ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ ಸರಪಳಿ; ಮುನ್ನೆಚ್ಚರಿಕೆ ಅಗತ್ಯ

Published : 13 ಸೆಪ್ಟೆಂಬರ್ 2024, 5:44 IST
Last Updated : 13 ಸೆಪ್ಟೆಂಬರ್ 2024, 5:44 IST
ಫಾಲೋ ಮಾಡಿ
Comments

ಮಡಿಕೇರಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಮಾನವ ಸರಪಳಿ ರಚಿಸುವ ಕಾರ್ಯಕ್ರಮದಲ್ಲಿ ಸುರಕ್ಷತೆ ಮತ್ತು ಭದ್ರತೆಯದ್ದೇ ಸವಾಲು ಎನಿಸಿದೆ. ಕಾಡಾನೆಗಳ ಹಾವಳಿ ಹಾಗೂ ವೇಗವಾಗಿ ಸಂಚರಿಸುವ ವಾಹನಗಳಿರುವ ಕಡಿದಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ನಿಯೋಜಿಸಿರುವುದು ಶಾಲಾ ಶಿಕ್ಷಕ, ಶಿಕ್ಷಕಿಯರ ಚಿಂತೆಗೆ ಮಾತ್ರವಲ್ಲ ಪೋಷಕರ ಆತಂಕಕ್ಕೂ ಕಾರಣವಾಗಿದೆ.

ಮಡಿಕೇರಿ ನಗರದಲ್ಲಿರುವ ಹಲವು ಖಾಸಗಿ ಶಾಲೆಗಳ ಮಕ್ಕಳಿಗೆ ಮಡಿಕೇರಿ ನಗರದೊಳಗೆ ಅವರ ವ್ಯಾಪ್ತಿಯಲ್ಲಿ ಸ್ಥಳ ನಿಗದಿ ಮಾಡುವ ಬದಲಿಗೆ ಸಾಕಷ್ಟು ದೂರದಲ್ಲಿ ಸ್ಥಳ ತೋರಿಸಲಾಗಿದೆ. ಬೋಯಿಕೇರಿವರೆಗೂ ಮಡಿಕೇರಿ ನಗರದ ಖಾಸಗಿ ಶಾಲೆಗಳ ಮಕ್ಕಳು ಮಾನವ ಸರಪಳಿ ರಚಿಸಬೇಕಿದೆ. ಬೋಯಿಕೇರಿಯಿಂದ ಕೆದಕಲ್‌ವರೆಗೆ ರಿಲೇ ಆಯೋಜಿಸಲಾಗಿದೆ.

ಆದರೆ, ಈ ಹಾದಿಯಲ್ಲಿ ಬೆಳಿಗ್ಗೆ ಹೊತ್ತು ಕಾಡಾನೆಗಳ ಸಂಚಾರ ಇರುತ್ತದೆ. ಅರಣ್ಯ ಇಲಾಖೆ

ಸಿಬ್ಬಂದಿ ಇಲ್ಲಿ ಕಟ್ಟೆಚ್ಚರ ವಹಿಸಲೇಬೇಕಾದ ಜರೂರು ಇದೆ. ಕಾಡಾನೆಗಳ ಚಲನವಲನಗಳ ಮೇಲೆ ಒಂದು ದಿನ ಮೊದಲೇ ಇಲ್ಲಿ ಕಣ್ಣಿಟ್ಟಿದ್ದು, ಒಂದು ವೇಳೆ ಸಮೀಪದ ತೋಟದಲ್ಲೇನಾದರೂ ಕಾಡಾನೆಗಳು ಕಂಡು ಬಂದರೆ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಿದೆ.

‘ಪ್ರತಿ 50 ಮೀಟರ್‌ಗೆ ಒಬ್ಬ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದ್ದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನಷ್ಟು ಪೊಲೀಸರನ್ನು ನಿಯೋಜಿಸಬೇಕಿದೆ. ಭಾನುವಾರವಾಗಿರುವುದು ಹಾಗೂ ಸತತ ಮೂರು ದಿನಗಳ ಕಾಲ ರಜೆ ಇರುವುದರಿಂದ ಪ್ರವಾಸಿಗರ ವಾಹನಗಳ ಓಡಾಟ ಇಲ್ಲಿ ಸಾಮಾನ್ಯವಾಗಿ ಹೆಚ್ಚಿರುತ್ತದೆ. ವೇಗವಾಗಿ ವಾಹನಗಳು ಇಲ್ಲಿ ಸಾಗುವುದರಿಂದ, ತೀರಾ ಕಡಿದಾದ ತಿರುವುಗಳಿರುವುದರಿಂದ ಸಹಜವಾಗಿಯೇ ಇಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಾಲೆಯೊಂದರ ಶಿಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ವಿದ್ಯಾರ್ಥಿಗಳಿಗೆ ಕನಿಷ್ಠ ಪಕ್ಷ ಅವರ ಶಾಲೆ ಸಮೀಪದಲ್ಲೆ ಮಾನವ ಸರಪಳಿ ರಚಿಸಲು ಅವಕಾಶ ನೀಡಬೇಕಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಮಡಿಕೇರಿ ನಗರದಿಂದ ಹೊರಗೆ ನಿಯೋಜಿಸಬೇಕಿತ್ತು’ ಎಂಬ ಅಭಿಪ್ರಾಯ ಶಿಕ್ಷಕರಲ್ಲಿ ವ್ಯಾಪಕವಾಗಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಬೇಕಿದೆ.

‘ಬೋಯಿಕೇರಿಯಿಂದ ಕೆದಕಲ್‌ವರೆಗೆ ರಿಲೇ ನಡೆದು ನಂತರ ಕೆದಕಲ್‌ನಿಂದ ಸುಂಟಿಕೊಪ್ಪದವರೆಗೆ ಮತ್ತೆ ಶಾಲಾ ವಿದ್ಯಾರ್ಥಿಗಳೇ ಮಾನವ ಸರಪಳಿ ರಚಿಸಬೇಕಿದೆ. ಇಲ್ಲಿ ಸುಮಾರು 4 ಕಿ.ಮೀ ದೂರದಲ್ಲಿರುವ ಸುಂಟಿಕೊಪ್ಪ ಸರ್ಕಾರಿ ಶಾಲೆಗಳ ಮಕ್ಕಳನ್ನು ನಿಯೋಜಿಸಲಾಗಿದೆ. ಇದೂ ಕೂಡ ಅಪಾಯಕಾರಿ ಎನಿಸಿದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಮಾನವ ಸರಪಳಿ ಸಂದರ್ಭದಲ್ಲಿ ಎಲ್ಲರ ಸುರಕ್ಷತೆ ಮತ್ತು ಸುಭದ್ರತೆ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕು
ವೆಂಕಟ್ ರಾಜಾ, ಜಿಲ್ಲಾಧಿಕಾರಿ
ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಆನೆಗಳ ಓಡಾಟ ಹೆಚ್ಚಿರುವ ಕಡೆ ನಿಯೋಜಿಸಲಾಗುವುದು
ಭಾಸ್ಕರ್, ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT