ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಮಳೆಹಾನಿ ಪ್ರದೇಶಕ್ಕೆ ಸಂಸದರ ಭೇಟಿ, ಪರಿಶೀಲನೆ

Last Updated 8 ಸೆಪ್ಟೆಂಬರ್ 2018, 13:54 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ಮಳೆಯಿಂದ ಹಾನಿಗೊಳಗಾಗಿರುವ ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯ ಇಲ್ಲ. ನಾವು ನಿಮ್ಮ ಹಿಂದೆ ಇದ್ದು, ಕೇಂದ್ರ ಮತ್ತು ರಾಜ್ಯದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು’ ಎಂದು ಸಂಸದ ಪ್ರತಾಪ ಸಿಂಹ ಭರವಸೆ ನೀಡಿದರು.

ಭಾರಿ ಮಳೆ, ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ತಾಲ್ಲೂಕಿನ ಗರ್ವಾಲೆ, ಹರಗ, ಬೆಟ್ಟದಳ್ಳಿ, ಶಾಂತಳ್ಳಿ, ಕೂತಿ ವ್ಯಾಪ್ತಿಯಲ್ಲಿ ಸಂಸದ ಪ್ರತಾಪ ಸಿಂಹ ಮತ್ತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶನಿವಾರ ಭೇಟಿ ನೀಡಿದರು. ಕೇಂದ್ರ ಸರ್ಕಾರದಿಂದ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು.

‘ಸಂಪೂರ್ಣ ಮನೆ ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ನಿಧಿಯಡಿ ತಕ್ಷಣಕ್ಕೆ ₹ 1ಲಕ್ಷ ಪರಿಹಾರ ಒದಗಿಸಲಾಗುವುದು. ಈಗಾಗಲೇ ಮನೆ ಕಳೆದುಕೊಂಡವರಿಗೆ ಅವರು ಹೇಳುವ ಜಾಗದಲ್ಲೇ, ಸರ್ಕಾರ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸುಮಾರು ₹ 7-10 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿಕೊಡಲಾಗುವುದು’ ಎಂದರು.

ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರ ₹ 8 ಕೋಟಿ ಅನುದಾನದೊಂದಿಗೆ ಸಂಸದರ ಅನುದಾನವನ್ನೂ ಸೇರಿಸಿ ₹ 10.50 ಕೋಟಿ ಅನುದಾನವನ್ನು ಅತಿ ಹೆಚ್ಚು ಪ್ರವಾಹಪೀಡಿತವಾಗಿರುವ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿಗೆ ವಿನಿಯೋಗಿಸಲಾಗುವುದು ಎಂದರು.

ಶಾಸಕ ಅಪ್ಪಚ್ಚು ರಂಜನ್ ಅವರ ಕೋರಿಕೆ ಮೇರೆಗೆ ಎಲ್ಲಾ ಶಾಸಕರ ನಿಧಿಯಿಂದ ತಲಾ ₹25ಲಕ್ಷ ಅನುದಾನ ಬರಲಿದೆ. ಇದರೊಂದಿಗೆ ಇನ್ಫೋಸಿಸ್, ಆರ್ಯವೈಶ್ಯ ಸಮಾಜ, ಕೊಡವ ಸಮಾಜ, ಬೆಂಗಳೂರು ರೋಟರಿ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿವೆ. ಹಾನಿಗೊಳಗಾದ ಕೊಡಗನ್ನು ಪುನರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಲಿದೆ ಎಂದರು.

‘ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಬರಬೇಕಿದೆ. ಇಲ್ಲಿ ರೈತರ ₹ 1400 ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿದೆ. ಈಗಾಗಲೇ ಘೋಷಿಸಿರುವ ₹ 2 ಲಕ್ಷದವರೆಗಿನ ಸಾಲಮನ್ನಾದಿಂದ ಕೊಡಗಿನ ರೈತರಿಗೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊಡಗಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು’ ಎಂದು ಸಂಸದರು ಆಗ್ರಹಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಮನೆ ಹಾಗೂ ಕೃಷಿ ನಷ್ಟದ ಬಗ್ಗೆ ವಾಸ್ತವ ವರದಿ ನೀಡುವಂತೆ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರಿಗೆ ಸೂಚಿಸಲಾಗಿದೆ. ವಾಸಿಸಲು ಯೋಗ್ಯವಲ್ಲದ ಮನೆಗಳನ್ನೂ ಸಂಪೂರ್ಣ ಹಾನಿ ಪ್ರಕರಣವೆಂದು ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ತೋಟ ಕಳೆದುಕೊಂಡಿರುವ ಕೃಷಿಕರಿಗೆ ಸಿ ಮತ್ತು ಡಿ ಜಾಗದಲ್ಲಿ ಜಮೀನು ಒದಗಿಸಿಕೊಡುವ ಮೂಲಕ ಕೃಷಿಕರ ರಕ್ಷಣೆಯಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮನವಿ ಮಾಡಿದರು. ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT