ಬುಧವಾರ, ಜನವರಿ 22, 2020
25 °C
ಪೌರತ್ವ ತಿದ್ದುಪಡಿ ಮಸೂದೆಗೆ ಎಸ್‌ಡಿಪಿಐ ವಿರೋಧ: ಅಭಿಪ್ರಾಯ ಸಂಗ್ರಹಿಸಲು ಆಗ್ರಹಿಸಿ ಪ್ರತಿಭಟನೆ

ಕೇಂದ್ರದಿಂದ ದ್ವೇಷದ ರಾಜಕಾರಣ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ತಿದ್ದುಪಡಿ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್‌ ಮೊಹಿಸಿನ್‌ ಮಾತನಾಡಿ, ’ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ನಡೆಸುತ್ತಿದೆ. ಭಾರತದಂಥ ಜಾತ್ಯತೀತ ರಾಷ್ಟ್ರದಲ್ಲಿ ಪೌರತ್ವವನ್ನು ಧರ್ಮದ ಮೇಲೆ ನಿರ್ಧರಿಸಬಾರದು. ಎಲ್ಲರಿಗೂ ಸಮಾನ ಅವಕಾಶಗಳು ನೀಡಬೇಕು’ ಎಂದು ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಕೆಲವೊಂದು ಲೋಪದೋಷಗಳಿದೆ. ಪೌರತ್ವ (ತಿದ್ದುಪಡಿ) ಮಸೂದೆಯು ಕೆಲವೇ ದಿನಗಳಲ್ಲಿ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಮರುದಿನವೇ ಅದಕ್ಕೆ ಅಂಗೀಕಾರ ಸಿಗುವ ಸಾಧ್ಯತೆಯಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ಆಪಾದಿಸಿದರು. 

ದೇಶದಲ್ಲಿರುವ ಮುಸ್ಲಿಮರನ್ನೇ ಗುರಿಯಾಗಿಸಿ ಮಸೂದೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ನಡೆಯು ಖಂಡನೀಯ. ಈ ಮಸೂದೆ ಆರ್‌ಎಸ್‌ಎಸ್‌ ಅಜೆಂಡಾ. ಈ ದೇಶವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಲು ಬಿಜೆಪಿ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.

ಮಸೂದೆ ತಿದ್ದುಪಡಿಗೂ ಮೊದಲು ಜನ ಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಬೇಕು. ನಂತರ, ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಧರ್ಮ, ಸಮುದಾಯವನ್ನು ಗೌರವಿಸಿ ಪೌರತ್ವ ನೀಡಿದರೆ ಮಸೂದೆಯನ್ನು ಬೆಂಬಲಿಸಬಹುದಿತ್ತು. ಆದರೆ, ಕೇಂದ್ರ ಸರ್ಕಾರ ಮುಸ್ಲಿಮೇತರ ವಲಸಿಗರನ್ನು ಹೊರತುಪಡಿಸಿ ನಿರಾಶ್ರಿತರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಅವಕಾಶ ಕಲ್ಪಿಸಿಕೊಡಲು ಹೊರಟಿದೆ ಎಂದು ದೂರಿದರು.

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಹೀಗಾಗಿ, ಮಸೂದೆಗೆ ಬೆಂಬಲ ಸಿಕ್ಕಿದೆ. ಆದರೆ, ಮಸೂದೆ ದೇಶದಲ್ಲಿಯೇ ಬಹಳ ವಿವಾದಾತ್ಮಕದಿಂದ ಕೂಡಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್‌ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಡಿ.9ರಂದು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು ಅದನ್ನು ಎಸ್‌ಡಿಪಿಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಮಸೂದೆ ಪ್ರಕಾರ 7 ವರ್ಷಗಳಿಂದ ಭಾರತದಲ್ಲಿ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನದ ಮುಸ್ಲಿಮೇತರ ಜನರಿಗೆ ಪೌರತ್ವ ನೀಡಲು ಮುಂದಾಗಿದೆ. ಧರ್ಮದ ಆಧಾರದ ಈ ಮಸೂದೆ. ಅಕ್ರಮ ವಲಸಿಗರು ಹಾಗೂ ನಿರಾಶ್ರಿತರಿಗೆ ಹೆಚ್ಚು ಲಾಭದಾಯಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಡ್ಕರ್, ನಗರ ಘಟಕದ ಅಧ್ಯಕ್ಷ ಮನ್ಸೂರ್ ಅಲಿ, ಇಬ್ರಾಹಿಂ, ಮುಸ್ಲಿಂ ಒಕ್ಕೂಟದ ಮುಖಂಡ ಹನೀಫ್‌ ಹಾಜರಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು