ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಟ್ಟ ಕಾನನದೊಳಗೆ ‘ಮಳೆ ಕಾಡು’ ದಿನಾಚರಣೆ

ಕೊಡಗಿನ ಗಡಿಭಾಗದಲ್ಲೊಂದು ಅಪರೂಪದ ಕಾರ್ಯಕ್ರಮ, ನೂರಾರು ಮಂದಿ ಭಾಗಿ
Published 23 ಜೂನ್ 2024, 5:09 IST
Last Updated 23 ಜೂನ್ 2024, 5:09 IST
ಅಕ್ಷರ ಗಾತ್ರ

ಮಡಿಕೇರಿ: ಅವಸಾನದತ್ತ ಮುಖ ಮಾಡಿರುವ ಮಳೆ ಕಾಡುಗಳನ್ನು ರಕ್ಷಿಸದೇ ಹೋದರೆ ಉಳಿಗಾಲ ಇಲ್ಲ. ಮಳೆ ಕಾಡು ಮಾತ್ರವಲ್ಲ, ಎಲ್ಲ ಬಗೆಯ ಕಾಡುಗಳನ್ನು ಸಂರಕ್ಷಿಸಲೇಬೇಕು ಎಂಬ ಒಕ್ಕೊರಲ ಕೂಗು ಕೊಡಗಿನ ಗಡಿಭಾಗ ಮಾಕುಟ್ಟದ ದಟ್ಟವಾದ ಮಳೆಕಾಡಿನೊಳಗಿಂದ ವ್ಯಕ್ತವಾಯಿತು.

ದಟ್ಟ ಕಾನನದ ಮಧ್ಯೆ ವಿರಾಜಪೇಟೆ ಪ್ರಾದೇಶಿಕ ವಿಭಾಗದ ಮಾಕುಟ್ಟದ ವಲಯದ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ನಡೆದ ‘ವಿಶ್ವ ಮಳೆ ಕಾಡು’ ದಿನಾಚರಣೆಯಲ್ಲಿ ಮಳೆಕಾಡಿನ ಅಳಿವು ಉಳಿವುಗಳ ಕುರಿತೇ ಚರ್ಚೆಗಳು ನಡೆದವು. ಇಡೀ ದಿನ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಹಲವು ವಿಷಯಗಳನ್ನು ಕುರಿತು ಮಾತನಾಡಿದರು. ನೂರಾರು ಮಂದಿ ಇವುಗಳಿಗೆ ಕಿವಿಯಾದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ. ದೇವಗಿರಿ ಅವರು ಮಾತನಾಡಿ, ‘ಪ್ರಪಂಚದಲ್ಲಿ ಬೆರಳೆಣಿಕೆಯಷ್ಟು ಇರುವ ಮಳೆಕಾಡುಗಳು ವರ್ಷಗಳು ಉರುಳಿದಂತೆ ಕ್ಷೀಣಿಸುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಭೂಮಿಯ ತಾಪಮಾನ 6 ಡಿಗ್ರಿಯಷ್ಟು ಹೆಚ್ಚಾಗುವ ಸಂಭವ ಇದೆ’ ಎಂದು ಎಚ್ಚರಿಕೆ ನೀಡಿದರು.

ನಂತರ, ಅವರು ಪ್ರಪಂಚದಲ್ಲಿ ಮಳೆಕಾಡುಗಳ ಹಂಚಿಕೆ, ಸಮಭಾಜಕ ವೃತ್ತದಲ್ಲೇ ಅತಿ ಹೆಚ್ಚು ಕಾಡುಗಳು ಏಕಿವೆ ಎಂಬ ಕುರಿತು, ಜಾಗತಿಕ ತಾಪಮಾನ ಕುರಿತು, ಪಶ್ಚಿಮ ಘಟ್ಟಗಳ ಮಹತ್ವದ ಕುರಿತು ಮಾತನಾಡಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ.ಕುಶಾಲಪ್ಪ ಅವರು ಮಳೆಕಾಡುಗಳ ಪ್ರಯೋಜನ ಮತ್ತು ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು.

ವಲಯ ಅರಣ್ಯಾಧಿಕಾರಿ ಸುಹನಾ ಹರೀಶ್ ಅತ್ತಾವರ್ ಮಾತನಾಡಿ, ‘ಮಾಕುಟ್ಟ ವಲಯದಲ್ಲಿ ಕಳೆದ 20 ವರ್ಷದಲ್ಲಿ ಸರಾಸರಿ 5,500 ಮಿ.ಮೀನಷ್ಟು ಮಳೆಯಾಗಿದೆ. ಇಲ್ಲಿರುವ ಮಳೆಕಾಡಿನಲ್ಲಿ ಅಪಾರವಾದ ಜೀವವೈವಿಧ್ಯ ಇದೆ’ ಎಂದು ಹೇಳಿದರು.

ಈ ಮಳೆಕಾಡುಗಳು ವಿಶ್ವದಲ್ಲಿರುವ ಶೇ 20ರಷ್ಟು ಜೀವವೈವಿಧ್ಯವನ್ನು ಹೊಂದಿವೆ. ಮಳೆ ಕಾಡುಗಳನ್ನು ಕಾಪಾಡಿಕೊಂಡರೆ ಈ ಜೀವವೈವಿಧ್ಯಗಳೂ ಉಳಿಯುತ್ತವೆ ಎಂದರು.

ನಂತರ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲದಯ ಉಪನ್ಯಾಸಕರು, ವಿದ್ಯಾರ್ಥಿಗಳು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು, ಶಿವಮೊಗ್ಗ ಇರುವಕ್ಕಿ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಮಾಕುಟ್ಟ ಕಿರಿಯ ಪ್ರಾಥಮಿಕ ಮಲಯಾಳಂ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹೆಗ್ಗಳದ ಗ್ರಾಮಸ್ಥರು ಸುಮಾರು 2 ಕಿ.ಮೀವರೆಗೆ ಮಳೆಕಾಡು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ಕಿರುರಸಪ್ರಶ್ನೆ ಕಾರ್ಯಕ್ರಮವೂ ನಡೆಯಿತು.

ಶೃಂಗೇರಿಯವರ ಜೆಸಿಬಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಉಡುಪ ಹಾಗೂ ಪ್ರೊ.ಸತೀಶ್ ಅವರು ನಡಿಗೆ ವೇಳೆ ಜೀವವೈವಿಧ್ಯದ ಪರಿಚಯ ಮಾಡಿಸಿದರು.

ಡಿಸಿಎಫ್ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಕೆ.ಎ. ನೆಹರು ಸ್ವಾಗತಿಸಿದರು. ಡಿಎಆರ್‌ಎಫ್ಒ ಕಿರಣ್ ಗಣೇಶ್ ಆಚಾರಿ ನಿರೂಪಣೆ ಮಾಡಿದರು. ವಿಭಾಗದ ಎಲ್ಲ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಎಲ್ಲ ಮುಂಚೂಣಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಮಾಕುಟ್ಟ ಅರಣ್ಯದೊಳಗೆ ನಡಿಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಮಾಕುಟ್ಟ ಅರಣ್ಯದೊಳಗೆ ನಡಿಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ.ದೇವಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಜಿ.ಎಂ.ದೇವಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT