಕೆಲವೆಡೆ ಕುಡಿಯುವ ನೀರಿನ ಕೊಂಚ ಸಮಸ್ಯೆಯಿತ್ತಾದರೂ ಇದೀಗ ಸುರಿಯುತ್ತಿರುವ ಮಳೆಯಿಂದ ಸಮಸ್ಯೆ ಪರಿಹಾರವಾಗಿದೆ

- ಚಂದ್ರಕುಮಾರ್ ಮುಖ್ಯಾಧಿಕಾರಿ ವಿರಾಜಪೇಟೆ ಪುರಸಭೆ

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರಿಂದ ನೀರಿನ ಸಮಸ್ಯೆ ಎದುರಿಸಬೇಕಾಯಿತು. ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಸಲಾಯಿತು. ಈಗ ಮಳೆ ಬಂದಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ

- ಕೃಷ್ಣಪ್ರಸಾದ್ ಮುಖ್ಯಾಧಿಕಾರಿ ಪುರಸಭೆ ಕುಶಾಲನಗರ

ಮಳೆಯಿಂದ ನಿರಾಳರಾದ ಕುಶಾಲನಗರದ ಜನತೆ ರಘುಹೆಬ್ಬಾಲೆ ಕುಶಾಲನಗರ: ಬೇಸಿಗೆ ಧಗೆಯ ತೀವ್ರತೆಯಿಂದ ಸಂಪೂರ್ಣವಾಗಿ ಕ್ಷೀಣಗೊಂಡಿದ್ದ ಕಾವೇರಿ ನದಿಯಲ್ಲಿ ವರುಣನ ಕೃಪೆಯಿಂದ ಇದೀಗ ನೀರಿನ‌ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು ಕುಡಿಯುವ ನೀರಿನ‌ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿದಂತೆ ಆಗಿದೆ. ಈ ವರ್ಷ ಬೇಸಿಗೆಯ ತಾಪಮಾನಕ್ಕೆ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿ ಕಲ್ಲು ಬಂಡೆಗಳು ಮಾತ್ರ ಗೋಚರಿಸುತ್ತಿದ್ದವು. ಕೊಳವೆಬಾವಿಗಳಲ್ಲೂ ನೀರಿನಮಟ್ಟ ಕಡಿಮೆಯಾಗಿ ನೀರಿಗೆ ತೊಂದರೆ ಉಂಟಾಗಿತ್ತು. ಪ್ರತಿ ವರ್ಷ ಜಲಮಂಡಳಿ ವತಿಯಿಂದ ಕಾವೇರಿ ನದಿಗೆ ಅಡ್ಡಲಾಗಿ ಮರಳು ಚೀಲಗಳಿಂದ ಕಟ್ಟೆ ಕಟ್ಟಿ ನೀರು ಸಂಗ್ರಹ ಮಾಡಿ ಜನರಿಗೆ ನೀರು ಪೂರೈಕೆ ಮಾಡುತ್ತಿದ್ದರು. ಆದರೆ ಈ ಬಾರಿ ನದಿಯಲ್ಲಿ ನೀರಿಲ್ಲದೇ ನೀರು ಪೂರೈಕೆ ಸ್ಥಗಿತಗೊಂಡಿತು. ಜನರು ಕುಡಿಯುವ ನೀರಿಗೆ ತೀವ್ರ ಬವಣೆ ಪಡೆಬೇಕಾದ ಪರಿಸ್ಥಿತಿ ಎದುರಾಗಿತ್ತು. ತಾಲ್ಲೂಕು ಟಾಸ್ಕ್ ಫೋರ್ಸ್ ಮತ್ತು ಪುರಸಭೆ ಹಾಗೂ ಸಂಘಸಂಸ್ಥೆಗಳು 2 ತಿಂಗಳ ಕಾಲ ನಿರಂತರವಾಗಿ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಿದವು. ಸದಾ ಹಸಿರಿನಿಂದ ಕೂಡಿರುವ ಮಲೆನಾಡು ಪ್ರದೇಶವಾದ ಕೊಡಗಿನಲ್ಲಿ ಈ ಬಾರಿ ಉತ್ತರ ಕರ್ನಾಟಕ ಪ್ರದೇಶದ ವಾತಾವರಣ ಕಂಡುಬಂದಿತು. ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ಹಾಗೂ ಹಾರಂಗಿ ನದಿಗಳಿಗೆ ಜೀವಕಳೆ ಬಂದಿದೆ. ಎಲ್ಲೆಡೆ ಮರ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿವೆ. ತಂಪಾದ ವಾತಾವರಣ ಇದೆ. ನದಿಯಲ್ಲಿ ನೀರಿನ‌ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ನೀರು ಪೂರೈಕೆಗೆ ಅನುಕೂಲವಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT