ಮಡಿಕೇರಿ/ ಸೋಮವಾರಪೇಟೆ: ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಅಬ್ಬರದ ಮಳೆ ಬುಧವಾರ ಸಂಜೆ ಸುರಿಯಿತು.
ತಲಕಾವೇರಿಯ ಮೆಟ್ಟಿಲುಗಳಿಂದ ಜಲಪಾತದಂತೆ ನೀರು ಹರಿಯಿತು. ಗುಡುಗು, ಸಿಡಿಲಿನ ಅಬ್ಬರಕ್ಕೆ ಬಂದಿದ್ದ ಪ್ರವಾಸಿಗರ ಕ್ಷಣಕಾಲ ನಡುಗಿದರು. ಇತ್ತ ಕುಶಾಲನಗರ ಸಮೀಪದ ನಿಸರ್ಗಧಾಮದ ಆಸುಪಾಸಿನಲ್ಲೂ ಬಿರುಸಿನ ಮಳೆಯಾಯಿತು.
ಮಡಿಕೇರಿಯಲ್ಲಿ ಗುಡುಗು, ಸಿಡಿಲುಗಳ ಅಬ್ಬರ ಜೋರಾಗಿತ್ತಾದರೂ ಮಳೆ ಬಿರುಸಾಗಿ ಸುರಿಯಲಿಲ್ಲ.
ಸೋಮವಾರಪೇಟೆ ಭಾಗದಲ್ಲಿ ಕಳೆದ 3 ದಿನಗಳಿಂದಲೂ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ, ಕಾಳು ಮೆಣಸು ಭತ್ತ ಸೇರಿದಂತೆ ಹಲವು ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಕಂಬಿಬಾಣೆ 5 ಸೆಂ.ಮೀ, ಗಣಂಗೂರು 3.5, ಬಲ್ಲಮಾವಟಿ, ನಾಲ್ಕೂರು ಶಿರಂಗಾಲ, ಕುಶಾಲನಗರದ ಬೇಲೂರು 3, ಬೆಸೂರು, ಪೆರಾಜೆ, ಕಾಕೋಟುಪರಂಬು 2.5, ನಾಪೋಕ್ಲು, ಸೋಮವಾರಪೇಟೆ ಪಟ್ಟಣ, ಚೌಡ್ಲು, 2, ವಾಲ್ನೂರು ತ್ಯಾಗತ್ತೂರು 1.5 ಸೆಂ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.