ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ತಗ್ಗಿದರೂ ನಿಲ್ಲದ ಹಾನಿ; ತಪ್ಪದ ಆತಂಕ

ಕುಸಿಯುತ್ತಲೇ ಇವೆ ಗುಡ್ಡಗಳು, ಬೀಳುತ್ತಲೇ ಇವೆ ಮರಗಳು, ಭೋರ್ಗರೆಯುತ್ತಾ ಹರಿಯುತ್ತಿದೆ ಕಾವೇರಿ ನದಿ
Last Updated 12 ಆಗಸ್ಟ್ 2022, 23:00 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ಪ್ರಮಾಣ ತಗ್ಗಿದರೂ, ಗುರುವಾರ ರಾತ್ರಿ ಕೆಲವೆಡೆ ಸುರಿದ ಭಾರಿ ಮಳೆಗೆ ಮನೆಗಳು ಕುಸಿದಿವೆ. ಭೂಕುಸಿತಗಳ ಸರಣಿ ಕೊಡ್ಲಿಪೇಟೆ ಹೋಬಳಿಯಲ್ಲಿ ಸತತ 2ನೇ ದಿನವೂ ಮುಂದುವರಿದಿದೆ. ದಿಢೀರನೇ ಹಾಗೂ ಒಮ್ಮೆಗೆ ಅಲ್ಲಲ್ಲಿ ಸುರಿಯುತ್ತಿರುವ ಭಾರಿ ಮಳೆ ಆತಂಕವನ್ನು ಇನ್ನೂ ಜೀವಂತವಾಗಿರಿಸಿದೆ.

ನಾಪೋಕ್ಲು ಮತ್ತು ಭಾಗಮಂಡಲದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಮತ್ತೆ ಭೋರ್ಗರೆಯುತ್ತಾ ಹರಿಯುತ್ತಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲೂ ಬಿರುಸಿನ ಮಳೆ ಸುರಿದಿದ್ದು, ಕೊಡ್ಲಿಪೇಟೆ ಹೋಬಳಿಯಲ್ಲಿ 2 ಕಡೆ ಭೂಕುಸಿತಗಳು ಸಂಭವಿಸಿವೆ. ಜಿಲ್ಲೆಯಲ್ಲಿ 14 ಮನೆಗಳು ಕುಸಿದಿವೆ.

ಗಾಳಿಯ ವೇಗ ತೀವ್ರಗತಿಯನ್ನು ಪಡೆದಿದ್ದು, 23 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಅಲ್ಲಲ್ಲಿ ಹಲವು ಮರಗಳು ಧರೆಗುರುಳಿವೆ. ಇದರಿಂದ ಕೆಲವೆಡೆ ವಿದ್ಯುತ್ ವ್ಯತ್ಯಯಗಳು ಉಂಟಾಗಿವೆ.

ಪ್ರವಾಹ ನಿಯಂತ್ರಣಕ್ಕೆ ಬಂದಿರು ವುದರಿಂದ ಸಹಜವಾಗಿಯೇ ಕಾಳಜಿ ಕೇಂದ್ರದಲ್ಲಿರುವವರನ್ನು ವಾಪಸ್ ಅವರವರ ಮನೆಗೆ ಕಳುಹಿಸ ಲಾಗುತ್ತಿದೆ. ಪ್ರವಾಹ ತಗ್ಗದ ಕಡೆ ಇರುವ ಜನರನ್ನು ಕಾಳಜಿ ಕೇಂದ್ರದಲ್ಲೇ ಉಳಿಸಿಕೊಳ್ಳ ಲಾಗಿದೆ. ಸದ್ಯ, ಜಿಲ್ಲೆಯಲ್ಲಿ 3 ಕಾಳಜಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಕೊಯನಾಡಿನ ಗಣೇಶ ಕಲಾಮಂದಿರದಲ್ಲಿ 33, ಚೆಂಬು ಗ್ರಾಮದ ಶಾಲೆಯಲ್ಲಿ 3, ವಿರಾಜಪೇಟೆ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ಮಂದಿ ಇದ್ದಾರೆ.

ಮಡಿಕೇರಿಯ ರೆಡ್‌ಕ್ರಾಸ್‌ ಕಟ್ಟಡ ಹಾಗೂ ಭಾಗಮಂಡಲದ ಕಾಶಿ ಮಠದಲ್ಲಿ ತೆರೆದಿದ್ದ ಕಾಳಜಿ ಕೇಂದ್ರವನ್ನು ಮುಚ್ಚಲಾಗಿದ್ದು, ಅಲ್ಲಿದ್ದವರನ್ನು ವಾಪಸ್ ಮನೆಗೆ ಕಳುಹಿಸಲಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 8 ಸೆಂ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ 6 ಸೆಂ.ಮೀ ಸರಾಸರಿ ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಅತ್ಯಧಿಕ 19 ಸೆಂ.ಮೀ ಮಳೆಯಾಗಿದೆ. ಉಳಿದಂತೆ, ನಾಪೋಕ್ಲುವಿನಲ್ಲಿ 15, ಭಾಗಮಂಡಲದಲ್ಲಿ 14 ಸೆಂ.ಮೀ ಮಳೆ ಸುರಿದಿದೆ.

ಚೆಕ್ ವಿತರಣೆ: ಭಾಗಮಂಡಲ ಹೋಬಳಿಯ ಕೊಳಗದಾಳು ಗ್ರಾಮದ ನಿವಾಸಿ ಬಿ.ಎ.ಇಂದಿರ ಹಾಗೂ ಕುಂದಚೇರಿ ಗ್ರಾಮದ ಸಿ.ಜಿ.ರಾಮಣ್ಣ ಅವರ ಮನೆಗಳ ಹಾನಿಗೆ ತಲಾ ₹95,100 ಮೊತ್ತದ ಚೆಕ್‍ ಅನ್ನು ಶಾಸಕ ಕೆ.ಜಿ.ಬೋಪಯ್ಯ ಶುಕ್ರವಾರ ತಮ್ಮ ಕಚೇರಿಯಲ್ಲಿ ವಿತರಿಸಿದರು.

ತೋಟದಲ್ಲಿ ಬರೆ ಕುಸಿತ

ಶನಿವಾರಸಂತೆ: ಸಮೀಪದ ಹಿರಿಕರ ಗ್ರಾಮದ ರೈತ ಮಹಿಳೆ ಎಚ್.ಎಂ.ಈರಮ್ಮ ಅವರ ಒಂದು ಎಕರೆ 40 ಸೆಂಟ್ ಕಾಫಿ-ಅಡಿಕೆ ತೋಟದಲ್ಲಿ ತೋಡಿನ ನೀರು ಹರಿದು ಬರುತ್ತಿದ್ದು, ಬರೆ ಕುಸಿದು ಮುಕ್ಕಾಲು ಎಕರೆ ತೋಟದಲ್ಲಿ ಬೆಳೆ ಹಾನಿಯಾಗಿದೆ.

ಜೋರು ಮಳೆಯಿಂದ ತೋಡು ತುಂಬಿ ತೋಟದೊಳಗೆ ಹರಿಯುತ್ತಿದ್ದು, ಬರೆ ಕುಸಿದಿದೆ. ದೊಡ್ಡ ಮರಗಳು ಉರುಳಿ ಗಿಡಗಳ ಮೇಲೆ ಬಿದ್ದಿದ್ದು ನಾಲ್ಕೈದು ವರ್ಷದ ಅಡಿಕೆ ಮರಗಳು ಮುರಿದು ಬಿದ್ದಿವೆ. ಕಾಫಿ ಗಿಡಗಳು ನಾಶವಾಗಿವೆ ಎಂದು ಈರಮ್ಮ ಅಳಲು ತೋಡಿಕೊಂಡರು.

ಗೌಡಳ್ಳಿ ಪಿಡಿಒ ಲಿಖಿತಾ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಶನಿವಾರಸಂತೆ ಕಂದಾಯ ಇಲಾಖೆಗೂ ಈರಮ್ಮ ಮನವಿ ಸಲ್ಲಿಸಿದ್ದಾರೆ.

ಅದೇ ಗ್ರಾಮದ ರೈತ ಮಹಿಳೆ ಎಚ್.ಎಂ.ಗಾಯತ್ರಿ ಅವರ ಕಾಫಿ– ಅಡಿಕೆ ತೋಟದಲ್ಲೂ ಬರೆ ಕುಸಿತವಾಗಿ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT