ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ‍ಜನರ ಪರದಾಟ

ಕುಶಾಲನಗರ: ನಿರಂತರ ಮಳೆಯಿಂದ ಕಂದು ಬಣ್ಣಕ್ಕೆ ತಿರುಗಿದ ನದಿ ನೀರು
Last Updated 21 ಮೇ 2021, 3:31 IST
ಅಕ್ಷರ ಗಾತ್ರ

ಕುಶಾಲನಗರ: ನೂತನ ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣದಲ್ಲಿ ಕೊರೊನಾ ಆತಂಕದ ನಡುವೆ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಪಟ್ಟಣದಲ್ಲಿ 45ಕ್ಕೂ ಹೆಚ್ಚು ಬಡಾವಣೆಗಳಿವೆ. ಜನಸಂಖ್ಯೆಯೂ ಹೆಚ್ಚಳವಾಗಿದ್ದು, ಸುಮಾರು 15 ರಿಂದ 20 ಸಾವಿರ ಜನಸಂಖ್ಯೆ ಹೊಂದಿದೆ. ಜಲಮಂಡಳಿ ವತಿಯಿಂದ ಕಾವೇರಿ ನದಿಗೆ ಅಡ್ಡಲಾಗಿ ಮರಳಿನ ಚೀಲಗಳಿಂದ ಕಟ್ಟೆ ಕಟ್ಟಿ, ನೀರು ಪೂರೈಸುತ್ತಿದೆ.

ಜನಸಂಖ್ಯೆ ಆಧಾರದಲ್ಲಿ ಪ್ರತಿನಿತ್ಯ 40 ಲಕ್ಷ ಲೀಟರ್ ನೀರಿನ ಅಗತ್ಯ ಇದೆ. ಆದರೆ, ಈಗ ಕೇವಲ 28 ಲಕ್ಷ ಲೀಟರ್ ನೀರು ಪೂರೈಸಲು ಮಾತ್ರ ಸಾಧ್ಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ನದಿ ನೀರಿನಲ್ಲಿ ಮಳೆನೀರು ಸೇರಿಕೊಂಡು ಕಂದು ಬಣ್ಣಕ್ಕೆ ತಿರುಗಿದೆ.

ಜಲಮಂಡಳಿ ವತಿಯಿಂದ ಪೂರೈಸುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲದ ಹಿನ್ನೆಲೆಯಲ್ಲಿ ಜನರು ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಹಾಗೂ ಆಸ್ಪತ್ರೆ ಬಳಿ ಇರುವ ಕನ್ನಿಕಾ ಸಹಕಾರ ಸಂಘದ ಕುಡಿಯುವ ನೀರಿನ ಘಟಕದ ಮುಂದೆ ಜನರು ಸಾಲಾಗಿ ನಿಂತು ಕ್ಯಾನ್‌ಗಳಲ್ಲಿ ನೀರು ತೆಗೆದುಕೊಂಡು
ಹೋಗುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾರಕ್ಕೆ ಕೇವಲ ಮೂರು ದಿನಗಳು ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ನೀಡಲಾಗಿದೆ. ಈ ಬಿಡುವಿನ ವೇಳೆಯಲ್ಲಿಯೇ ಕುಡಿಯುವ ನೀರು ತರಬೇಕಾಗಿದೆ. ಮಲೆನಾಡಿನಲ್ಲಿಯೇ ಜೀವಜಲಕ್ಕಾಗಿ ಜನ ಪರದಾಡುವ ಸ್ಥಿತಿ ಉದ್ಭವಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.

‘ಬಿಸಿಲು, ಮಳೆ ಎನ್ನದೆ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ಜನರು ಕ್ಯಾನ್ ಹಿಡಿದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಜೊತೆಗೆ ವಿದ್ಯುತ್ ಸಮಸ್ಯೆ ಕೂಡ ಸಮಸ್ಯೆ ಉಂಟು ಮಾಡುತ್ತಿದೆ’ ಎಂದು ನಿವಾಸಿ ರಮೇಶ್ ದೂರುತ್ತಾರೆ.

ಗ್ರಾಮೀಣ ಜನರಿಗೂ ನೀರಿನ ಸಮಸ್ಯೆ: ಸಮೀಪದ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ಮಾದಾಪಟ್ಟಣ, ಗುಡ್ಡೆಹೊಸೂರು, ಬಸವನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ‌ ಘಟಕ ಸ್ಥಾಪಿಸಲಾಗಿದ್ದು, ವೋಲ್ಟೇಜ್ ಕೊರತೆಯಿಂದ ಕೆಲವು ಘಟಕಗಳು ಸ್ಥಗಿತಗೊಂಡಿವೆ. ಇದರಿಂದ ಜನರು ನೀರಿಗೆ ಪರದಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ ವತಿಯಿಂದ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದ್ದು, ಜನರು ಕೋವಿಡ್‌ ಮರೆತು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಕೆಲವೆಡೆ ಟ್ಯಾಂಕ್‌ರ್‌ಗಳಿಂದ ಗ್ರಾಮಕ್ಕೆ ನೀರು ಪೂರೈಸುವ ಕೆಲಸ ಮಾಡುತ್ತಿದ್ದು, ನೀರಿಗಾಗಿ ಜನ ಗುಂಪು ಸೇರುತ್ತಿದ್ದಾರೆ.

‘ಕೊರೊನಾ ಹರಡುವ ಆತಂಕ ಜನರಲ್ಲಿ ಕಾಣುತ್ತಿಲ್ಲ. ಮಾಸ್ಕ್, ಅಂತರ ಇಲ್ಲದೇ ನೀರಿಗಾಗಿ ಜನ ಮುಗಿಬೀಳುತ್ತಿದ್ದಾರೆ’ ಎಂದು
ಗ್ರಾಮದ ಹಿರಿಯರಾದ ಸೋಮಣ್ಣ ಆತಂಕ ವ್ಯಕ್ತಪಡಿಸುತ್ತಾರೆ.

ಶೀಘ್ರ ಕ್ರಮದ ಭರವಸೆ: ‘ಶಿರಂಗಾಲ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ನೀರು ಶುದ್ಧೀಕರಣವಾಗುತ್ತಿಲ್ಲ. ಇದರಿಂದ ಜನರಿಗೆ ಸಮಸ್ಯೆ ಉಂಟಾಗಿದೆ. ನೀರಿನ ಘಟಕ ದುರಸ್ತಿಗಾಗಿ ಈಗಾಗಲೇ ಸಂಬಂಧಿಸಿದ ಘಟಕದ ನಿರ್ವಾಹಕರು ಹಾಗೂ ತಾಂತ್ರಿಕ ಸಲಹೆಗಾರರಿಗೆ ಸೂಚನೆ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ತಾಂತ್ರಿಕ ಸಲಹೆಗಾರರು ಬರಲು ಸಾಧ್ಯವಾಗಿಲ್ಲ. ಶೀಘ್ರವೇ ಘಟಕ ದುರಸ್ತಿಪಡಿಸಲು ಕ್ರಮ‌ ಕೈಗೊಳ್ಳಲಾಗುತ್ತದೆ’ ಎಂದು ಶಿರಂಗಾಲ ಪಿಡಿಒ ಎಚ್.ಡಿ.ಹರೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT