ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಬೇಸಿಗೆಗೂ ಮುನ್ನ ಬತ್ತಿದ ಚಿಕ್ಲಿಹೊಳೆ ಜಲಾಶಯ

ಕಾಣಿಸಲಾರಂಭಿಸಿವೆ ಪುರಾತನ ದೇಗುಲಗಳು
Published 28 ನವೆಂಬರ್ 2023, 6:39 IST
Last Updated 28 ನವೆಂಬರ್ 2023, 6:39 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ‘ನಯಾಗಾರ್ ಫಾಲ್ಸ್’ ಎಂದೇ ಹೆಸರಾಗಿರುವ ಚಿಕ್ಲಿಹೊಳೆ ಜಲಾಶಯದಲ್ಲಿ ಬೇಸಿಗೆಗೂ ಮುನ್ನವೇ ನೀರು ಬತ್ತುತ್ತಿದ್ದು, ಮುಳುಗಡೆಯಾಗಿದ್ದ ದೇಗುಲಗಳು ಕಾಣಿಸಲಾರಂಭಿಸಿವೆ.

ಬೇಸಿಗೆಯಲ್ಲಿ ಮಾತ್ರ ಮುಳುಗಡೆಯಾಗಿದ್ದ ಹಳೆಯ ಶಿವ ದೇಗುಲದ ಗೋಪುರ ಮಾತ್ರ ಕಾಣಿಸುತ್ತಿತ್ತು. ಆದರೆ, ಈಗ ಸಂಪೂರ್ಣ ದೇಗುಲವೇ ಕಾಣಿಸುತ್ತಿದೆ.

‘ಈ ವರ್ಷ ಕೊಡಗಿನಲ್ಲಿ ಉಂಟಾಗಿರುವ ಮಳೆಕೊರತೆಯಿಂದ ಜಲಾಶಯ ಬಹುಬೇಗನೇ ಖಾಲಿಯಾಗುತ್ತಿದೆ. ಗರಿಷ್ಠ 0.18 ಟಿಎಂಸಿ ಅಡಿ ನೀರು ಸಂಗ್ರಹವುಳ್ಳ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 0.16 ಅಡಿ ಟಿಎಂಸಿ ಅಡಿ ನೀರಿದೆ. ಇಷ್ಟು ಕಡಿಮೆ ನೀರು ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಸಂಗ್ರಹವಾಗುತ್ತಿತ್ತು’ ಎಂದು ಜಲಾಶಯದ ಎಂಜಿನಿಯರ್‌ ಪುಟ್ಟಸ್ವಾಮಿ ‘‍ಪ್ರಜಾವಾಣಿ’ಗೆ ತಿಳಿಸಿದರು.

ಯಾವುದೇ ಕ್ರೆಸ್ಟ್‌ಗೇಟ್‌ಗಳನ್ನು ಹೊಂದಿರದ ಜಲಾಶಯದಲ್ಲಿ ಕೇವಲ ಬಾವಿಯಾಕಾರದ ಮಾದರಿಯಲ್ಲಿ ಏಕೈಕ ದೊಡ್ಡ ತೂಬು ಇದೆ. ಜಲಾಶಯ ತುಂಬಿದಾಗ ನೀರು ತಾನೆತಾನಾಗಿ ಅಣೆಕಟ್ಟೆಯ ಹೊರಗೆ ಹರಿಯುತ್ತದೆ. ಈ ವೇಳೆ ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಜಲಧಾರೆ ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ.

ಜಲಾಶಯದಲ್ಲಿ ಮಾರ್ಚ್‌ವರೆಗೂ ನೀರು ಇರುತ್ತಿತ್ತು. ನಂತರ ಮುಂಗಾರುಪೂರ್ವ ಮಳೆ ಸುರಿದು ಜಲಾಶಯ ಬರಿದಾಗುತ್ತಿರಲಿಲ್ಲ. ಸುತ್ತಮುತ್ತಲ ಗ್ರಾಮಗಳ ಕೊಳವೆಬಾವಿಗಳಲ್ಲಿ ಸದಾ ನೀರು ಇರುತ್ತಿತ್ತು. ಆದರೆ, ಈಗ ಬಹುಬೇಗನೇ ನೀರು ಖಾಲಿಯಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಸಮೀಪದಲ್ಲೇ ದಟ್ಟವಾದ ಅರಣ್ಯವಿದ್ದು, ಪ್ರಾಣಿಗಳು ನೀರು ಕುಡಿಯುವುದಕ್ಕೂ ಇದು ಆಸರೆಯಾಗಿದೆ. ಈಗಿನ ಪರಿಸ್ಥಿತಿಯಿಂದ, ಅವುಗಳಿಗೂ ನೀರಿನ ತತ್ವಾರ ಉಂಟಾಗಬಹುದು ಎಂಬ ಭೀತಿಯೂ ಎದುರಾಗಿದೆ.

‘ಪರಿಸ್ಥಿತಿ ನೋಡಿದರೆ ಜನವರಿ ಹೊತ್ತಿಗೆ ನೀರು ಸಂಪೂರ್ಣ ಬತ್ತಿ ಹೋಗಬಹುದು ಎಂಬ ಆತಂಕ ಉಂಟಾಗಿದೆ’ ಎಂದು ಸ್ಥಳೀಯ ಶ್ರೀನಿವಾಸ ತಿಳಿಸಿದರು.

ಕೊಡಗಿನ ಚಿಕ್ಲಿಹೊಳೆ ಜಲಾಶಯದಲ್ಲಿ ನೀರು ಕಡಿಮೆಯಾಗಿದ್ದು ಮುಳುಗಡೆಯಾಗಿದ್ದ ದೇಗುಲಗಳು ಕಾಣಿಸುತ್ತಿದೆ
ಕೊಡಗಿನ ಚಿಕ್ಲಿಹೊಳೆ ಜಲಾಶಯದಲ್ಲಿ ನೀರು ಕಡಿಮೆಯಾಗಿದ್ದು ಮುಳುಗಡೆಯಾಗಿದ್ದ ದೇಗುಲಗಳು ಕಾಣಿಸುತ್ತಿದೆ

ಜಿಲ್ಲೆಯಲ್ಲಿ ಹಿಂಗಾರು, ಮುಂಗರು ಮಳೆಯ ಕೊರತೆ ಜಲಾಶಯ ಸಂಪೂರ್ಣ ಬತ್ತಿಹೋಗುವ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT