ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ‘ಲಾಕ್‌ಡೌನ್‌’ಗೂ ಹೆಚ್ಚಿದ ಒತ್ತಡ

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ, ಕೆಲವು ಗ್ರಾಮದಲ್ಲಿ ಸ್ವಯಂ ಪ್ರೇರಿತ ‘ಲಾಕ್‌’
Last Updated 12 ಜುಲೈ 2020, 12:52 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾಫಿ ನಾಡು’ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಕ್ಷಿಪ್ರವಾಗಿ ವ್ಯಾಪಿಸುತ್ತಿದ್ದು, ಆತಂಕ ತಂದಿದೆ. ಜಿಲ್ಲೆಯಲ್ಲೂ ಮತ್ತೆ 15 ದಿನಗಳ ಕಾಲ ‘ಲಾಕ್‌ಡೌನ್’‌ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ತೀವ್ರವಾಗಿ ಏರುತ್ತಿರುವ ಕೋವಿಡ್ –19 ಪ್ರಕರಣ ಹತೋಟಿಗೆ ತರಲು ಮತ್ತೆ ಏಳು ದಿನ ಲಾಕ್‌ಡೌನ್‌ ಮಾಡಲಾಗಿದೆ.

ಜಿಲ್ಲೆಯಲ್ಲೂ ಕಳೆದ 15 ದಿನಗಳಿಂದ ಕೋವಿಡ್‌–19 ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಲಾಕ್‌ಡೌನ್‌ ಮಾಡದಿದ್ದರೆ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲೂ ಜಿಲ್ಲೆಯ ಹಲವು ಸಂಘಟನೆಗಳ ಮುಖಂಡರು ಲಾಕ್‌ಡೌನ್‌ ಮಾಡುವಂತೆ ಆಗ್ರಹಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲೂ ಸೋಂಕು ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಹರಡುವಿಕೆ ಕೊಂಡಿಯನ್ನು ತಪ್ಪಿಸದಿದ್ದರೆ ಮತ್ತಷ್ಟು ಸಮಸ್ಯೆ, ಸವಾಲು ಎದುರಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲೂ ಕೋವಿಡ್‌ನಿಂದ ಎರಡು ಸಾವುಗಳು ಸಂಭವಿಸಿರುವುದು ಆತಂಕ ಕವಿಯುವಂತೆ ಮಾಡಿದೆ.

ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಸ್ಥಳೀಯ ಶಾಸಕರು ಕಠಿಣವಾದ ನಿರ್ಬಂಧಕ್ಕೆ ಒತ್ತಾಯಿಸಿದ್ದರು.

ಒಂದು ವಾರ ಪರಿಸ್ಥಿತಿ ಅವಲೋಕಿಸಿ, ನಿರ್ಬಂಧದ ತೀರ್ಮಾನ ಮಾಡುವುದಾಗಿ ಸೋಮಣ್ಣ ಭರವಸೆ ನೀಡಿದ್ದರು. ಆದರೆ, ನಿತ್ಯವೂ 20ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ತಕ್ಷಣವೇ ಲಾಕ್‌ಡೌನ್‌ ಮಾಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್‌ ನಿಯಮ ಜಾರಿಗೆ ತರಲಾಗಿದೆ. ಕುಂಜಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ತನಕ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ. ಬಳಿ ಗ್ರಾಮಗಳೂ ಲಾಕ್‌ ಆಗುತ್ತಿವೆ.

ಲಾಕ್‌ ಪರ ಜೆಡಿಎಸ್‌: ‘ಜಿಲ್ಲೆಯಲ್ಲಿ ಒಂದೆರಡು ಪ್ರಕರಣವಿದ್ದಾಗ ಎರಡೂವರೆ ತಿಂಗಳು ಲಾಕ್‌ಡೌನ್ ಮಾಡಲಾಗಿತ್ತು. ಆದರೆ, ಇದೀಗ ಸೋಂಕು ವ್ಯಾಪಕವಾಗಿ ಹರಡುವ ಹಂತದಲ್ಲಿ ಸರ್ಕಾರ ಮೌನ ವಹಿಸಿರುವುದು ದುರಂತ. 14 ದಿನಗಳ ಕಾಲ ಲಾಕ್‌ಡೌನ್‌ ಮಾಡಬೇಕು’ ಎಂದು ಹೇಳುವ ಮೂಲಕ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಬಿ.ಗಣೇಶ್‌ ಅವರು ಲಾಕ್‌ಡೌನ್‌ ಪರವಾಗಿದ್ದಾರೆ.

ಜಿಲ್ಲೆಗೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವವರನ್ನು ಗಡಿಪ್ರದೇಶದಲ್ಲಿ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿ, 14 ದಿನಗಳ ಕ್ವಾರಂಟೈನ್‍ಗೆ ಕಳುಹಿಸಬೇಕು. ಇಲ್ಲವಾದರೆ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಕಷ್ಟ ಎಂದು ಎಚ್ಚರಿಸಿದ್ದಾರೆ.

ಕೊಡಗು ರಕ್ಷಣಾ ವೇದಿಕೆಯ ಒತ್ತಾಯ: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೊರೊನಾ ಸೋಂಕು ಮಿತಿಮೀರಿ ವ್ಯಾಪಿಸುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ತಕ್ಷಣ 15 ದಿನಗಳ ಕಟ್ಟುನಿಟ್ಟಿನ ಲಾಕ್‍ಡೌನ್‌ಗೆ ಆದೇಶ ನೀಡಬೇಕು. ಗಡಿಭಾಗವನ್ನು ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.

‘ರ್‍ಯಾಂಡಮ್‌ ಪರೀಕ್ಷೆ ನಡೆಸಬೇಕು. ವರದಿ ಬರುವುದೂ ವಿಳಂಬವಾಗುತ್ತಿದೆ. ಒಂದೇ ದಿನಕ್ಕೆ ವರದಿ ಬರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲೂ ಅಂದಾಜು 600ರಷ್ಟು ಬೆಡ್‌ಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂಬ ಆಗ್ರಹಗಳೂ ಕೇಳಿಬಂದಿದೆ.

ಸಂಪರ್ಕ ತಡೆ ನಿಯಮ ಜಾರಿಗೆ: ಜಿಲ್ಲೆಯಲ್ಲಿ ದೃಢಪಟ್ಟ ಪ್ರಕರಣ ಪರಿಶೀಲಿಸಿದರೆ ವಿದೇಶ, ಹೊರ ರಾಜ್ಯ, ಹೊರ ಜಿಲ್ಲೆಯ ಪ್ರಯಾಣ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿಯಾದರೆ, ಹಲವು ಮಂದಿ ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದ್ದು ಸಾರ್ವಜನಿಕರ ಹಿತಾಸಕ್ತಿಯಿಂದ ಕೊಡಗಿನಲ್ಲಿ ಮತ್ತೆ ಸಂಪರ್ಕ ತಡೆ ನಿಯಮ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

* ವಿದೇಶದಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನ ಸಾಂಸ್ಥಿಕ ತಡೆ, ನಂತರದ 7 ದಿನ ಗೃಹ ಸಂಪರ್ಕ ತಡೆಯಲ್ಲಿ ಇರಬೇಕು.
* ಹೊರ ರಾಜ್ಯದಿಂದ ಆಗಮಿಸಿದ್ದರೆ ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರಬೇಕು.
* ಹೊರ ಜಿಲ್ಲೆಗಳಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರಬೇಕು.
* ಸಂಪರ್ಕ ತಡೆಯಲ್ಲಿ ಇರುವವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು.

15 ದಿನ ಮಾತ್ರ ಲಾಕ್‌ಡೌನ್ ಮಾಡಿ

ಜಿಲ್ಲೆಯಲ್ಲೂ 15 ದಿನ ಲಾಕ್‍ಡೌನ್ ಮಾಡಬೇಕೆನ್ನುವ ವ್ಯಕ್ತವಾಗುತ್ತಿದೆ; ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಚೆಕ್‌ಪೋಸ್ಟ್ ಬಂದ್ ಮಾಡಿ ಇತರರಿಂದ ಸೋಂಕು ವ್ಯಾಪಿಸದಂತೆ ತಡೆಯಬೇಕು
ಪವನ್ ಪೆಮ್ಮಯ್ಯ, ಅಧ್ಯಕ್ಷ, ಕೊಡಗು ರಕ್ಷಣಾ ವೇದಿಕೆ

ಚೆಕ್ ಮಾಡಿ ಜಿಲ್ಲೆಗೆ ಬಿಡಬೇಕು

ಬೆಂಗಳೂರಿನಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಅಲ್ಲಿಂದ ಜಿಲ್ಲೆಗೆ ಬರುವವರ ಸಂಖ್ಯೆ ದಿಢೀರ್‌ ಏರಿಕೆಯಾಗಲಿದೆ. ಚೆಕ್‌ಪೋ‌ಸ್ಟ್‌ನಲ್ಲಿ ತಪಾಸಣೆ ನಡೆಸಿ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಬೇಕು
ಚುಮ್ಮಿ ದೇವಯ್ಯ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT