ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ – ಮಾನವ ಸಂಘರ್ಷ: ಅರಣ್ಯ ಇಲಾಖೆ ವಿರುದ್ಧ ಎ.ಎಸ್‌.ಪೊನ್ನಣ್ಣ ಆಕ್ರೋಶ

ಕಾಡಾನೆ ಹಾವಳಿ: ಕಾನೂನು ಹೋರಾಟಕ್ಕೆ ಸಿದ್ಧತೆ
Last Updated 18 ಸೆಪ್ಟೆಂಬರ್ 2020, 13:14 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಆನೆ– ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೋರ್ಟ್‌ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಕಾರ್ಯಗತಗೊಳಿಸದೆ ಜಿಲ್ಲೆಯ ಜನರಿಗೆ ದ್ರೋಹ ಎಸಗಲಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆ.ಪಿ.ಸಿ.ಸಿ) ಮಾಹಿತಿ ಹಕ್ಕು ಹಾಗೂ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್‌.ಪೊನ್ನಣ್ಣ ಇಲ್ಲಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2013ರಲ್ಲಿ ಕಾಫಿ ಬೆಳೆಗಾರರ ನಂದ ಸುಬ್ಬಯ್ಯ ಅವರು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕೋರಿ, ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಂದು ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು, ಕೆಲವು ನಿರ್ದೇಶನ ನೀಡಿತ್ತು. ಅಂದಿನ ಅಂಕಿಅಂಶದಂತೆ 120 ಆನೆಗಳು ಕಾಫಿ ತೋಟದಲ್ಲಿಯೇ ಠಿಕಾಣಿ ಹೂಡಿದ್ದವು. ಇಂದು ಅವುಗಳ ಸಂಖ್ಯೆ ಏರಿಕೆಯಾಗಿದೆ’ ಎಂದು ಹೇಳಿದರು.

‘ಅಂದು ನ್ಯಾಯಾಲಯವು ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು 13 ನಿರ್ದೇಶನಗಳನ್ನು ನೀಡಿತ್ತು. ಅದರಲ್ಲಿ ಕೊಡಗಿಗೆ ಸಂಬಂಧಿಸಿದ್ದ ನಿರ್ದೇಶನಗಳೂ ಇದ್ದವು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಒಂದು ನಿರ್ದೇಶನವನ್ನೂ ಪಾಲಿಸಿಲ್ಲ. ನ್ಯಾಯಾಂಗ ನಿಂದನೆಗೆ ಒಳಗಾಗುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ಕಾಫಿ ತೋಟದಲ್ಲಿ ವಾಸ್ತವ್ಯ ಹೂಡಿರುವೆ ಆನೆಗಳು ಸೆರೆ ಹಿಡಿದು ಅವುಗಳಿಗೆ ಪುನರ್ವಸತಿ ಕಲ್ಪಿಸಬೇಕು. ಟಾಸ್ಕ್‌ಫೋರ್ಸ್‌ ಸಹ ನೇಮಕ ಮಾಡಬೇಕು. ಕಾಫಿ ತೋಟ ಹಾಗೂ ಅರಣ್ಯವಿರುವ ಕಡೆಗಳಲ್ಲಿ ಕಂದಕ ನಿರ್ಮಿಸಿ, ತೋಟಕ್ಕೆ ಕಾಡಾನೆಗಳು ನುಗ್ಗದಂತೆ ತಡೆಯಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ಯಾವುದೇ ಕ್ರಮಗಳೂ ಆಗಿಲ್ಲ’ ಎಂದು ಪೊನ್ನಣ್ಣ ಆಪಾದಿಸಿದರು.

‘ಜಿಲ್ಲೆಯಲ್ಲಿ ಪ್ರತಿನಿತ್ಯ ಕಾಡಾನೆ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಜೀವಹಾನಿ ಸಹ ಸಂಭವಿಸುತ್ತಿದೆ. ಪರಿಹಾರವೂ ಸಮರ್ಪಕವಾಗಿ ಸಿಗುತ್ತಿಲ್ಲ. ಕೋರ್ಟ್‌ 105 ಪುಟಗಳ ತೀರ್ಪು ಬರೆದಿದೆ. ಆದರೆ, ನಿರ್ದೇಶನ ಪಾಲಿಸಲು ಅರಣ್ಯ ಇಲಾಖೆ ವಿಫಲವಾಗಿದ್ದು, ಮತ್ತೆ ಕಾನೂನು ಹೋರಾಟ ನಡೆಸಲಾಗುವುದು. ಅದಕ್ಕೂ ಮೊದಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗುತ್ತಿದೆ’ ಎಂದು ಪೊನ್ನಣ್ಣ ಎಚ್ಚರಿಕೆ ನೀಡಿದರು.

‘ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರೂ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಕೇಂದ್ರದ ವಿರುದ್ಧ ಆಕ್ರೋಶ: ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ 6ನೇ ಸ್ಥಾನದಲ್ಲಿದೆ. ಆದರೆ, ಜಿಎಸ್‌ಟಿ ಪಾಲು ತೆಗೆದುಕೊಳ್ಳವುದರಲ್ಲಿ ಬಹಳ ಹಿಂದಿದೆ. ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ಅನುದಾನ ನೀಡದಿರುವ ಕಾರಣಕ್ಕೆ, ಸಾಲ ಮಾಡಬೇಕಾಗಿದೆ’ ಎಂದು ಪೊನ್ನಣ್ಣ ಹೇಳಿದರು.

ಬೆಂಗಳೂರಿನಲ್ಲಿ ಪೊಲೀಸ್‌ ಕಮಿಷನರ್‌ ಕೃಪೆಯಿಲ್ಲದೆ ಡ್ರಗ್ಸ್‌ ಮಾರಾಟ ಮಾಡಲು ಸಾಧ್ಯವಿಲ್ಲ. ಕೋಡ್ ವರ್ಡ್‌ ಮೂಲಕವೇ ಡ್ರಗ್ಸ್‌ ದಂಧೆ ನಡೆಯುತ್ತಿದೆ. ಈಗ ಸಾರ್ವಜನಿಕರ ಹಿತದಿಂದ ಡ್ರಗ್ಸ್‌ ದಂಧೆಯ ತನಿಖೆ ನಡೆಯುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಕೋವಿಡ್‌ ನಿಯಂತ್ರಿಸಲು ವಿಫಲವಾಗಿದೆ. ಪುಟ್ಟ ಜಿಲ್ಲೆಯಲ್ಲೂ ಕೋವಿಡ್‌ ಭಯ ಹುಟ್ಟಿಸುತ್ತಿದೆ. ರಾಜ್ಯ ಸರ್ಕಾರವು ಪುಟ್ಟ ಜಿಲ್ಲೆಯನ್ನು ಸುರಕ್ಷಿತವಾಗಿ ಇಡುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಕೆ.ಪಿ.ಚಂದ್ರಕಲಾ, ನಂದಕುಮಾರ್‌ ಹಾಜರಿದ್ದರು.

‘ಚುನಾವಣೆ ಬಹಳ ದೂರವಿದೆ’

‘ವಿಧಾನಸಭೆ ಚುನಾವಣೆ ಬಹಳ ದೂರವಿದೆ. ಬೇರೆ ಯಾವ ಕ್ಷೇತ್ರಗಳಲ್ಲೂ ಚುನಾವಣೆಯ ಚರ್ಚೆಗಳು ನಡೆಯುತ್ತಿಲ್ಲ. ಕಾನೂನು ಘಟಕದ ಅಧ್ಯಕ್ಷನಾಗಿ ನೇಮಕವಾಗಿದ್ದರಿಂದ ಈಗ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಎ.ಎಸ್‌.ಪೊನ್ನಣ್ಣ ಹೇಳಿದರು.

‘ಪಕ್ಷ ನನಗೆ ಸಾಕಷ್ಟು ಅವಕಾಶ ನೀಡಿದೆ. ಪಕ್ಷಕ್ಕೆ ನಾನು ಸೇವೆ ಮಾಡುವುದು ಧರ್ಮ. ಬೆಂಗಳೂರಿನಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಚುನಾವಣೆಯ ಉದ್ದೇಶವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT