ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಘೋಷಣೆಗೆ ಮುನ್ನವೇ ‘ಪ್ರತಾಪ’ ಪ್ರಚಾರ

ಮೈಸೂರು–ಕೊಡಗು: ಆಕಾಂಕ್ಷಿಗಳು ಹೆಚ್ಚಿದ್ದರೂ ಕಾಂಗ್ರೆಸ್‌ ಮೌನ, ಜೆಡಿಎಸ್‌ನಲ್ಲಿ ಚಟುವಟಿಕೆಗಳಿಲ್ಲ
ಎಂ.ಮಹೇಶ್
Published 10 ಮಾರ್ಚ್ 2024, 6:11 IST
Last Updated 10 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಮೈಸೂರು: ಲೋಕಸಭಾ ಚುನಾವಣೆ ಹಾಗೂ ಅಭ್ಯರ್ಥಿ ಘೋಷಣೆಗೂ ಮುನ್ನವೇ ಮೈಸೂರು–ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಸಂಸದ ಪ್ರತಾಪ ಸಿಂಹ ಭರದಿಂದ ಪ್ರಚಾರ ಕಾರ್ಯ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹಲವರಿದ್ದರೂ ಪ್ರಚಾರ ಶುರುವಾಗಿಲ್ಲ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಲ್ಲೂ ಚಟುವಟಿಕೆಗಳು ಕಂಡುಬರುತ್ತಿಲ್ಲ.

ಇಲ್ಲಿ ಸತತ ಎರಡು ಬಾರಿ ಗೆದ್ದಿರುವ ಪ್ರತಾಪ ಸಿಂಹ, ತಮ್ಮ ಅಧಿಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕುರಿತ ಸಚಿತ್ರ ಮಾಹಿತಿ ಮತ್ತು ಅಂಕಿ–ಅಂಶಗಳನ್ನು ಒಳಗೊಂಡಿರುವ ‘ರಿಪೋರ್ಟ್‌ ಕಾರ್ಡ್‌’ ಸಿದ್ಧಪಡಿಸಿದ್ದು, ಪಕ್ಷದ ವಿವಿಧ ಮೋರ್ಚಾಗಳ ಕಾರ್ಯಕರ್ತರು ಕ್ಷೇತ್ರ ವ್ಯಾಪ್ತಿಯ ಸಾವಿರಾರು ಮನೆಗಳಿಗೆ ತಲುಪಿಸಿದ್ದಾರೆ.

ಇದು, ‘3ನೇ ಬಾರಿಗೂ ಅವರಿಗೇ ಬಿಜೆಪಿಯಿಂದ ಟಿಕೆಟ್ ಖಾತ್ರಿ ಆಗಿದೆಯೇ’ ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ‘ನನಗೇ ಟಿಕೆಟ್‌ ದೊರೆಯಲಿದೆ, ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ನಾನೇ’ ಎಂಬುದು ಪ್ರತಾಪ ಅವರ ವಿಶ್ವಾಸ.

ವಿವಿಧ ವರ್ಗದವರಿಗೆ: ವಿವಿಧ ಶಿಕ್ಷಣ ಸಂಸ್ಥೆಗಳು, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಮಠಾಧೀಶರು, ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಸಂಸದರು ಸ್ವತಃ ನೇರವಾಗಿ ರಿಪೋರ್ಟ್‌ ಕಾರ್ಡ್‌ ನೀಡಿ ಬೆಂಬಲ ಕೋರುತ್ತಿದ್ದಾರೆ. ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲೂ ಸಾರ್ವಜನಿಕರಿಗೆ ಅದನ್ನು ಹಂಚಲಾಗುತ್ತಿದೆ. ‘ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ’ ಎಂಬ ಸಂದೇಶದ ಜೊತೆಗೆ, ‘ಮತ್ತೊಮ್ಮೆ ಮೋದಿ’ ಎಂದೂ ಪ್ರಚಾರವನ್ನೂ ಮಾಡಲಾಗುತ್ತಿದೆ. 

ಅಂಚೆ, ರೈಲ್ವೆ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಮಾಡುತ್ತಿರುವ ಸಂಸದರು, ಎರಡೂ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಲ್ಟಿಲಾಜಿಸ್ಟಿಕ್‌ ಕಂಟೈನರ್‌ ಯಾರ್ಡ್ ಉದ್ಘಾಟನೆ ಸೇರಿದಂತೆ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡುವುದಕ್ಕೆ ಅವರು ಯೋಜಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

‘ಎರಡು ಅವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ. ನನ್ನ ಕೆಲಸದ ಶೇ 10ರಷ್ಟನ್ನಾದರೂ ಹಿಂದಿನ ಯಾವ ಸಂಸದರೂ ಮಾಡಿರಲಿಲ್ಲ ಎಂಬುದನ್ನು ತಿಳಿಸುತ್ತಿದ್ದೇನೆ. ಅಭಿವೃದ್ಧಿಗಾಗಿ ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಮ್ಮೆ ತರಬೇಕೆಂದು ಕೋರಿಕೊಳ್ಳುತ್ತಿದ್ದೇವೆ’ ಎಂದು ಪ್ರತಾಪ ಸಿಂಹ ಪ್ರತಿಕ್ರಿಯಿಸಿದರು.

ಮಠಾಧೀಶರು, ಪ್ರಮುಖರಿಗೆ ವಿತರಣೆ ಹಳ್ಳಿಗಳಲ್ಲೂ ನಡೆಯುತ್ತಿದೆ ಪ್ರಚಾರ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕಾಣದ ಚಟುವಟಿಕೆ

‘ಜನರಿಗೆ ತಿಳಿಸುತ್ತಿದ್ದೇವೆ’ ‘ಚುನಾವಣೆ ನೀತಿಸಂಹಿತೆ ಜಾರಿಯಾದರೆ ಮುದ್ರಣ ವೆಚ್ಚವನ್ನು ಅಭ್ಯರ್ಥಿಯ ವೆಚ್ಚದ ಲೆಕ್ಕಕ್ಕೆ ಸೇರಿಸುವುದರಿಂದ ಈಗಲೇ ವರದಿಯನ್ನು ಹಂಚಿ ಪ್ರಚಾರ ನಡೆಸಲಾಗುತ್ತಿದೆ. ಅಭ್ಯರ್ಥಿ ಯಾರಾದರೂ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವುದು ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT