ಸಿದ್ದಾಪುರ: ಎಡೆಬಿಡದೆ ಸುರಿದ ಗಾಳಿ– ಮಳೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿಯ ‘ಬಾಪೂಜಿ ಸೇವಾ ಕೇಂದ್ರ’ದ ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಕಳೆದ ಹಲವು ವರ್ಷದಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಸಭಾಂಗಣ ಸೇರಿದಂತೆ ಕಚೇರಿಯ ಚಾವಣಿ ಕುಸಿಯುವ ಹಂತದಲ್ಲಿತ್ತು. ಸಭಾಂಗಣದಲ್ಲಿ ಯಾವುದೇ ಸಭೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿಗಳು ಗ್ರಾ.ಪಂ ಗೆ ಸೂಚನೆ ನೀಡಿದ್ದರು.
ಆ ಬಳಿಕ ಗ್ರಾ.ಪಂ ಸಾಮಾನ್ಯ ಸಭೆ ಸೇರಿದಂತೆ ಗ್ರಾಮ ಸಭೆಗಳನ್ನು ಅದೇ ಸಭಾಂಗಣದಲ್ಲಿ ಮಾಡುತ್ತಿದ್ದು, ಸಾಮಾಜಿಕ ಕಾರ್ಯಕರ್ತ ಹೆ.ಬಿ ರಮೇಶ್ ತಲೆಗೆ ಹೆಲ್ಮೆಟ್ ಧರಿಸಿ ಗ್ರಾಮಸಭೆಗೆ ತೆರಳಿ ಗಮನ ಸೆಳೆದಿದ್ದರು. ಇದೀಗ ಸಭಾಂಗಣದ ಸಮೀಪದಲ್ಲಿರುವ ಕೊಠಡಿಯ ಚಾವಣಿ ಕುಸಿದುಬಿದ್ದಿದೆ.
‘ಗ್ರಾ.ಪಂ ಹಿಂಭಾಗದಲ್ಲಿ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಗ್ರಾ.ಪಂ ಕಚೇರಿಯನ್ನು ಸ್ಥಳಾಂತರ ಮಾಡಲಾಗುವುದು’ ಎಂದು ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.