ಮಂಗಳವಾರ, ನವೆಂಬರ್ 29, 2022
29 °C
ಸೋಮವಾರಪೇಟೆ, ಗೋಣಿಕೊಪ್ಪಲಿನಲ್ಲಿ ಸಾಹಸ ಕ್ರೀಡೆಗಳ ರಸದೌತಣ

ಮೈನವಿರೇಳಿಸಿದ ಆಫ್ ರೋಡ್ ರ‍್ಯಾಲಿ, ಆಟೊಕ್ರಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಶನಿವಾರ ಆಟೊಕ್ರಾಸ್‌ ಹಾಗೂ ಆಫ್‌ರೋಡ್‌ ರ‍್ಯಾಲಿಗಳು ಸಾಹಸಕ್ರೀಡಾ ಪ್ರಿಯರಿಗೆ ರಸದೌತಣವನ್ನೇ ನೀಡಿದವು. ಮೈನವಿರೇಳಿಸಿದ ಈ ಎರಡೂ ಸ್ಪರ್ಧೆಗಳಲ್ಲಿ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸಾವಿರಾರು ಮಂದಿ ಈ ಎರಡೂ ಅಪರೂಪದ ಕ್ರೀಡೆಗಳನ್ನು ಕಣ್ತುಂಬಿಕೊಂಡರು.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಮತ್ತು ಕೊಡಗು ಗಡಿ ಭಾಗದಲ್ಲಿ ಟೀಮ್ 12 ಆಫ್ ರೋಡರ್ಸ್ ಮತ್ತು ವೈಟ್ ಲೋಟಸ್ ಎಂಟರ್ಟ್ರೈನರ್ ವತಿಯಿಂದ ನಡೆದ ‘ಜೀಪ್ ಆಫ್ ರೋಡ್ ರ‍್ಯಾಲಿ’ಯಲ್ಲಿ ಕೆಸರು ಮಿಶ್ರಿತ ರಸ್ತೆಯಲ್ಲಿ ವಾಹನ ಚಾಲನೆ ಮಾಡಿ ಗಮನ ಸೆಳೆದರು.

ಸಾಕಷ್ಟು ಕಡಿದಾದ ಹಾಗೂ ಇಕ್ಕಟ್ಟಾದ ಕಚ್ಚಾ ರಸ್ತೆಯಲ್ಲಿ ಸ್ವಲ್ಪ ಅಜಾಗರೂಕತೆಯಾದರೂ, ಪ್ರಪಾತಕ್ಕೆ ವಾಹನಗಳು ಉರುಳುವ ಸಾಧ್ಯತೆ ಇತ್ತು. ಕಚ್ಚಾರಸ್ತೆಯಲ್ಲಿದ್ದ ಕಲ್ಲು, ಮರಗಳ ನಡುವೆ ವಾಹನಗಳು ಸಾಗಬೇಕಿತ್ತು. ಸಾಕಷ್ಟು ವಾಹನಗಳು ದಾರಿ ಮಧ್ಯೆ ಕೆಟ್ಟು ನಿಂತರೆ, ದುರಸ್ತಿ ಮಾಡಲು ಮೆಕ್ಯಾನಿಕ್‌ಗಳು ಅಲ್ಲಲ್ಲೆ ಸಂಚರಿಸುತ್ತಿದ್ದರು. ಇದರೊಂದಿಗೆ ಸುಂದರವಾದ ಪಶ್ಚಿಮಘಟ್ಟ ಪರಿಸರದಲ್ಲಿ ವಾಹನಗಳ ಸಾಲು ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ಸಂಚರಿಸುತ್ತಿದ್ದವು.

ಬೆಂಕಳ್ಳಿ ಗ್ರಾಮದಲ್ಲಿ ಹೊಳೆಯೊಳಗೆ ವಾಹನ ಚಾಲನೆ ಮಾಡಿದ್ದು, ಅತೀ ಹೆಚ್ಚು ಮಳೆ ಬೀಳುವ ಕುಡಿಗಾಣ ಗ್ರಾಮದ ಕೊಂಕಿನ ಬೆಟ್ಟವೇರುವಂತಹ ಸವಾಲಿನ ದೃಶ್ಯಗಳು ಮೈನವಿರೇಳಿಸಿದವು. ಕೆಸಿನಹಡ್ಲು ಎಂಬ ಸ್ಥಳದಲ್ಲಿ ಬಹುತೇಕ ವಾಹನಗಳು ಹೂತುಕೊಂಡವು. ನಂತರ, ಟ್ರಾಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರಾಕ್‌ಗಳಿಗೆ ತರಲಾಯಿತು.

ಕೆಲವರು ಕೆಸರಿನ ನೀರಿನಲ್ಲಿ ಒದ್ದಾಡಿ, ಮೇಲೆ ಬರಲು ಹರಸಾಹಸಪಟ್ಟರು. ಕೆಲ ವಾಹನಗಳು ಕೆಟ್ಟು ನಿಂತು ಸವಾರರು ಪರದಾಡಿದರು. ರಾಜ್ಯದ ವಿವಿಧ ಭಾಗಗಳಿಂದ 110 ವಾಹನಗಳಲ್ಲಿ 250 ರಷ್ಟು ಜನರು ಭಾಗವಹಿಸಿದ್ದರು.

ರ‍್ಯಾಲಿಗೆ ಡಾ.ಮಂಥರ್ ಗೌಡ ಹಾಗೂ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು.

ಮಂಥರ್ ಗೌಡ ಮಾತನಾಡಿ, ‘ಕೊಡಗಿನ ಸಾಮಾನ್ಯ ರಸ್ತೆಗಳಲ್ಲಿಯೇ ವಾಹನ ಚಾಲನೆ ಮಾಡುವುದು ಕಷ್ಟವಾಗಿರುವಾಗ, ಇಂತಹ ಕ್ಲಿಷ್ಟಕರ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ಕೆಲಸ. ಪ್ರಕೃತ್ತಿಯ ನಡುವೆ ಸಾಹಸಮಯ ವಾಹನ ಚಾಲನೆ ಮಾಡುವುದು ಕಷ್ಟವಾದರೂ, ಮನಸ್ಸಿಗೆ ಹಿತವಾಗಿದೆ’ ಎಂದರು.

ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ‘ಕಾಫಿ ಬೆಳೆಗಾರರಾದ ಕೊಡಗಿನ ಪ್ರಕೃತಿಯ ಸೌಂದರ್ಯವನ್ನು ಹೊರ ರಾಜ್ಯ ಹಾಗೂ ಜಿಲ್ಲೆಯ ರ‍್ಯಾಲಿ ಪಟುಗಳು ಸವಿಯಲು ಇದು ಸಹಕಾರಿಯಾಗಿದೆ’ ಎಂದರು.

ವಣಗೂರು ಕೂಡುರಸ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ರ‍್ಯಾಲಿ ಪ್ರಾಯೋಜಕರಾದ ಪಿ.ಕೆ.ರವಿ, ಮಂಜೂರು ತಮ್ಮಣಿ, ಬಿ.ಜೆ.ದೀಪಕ್, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಉದಯ್ ಹಿರಿಕರ ಇದ್ದರು. ಬೆಂಕಳ್ಳಿ ಗ್ರಾಮಕ್ಕೆ ಶಾಸಕ ಅಪ್ಪಚ್ಚುರಂಜನ್ ಬಂದಿದ್ದರು.

ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ವಿಜಯ್ ಮಾತನಾಡಿ, ‘ಕಠಿಣ ರಸ್ತೆಯಲ್ಲಿ ಜೀಪು ಓಡಿಸುವುದು ಚಾಲೆಂಜಿಂಗ್ ಆಗಿತ್ತು. ಕೊಡಗಿನ ಪ್ರಕೃತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಕುಟುಂಬ ಸಮೇತ ಬಂದಿದ್ದೇವೆ. ಬೆಂಗಳೂರಿನಿಂದ ಹೆಚ್ಚಿನ ಸ್ನೇಹಿತರು ಭಾಗವಹಿಸಿದ್ದಾರೆ. ಒಮ್ಮೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯ ನೋಡಿದವರು ಮುಂದೆಂದೂ ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.