ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಭೂ ಮಾಫಿಯಾದಿಂದ ಆತಂಕ; ನಾಚಪ್ಪ

ಮೂರ್ನಾಡಿನಲ್ಲಿ ಜನಜಾಗೃತಿ ಮಾನವ ಸರಪಳಿ ರಚನೆ
Published : 30 ಆಗಸ್ಟ್ 2024, 4:40 IST
Last Updated : 30 ಆಗಸ್ಟ್ 2024, 4:40 IST
ಫಾಲೋ ಮಾಡಿ
Comments

ಮಡಿಕೇರಿ: ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆದರೆ, ಇಂದು ಭೂಮಾಫಿಯಾ ಬೃಹತ್ ಪ್ರಮಾಣದ ಭೂಪರಿವರ್ತನೆ ಮತ್ತು ಭೂ ವಿಲೇವಾರಿಯಿಂದ ಅದರನ್ನೆಲ್ಲ ನಾಶ ಮಾಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.

ಇಲ್ಲಿನ ಮೂರ್ನಾಡಿನಲ್ಲಿ ಅವರು ತಮ್ಮ ಬೆಂಬಲಿಗರೊಂದಿಗೆ ಗುರುವಾರ ಮಾನವ ಸರಪ‍ಳಿ ರಚಿಸಿ ಮಾತನಾಡಿದರು.

‘ಹಸಿರ ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯದ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ’ ಎಂದು ದೂರಿದರು.

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆ ಆಗಿರುವ ಕುಸಿತಗಳು ಹಾಗೂ ಅನಾಹುತಗಳಿಗೆ ಹೇಗೆ ದೊಡ್ಡ ಪ್ರಮಾಣದ ಭೂಪರಿವರ್ತನೆ, ಅವೈಜ್ಞಾನಿಕವಾದ ಅಣೆಕಟ್ಟೆಗಳ ನಿರ್ಮಾಣ, ದಿಕ್ಕುದೆಸೆಯೇ ಇಲ್ಲದ ಅಭಿವೃದ್ಧಿ ಕಾರಣವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಾಚಪ್ಪ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ಇಡೀ ಕೊಡಗಿಗೆ ಅನಾಹುತ ಎದುರಾಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನೂ ಅವರು ನೀಡಿದರು.

ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಕೊಡಗು ಪ್ರದೇಶ ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿದೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು.

ವಯನಾಡಿನಂತಹ ದುರಂತ ಕೊಡಗಿನಲ್ಲೂ ಸಂಭವಿಸಬಾರದೆಂದಾದರೆ ಆಡಳಿತ ವ್ಯವಸ್ಥೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ ಎಂದೂ ಅವರು ಪ್ರತಿಪಾದಿಸಿದರು.

ಇದಕ್ಕಾಗಿ ಸಿಎನ್‍ಸಿ ವತಿಯಿಂದ ಸೆ.9 ರಂದು ನಾಪೋಕ್ಲು, 10 ರಂದು ಚೇರಂಬಾಣೆ ಹಾಗೂ 16 ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ಬೊಳ್ಳಚೆಟ್ಟಿರ ಜಯಂತಿ, ಬಿದ್ದಂಡ ಉಷಾ, ಪೆಮ್ಮುಡಿಯಂಡ ವೇಣು, ನಂದೇಟಿರ ರವಿ, ಬಡುವಂಡ ವಿಜಯ, ಪುದಿಯೊಕ್ಕಡ ಕಾಶಿ, ಪುದಿಯೊಕ್ಕಡ ಬೋಪಣ್ಣ, ಪುದಿಯೊಕ್ಕಡ ಸೋಮಯ್ಯ, ಪ್ರೊ. ಚೌರೀರ ಜಗತ್, ನೆರವಂಡ ಅನೂಪ್, ಪೆಮ್ಮಂಡ ಪವಿತ್ರ, ಚೊಕ್ಕಂಡ ಕಟ್ಟಿ, ಅಚ್ಚಕಾಳೆರ ಸಂತು, ಚಂಗಣಮಕ್ಕಡ ವಿನು, ಅವರೆಮಾದಂಡ ಚಂಗಪ್ಪ, ಅವರೆಮಾದಂಡ ಗಿರಿ ಭಾಗವಹಿಸಿದ್ದರು.

ಸೆ.9 ರಂದು ನಾಪೋಕ್ಲುವಿನಲ್ಲಿ ಮಾನವ ಸರಪಳಿ 10 ರಂದು ಚೇರಂಬಾಣೆಯಲ್ಲಿ ಜನಜಾಗೃತಿ 16 ರಂದು ಹುದಿಕೇರಿಯಲ್ಲಿ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT