ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ಮಳೆ: ಕಾವೇರಿ ನದಿ ನೀರಿನ ಹರಿವು ಹೆಚ್ಚಳ

ಜಿಲ್ಲೆಯ ವಿವಿಧೆಡೆ ಗುಡುಗು–ಸಿಡಿಲು ಸಹಿತ ಮಳೆ
Last Updated 3 ಮೇ 2021, 3:28 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಜಿಲ್ಲೆಯ ನಾಪೋಕ್ಲು, ಗೋಣಿಕೊಪ್ಪಲು, ವಿರಾಜಪೇಟೆ, ಸೋಮವಾರಪೇಟೆ ಸುತ್ತಮುತ್ತ ಭಾನುವಾರ ಉತ್ತಮ ಮಳೆಯಾಗಿದೆ.

ನಾಪೋಕ್ಲು ಪಟ್ಟಣ ಸೇರಿದಂತೆ ಸಮೀಪದ ಬಲಮುರಿ, ಬೇತು, ಹೊದ್ದೂರು, ಮೂರ್ನಾಡು ಹಾಗೂ ಕಿಗ್ಗಾಲು ಗ್ರಾಮಗಳಲ್ಲಿ ಭಾನುವಾರ ಮಳೆಯಾಗಿದೆ.

ಗುಡುಗು-ಸಿಡಿಲು ಅಬ್ಬರದೊಂದಿಗೆ ಮಧ್ಯಾಹ್ನ ಮಳೆ ಸುರಿಯಿತು. ಈ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಮಳೆಯಾಗಿದ್ದು, ಸುಮಾರು 15 ಮಿ.ಮೀ ದಾಖಲಾಗಿದೆ.

ಮಧ್ಯಾಹ್ನ 3 ಗಂಟೆಯಿಂದ ಮುಕ್ಕಾಲು ಗಂಟೆ ಕಾಲ ಮಳೆ ಸುರಿಯಿತು. ನಾಪೋಕ್ಲು ವ್ಯಾಪ್ತಿಯಲ್ಲಿ ಎರಡು-ಮೂರು ದಿನಗಳಿಂದ ನಿತ್ಯವೂ ಮಳೆಯಾಗುತ್ತಿದೆ. ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಹಲವು ಬೆಳೆಗಾರರು ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಅಣಿಯಾಗಿದ್ದಾರೆ.

ನಿತ್ಯ ಮಳೆ ಆಗುತ್ತಿರುವುದರಿಂದ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಇದು ಸಕಾಲ ಎಂದು ಬಲಮುರಿ ಗ್ರಾಮದ ಕಾಫಿ ಬೆಳೆಗಾರ ಸುರೇಶ್ ಹೇಳಿದರು.

ಕೆಲವು ದಿನಗಳಿಂದ ಮಳೆ ಆಗುತ್ತಿರುವುದರಿಂದ ಬಲಮುರಿಯಲ್ಲಿ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂತು.

ಆಲಿಕಲ್ಲು ಮಳೆ
ಸುಂಟಿಕೊಪ್ಪ:
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆ ಆಯಿತು.

ಭಾನುವಾರ ಬೆಳಿಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ ವೇಳೆಗೆ ಬದಲಾಯಿತು. ದಿಢೀರನೆ ಮೋಡ ಕವಿದು ಸಿಡಿಲಿನ ಆರ್ಭಟದೊಂದಿಗೆ ರಭಸದ ಮಳೆಯಾಯಿತು. ಕೆಲವೆಡೆ ಆಲಿಕಲ್ಲು ಬಿದ್ದವು.

ಗಾಳಿ ಮಳೆಗೆ ಹೋಬಳಿ ವ್ಯಾಪ್ತಿಯ ಹಲವೆಡೆ ಮರಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.

ರಸ್ತೆಗೆ ಬಿದ್ದ ಮರ
ಸಿದ್ದಾಪುರ:
ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.

ಗುಹ್ಯ, ಕರಡಿಗೋಡು, ಸಿದ್ದಾಪುರ ಭಾಗದಲ್ಲಿ ಕೆಲ ಕಾಲ ಆಲಿಕಲ್ಲು ಮಳೆ ಸುರಿದಿದೆ.

ಗಾಳಿ ಮಳೆಗೆ ನೆಲ್ಯಹುದಿಕೇರಿ ಜ್ಯೋತಿನಗರ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಉತ್ತಮ ಮಳೆ
ಗೋಣಿಕೊಪ್ಪಲು:
ಮಧ್ಯಾಹ್ನ 3 ಗಂಟೆ ವೇಳೆಗೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು. ಬೆಳಗ್ಗಿನಿಂದ ಚುರುಕಾದ ಬಿಸಿಲಿತ್ತು, ಬಳಿಕ ದಟ್ಟ ಮೋಡ ಕವಿದು ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿಯಿತು. ಹಾತೂರು, ಪಾಲಿಬೆಟ್ಟ, ಅತ್ತೂರು, ಮಾಯಮುಡಿ, ತಿತಿಮತಿ ಮೊದಲಾದ ಭಾಗಗಳಲ್ಲಿ ಮಳೆ ಆಗಿದೆ.

ಗೋಣಿಕೊಪ್ಪಲು ಸುತ್ತಮುತ್ತ ಒಂದು ವಾರದಿಂದ ನಿತ್ಯವೂ ಮಳೆ ಬೀಳುತ್ತಿದ್ದು, ವಾತಾವರಣ ತಂಪಾಗಿದೆ. ಭೂಮಿಯ ಒಡಲು ಹಸಿರಾಗಿದೆ.

ರೈತರಲ್ಲಿ ಹರ್ಷ
ಸೋಮವಾರಪೇಟೆ:
ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದ್ದು, ರೈತರು ಹರ್ಷಗೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೂಚನೆ ನೀಡುತ್ತಿತ್ತು, ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಯಿತು. ಹಸಿಮೆಣಸು ಮತ್ತು ಶುಂಠಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು.

ಕಾಫಿ ಬೆಳೆಗಾರರಿಗೆ ಮಳೆಯ ಅವಶ್ಯಕತೆ ಇದ್ದು, ಈಗ ಸುರಿದ ಸಾಧಾರಣ ಮಳೆ ನೆಮ್ಮದಿ ತಂದಿದ್ದು, ಕಾಳು ಮೆಣಸಿಗೂ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT