ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಅಂತೂ, ಇಂತೂ ಧರೆಗಿಳಿದ ‘ಭರಣಿ’

Published 4 ಮೇ 2024, 4:47 IST
Last Updated 4 ಮೇ 2024, 4:47 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶುಕ್ರವಾರ ಮಳೆಯಾಗುವ ಮೂಲಕ ಜನರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿತು. ತಿಂಗಳು ಗಟ್ಟಲೆ ಕಾಲ ಬಿರುಸಿನ ಮಳೆಗಾಗಿ ಕಾದಿದ್ದ ಜನರು ಮಳೆಯಿಂದ ಸಂತಸಗೊಂಡರು. ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಇಳೆ ಮಳೆಯಿಂದ ತಣಿಯಿತು.

ಬಿರು ಬಿಸಿಲಿಗೆ ಬಾಡಿ ಹೋಗುತ್ತಿದ್ದ ಕಾಫಿ ಗಿಡಗಳು ಧೋ ಎಂದು ಸುರಿದ ಭರಣಿ ಮಳೆಗೆ ಮೈಯೊಡ್ಡಿ ನಳನಳಿಸಿದವು. ಗಾಳಿ ಕೊಂಚ ಜೋರಾಗಿಯೇ ಬೀಸಿದರೂ, ಮೈಮನಗಳನ್ನು ಪುಳಕಗೊಳಿಸಿತು.

ಮಡಿಕೇರಿ ನಗರದಲ್ಲಿ ಸಂಜೆ ಇದ್ದಕ್ಕಿದ್ದಂತೆ ದಟ್ಟವಾದ ಮೋಡಗಳು ತುಸು ಉತ್ತಮ ಮಳೆಯನ್ನೇ ಹೊತ್ತು ತಂದವು. ಸಂತೆಗೆ ಬಂದಿದ್ದ ಜನರು ಸುರಿವ ಮಳೆಯಲ್ಲೇ ನೆನೆಯುತ್ತ ಹೆಜ್ಜೆ ಹಾಕಿದರು. ವ್ಯಾಪಾರ ಮುಗಿಯುವ ವೇಳೆಗೆ ಬಂದ ಮಳೆರಾಯನಿಗೆ ವ್ಯಾಪಾರಸ್ಥರೂ ಕಿರಿಕಿರಿ ವ್ಯಕ್ತಪಡಿಸದೇ ಸಂಭ್ರಮದ ಸ್ವಾಗತ ಕೋರಿದ್ದು ವಿಶೇಷ ಎನಿಸಿತು.

ಮಳೆ ಬಿದ್ದ ಕೆಲವೇ ಗಂಟೆಗಳಲ್ಲಿ ನಗರದ ಹಲವೆಡೆ ಭೂಮಿ ನೀರೆಲ್ಲವನ್ನೂ ಹೀರಿಕೊಂಡಿದ್ದು, ನೆಲ ಎಷ್ಟು ಮಳೆಗಾಗಿ ತಹತಹಿಸುತ್ತಿತ್ತು ಎಂಬುದಕ್ಕೆ ಉದಾಹರಣೆಯಂತಿತ್ತು.

ನಾಪೋಕ್ಲು ಭಾಗದಲ್ಲಿ ಸಿಡಿಲಬ್ಬರದ ಮಳೆಯು ಎಲ್ಲರಲ್ಲೂ ಸಂತಸ ತಂದಿತು. ಆದರೂ, ಮೊಬೈಲ್ ಟವರ್‌ಗಳಲ್ಲಿ ವಿದ್ಯುತ್ ಕೈಕೊಟ್ಟು, ಹಲವೆಡೆ ಸಿಗ್ನಲ್‌ಗಳಲ್ಲಿ ವ್ಯತ್ಯಯವಾಯಿತು.

ಗೋಣಿಕೊಪ್ಪಲು ಭಾಗದಲ್ಲಿ ಬಹುತೇಕ ಕಡೆ ಶುಕ್ರವಾರ ಸುರಿದದ್ದೇ ವರ್ಷದ ಮೊದಲ ಬಿರುಸಿನ ಮಳೆ ಎಂಬುದು ವಿಶೇಷ. ಅಲ್ಲಿ ಕೆಲವು ಭಾಗಗಳಲ್ಲಿ ಮಳೆಗೂ ಮುನ್ನ ಬೀಸಿದ ಗಾಳಿಗೆ ಕೆಂಬಣ್ಣದ ದೂಳು ಗಗನದೆತ್ತರಕ್ಕೂ ಚಾಚಿ ವಿಸ್ಮಿತಗೊಳಿಸಿತು. ಬಳಿಕ, ಸುರಿದ ಮಳೆ ದೂಳಿನ ಪ್ರಮಾಣವನ್ನು ಕಡಿಮೆಗೊಳಿಸಿತು.

ಮೊದಲ ಮಳೆಗೆ ಜನರ ಹರ್ಷ

ಗೋಣಿಕೊಪ್ಪಲು: ಪೊನ್ನಂಪೇಟೆ, ಗೋಣಿಕೊಪ್ಪಲು, ಬಿ.ಶೆಟ್ಟಿಗೇರಿ, ಕುಂದ, ಬೇಗೂರು, ಹುದಿಕೇರಿ ಭಾಗಕ್ಕೆ ಶುಕ್ರವಾರ ಸಂಜೆ ಬಿರುಗಾಳಿ ಗುಡುಗು ಸಹಿತ ಉತ್ತಮ ಮಳೆ ಬಿದ್ದಿತು. ಸಂಜೆ 6.30 ರ ವೇಳೆಗೆ ರಭಸದ ಗಾಳಿಯೊಂದಿಗೆ 20 ನಿಮಿಷಗಳ ಕಾಲ ಸುರಿಯಿತು.

ಭೀಕರ ಬಿಸಿಲಿನ ಸಂದರ್ಭದಲ್ಲಿ ಸುರಿದ ವರ್ಷದ ಮೊದಲ ಮಳೆಗೆ ಜನತೆ ಹರ್ಷಚಿತ್ತರಾದರು. ಮೇ ತಿಂಗಳು ಕಾಲಿಟ್ಟರೂ ಧರೆಗೆ ಹನಿಯದ ಮಳೆಗಾಗಿ ಮಸೀದಿ, ಮಂದಿರಗಳಲ್ಲಿ ಜನತೆ ಪ್ರಾರ್ಥನೆ ಮತ್ತು ಪೂಜೆಗೆ ಮೊರೆ ಹೋಗಿದ್ದರು. ತಡವಾಗಿಯಾದರೂ ಬಿದ್ದ ಮಳೆಗೆ ಸಂತಸ ರೈತರು, ಕಾಫಿ ಬೆಳೆಗಾರರು ಹಾಗೂ ಕೃಷಿ ಕಾರ್ಮಿಕರು ಸಂತಸಪಟ್ಟಿದ್ದಾರೆ.

ಸುಂಟಿಕೊಪ್ಪದಲ್ಲಿ ಧಾರಾಕಾರ ಮಳೆ

ಸುಂಟಿಕೊಪ್ಪ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಕಳೆದ ಹಲವು ದಿನಗಳಿಂದ ರಣಬಿಸಿಲಿನಿಂದ ತತ್ತರಿಸಿದ್ದ ಜನ ಸಂಜೆ ಬಿದ್ದ ಮಳೆಗೆ ನಿಟ್ಟುಸಿರುಬಿಟ್ಟರು.

ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಉರಿಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆ 6 ರ ಸಮಯದಲ್ಲಿ ಕತ್ತಲೆ ಆವರಿಸಿ ಗಾಳಿ, ಸಿಡಿಲಿನ ಸಹಿತ ಮಳೆ ಬೀಳಲಾರಂಭಿಸಿತು. ನಂತರ, ಕೆಲಕಾಲ ವಿರಾಮ ನೀಡಿ 7 ಗಂಟೆಯಿಂದ ಮತ್ತೇ ರಭಸದ ಮಳೆ ಸುರಿಯಲಾರಂಭಿಸಿತು.

ಕೆದಕಲ್, ಗರಗಂದೂರು, ಮಳೂರು, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಹರದೂರು ಸೇರಿದಂತೆ ಹಲವಡೆ ಉತ್ತಮ ಮಳೆಯಾಗಿದ್ದು, ಮಳೆ, ಗಾಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಗುಹ್ಯ, ಕರಡಿಗೋಡುವಿನ ಕೆಲವೆಡೆ ಮರಗಳು ಧರೆಗೆ

ಸಿದ್ದಾಪುರ: ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಗುಹ್ಯ ಹಾಗೂ ಕರಡಿಗೋಡುವಿನ ಕೆಲವೆಡೆ ಗಾಳಿಗೆ ಕೆಲ ಮರಗಳು ಧರೆಗುರುಳಿವೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ ಜನರಿಗೆ ವರುಣ ಕೊಂಚ ತಂಪೆರೆದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸುಂಟಿಕೊಪ್ಪದಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು.
ಸುಂಟಿಕೊಪ್ಪದಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು.
ಕುಶಾಲನಗರ ಪಟ್ಟಣದಲ್ಲಿ ಶುಕ್ರವಾರ ಸಂಜೆ ಗುಡುಗು ಮಿಂಚು ಸಹಿತ ಜೋರಾಗಿ ಗಾಳಿ ಮಳೆ ಸುರಿಯಿತು.
ಕುಶಾಲನಗರ ಪಟ್ಟಣದಲ್ಲಿ ಶುಕ್ರವಾರ ಸಂಜೆ ಗುಡುಗು ಮಿಂಚು ಸಹಿತ ಜೋರಾಗಿ ಗಾಳಿ ಮಳೆ ಸುರಿಯಿತು.

ಕುಶಾಲನಗರದಲ್ಲಿ ಗುಡುಗು ಮಿಂಚು ಸಹಿತ ಜೋರು ಗಾಳಿ ಮಳೆ

‌ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಗುಡುಗು ಮಿಂಚು ಸಹಿತ ಜೋರಾಗಿ ಗಾಳಿ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತು. ಸಂಜೆ ತುಂತುರು ಹಾನಿಗಳೊಂದಿಗೆ ಗಾಳಿ ಮಳೆ ಆರಂಭಗೊಂಡಿತು.

ಮಳೆ ಆರಂಭದಲ್ಲಿ ಬೀಸಿದ ಗಾಳಿಯಿಂದ ಎಲ್ಲೆಡೆ ಧೂಳೆಬ್ಬಿತು. ಕುಶಾಲನಗರ ಗುಡ್ಡೆಹೊಸೂರು ಹಾರಂಗಿ ಮುಳ್ಳುಸೋಗೆ ಕೂಡಿಗೆ ಹೆಬ್ಬಾಲೆ ಅಳುವಾರ ಸಿದ್ಧಲಿಂಗಪುರ ಬಾಣವಾರ ಆಲೂರು ಸೇರಿದಂತೆ ವಿವಿಧೆಡೆ ಒಂದು ತಾಸಿಗೂ ಹೆಚ್ಚು ಕಾಲ ಜೋರಾಗಿ ಮಳೆ ಸುರಿಯಿತು.

ದಿಢೀರನೆ ಬಂದ ಮಳೆಯಿಂದ‌ ಜನರು ಹರ್ಷಚಿತ್ತರಾದರೂ ಬೀದಿಬದಿ ವ್ಯಾಪಾರಿಗಳು ದಿಕ್ಕುತೋಚದಂತೆ ಓಡಿಹೋಗಿ ಸುರಕ್ಷತೆಯ ಸ್ಥಳ ಸೇರಿಕೊಂಡರು. ಗುಡುಗು ಮಿಂಚಿನ ಅರ್ಭಟಕ್ಕೆ ಕೆಲವರು ಭಯಭೀತಗೊಂಡರು. ವಿದ್ಯುತ್ ಪೂರೈಕೆ ಕಡಿತಗೊಂಡಿತು. ಬಿಸಿಲಿನ ಧಗೆಯಿಂದ ಕೂಡಿದ್ದ ವಾತಾವರಣ ಸ್ವಲ್ಪ ಮಟ್ಟಿಗೆ ತಂಪಾಯಿತು. ಬಿಸಿಲಿನಿಂದ ಬಾಡಿಹೋಗಿದ್ದ ಗಿಡಮರಗಳಿಗೆ ನೀರಿನ‌ ಆಸರೆ ಸಿಕ್ಕಿತು.

ಜೋರಾಗಿ ಮಳೆ ಬಂದ ಹಿನ್ನೆಲೆಯಲ್ಲಿ ರೈತರು ಕೈಗೊಂಡಿದ್ದ ಶುಂಠಿ ಜೋಳ ಕೆಸ ಸುವರ್ಣ ಗೆಡ್ಡೆ ಕಾಫಿ ತೋಟಗಳಿಗೆ ಅನುಕೂಲವಾಯಿತು .ಇದರಿಂದ ರೈತಾಪಿ ವರ್ಗಕ್ಕೆ ಸ್ವಲ್ಪ ಮಟ್ಟಿಗೆ ಸಂತೋಷವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT