ಗುರುವಾರ , ಜನವರಿ 23, 2020
27 °C
ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕೊಡಗು ಗಣರಾಜ್ಯೋತ್ಸವ ಆಚರಣೆ : ಐತಿಹಾಸಿಕ ಸಂದೇಶದ ಸ್ತಬ್ಧಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜಿಲ್ಲಾಡಳಿತದಿಂದ ಜನವರಿ 26ರಂದು ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆ ನಡೆಯಿತು.

ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಗಣರಾಜ್ಯೋತ್ಸವ ನಡೆಯಲಿದೆ. ಕಳೆದ ಬಾರಿಯಂತೆ ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಬೆಳಗಿನ ಹಾಗೂ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅದೇ ರೀತಿ ಸ್ತಬ್ಧಚಿತ್ರಗಳನ್ನು ಸಹ ವಿಷಯಾಧಾರಿತವಾಗಿ ಆಕರ್ಷಣೀಯವಾಗಿ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಗಣರಾಜ್ಯೋತ್ಸವ ಆಚರಣೆಗೆ ವಿವಿಧ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ವಿವಿಧ ಕಾರ್ಯಕ್ರಮದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಐತಿಹಾಸಿಕ ಸಂದೇಶವನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡುವಂತೆ ಎಲ್ಲಾ ಅಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

ಮೆರವಣಿಗೆಯನ್ನು ನಗರದ ಕೋಟೆ ಆವರಣದಿಂದ ಪ್ರಾರಂಭಿಸಿ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಾಗುವಂತೆ ನೋಡಿಕೊಳ್ಳಲು ಮೆರವಣಿಗೆ ಸಮಿತಿಗೆ ಸೂಚಿಸಲಾಯಿತು. ತಿಂಡಿ, ಲಘು ಉಪಾಹಾರ ಜವಾಬ್ದಾರಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇಲುಸ್ತುವಾರಿ ಆಹಾರ ಸಮಿತಿಗೆ ವಹಿಸಲಾಯಿತು. ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಗಣರಾಜ್ಯೋತ್ಸವ ದಿನದಂದು ಕುಡಿಯುವ ನೀರು ಒದಗಿಸುವುದು, ಜತೆಗೆ ಸ್ವಚ್ಛತೆ ಸಂಬಂಧ ಅಗತ್ಯವಿರುವ ಕಡೆ ಕಸದಬುಟ್ಟಿ ಇಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಲಾಯಿತು.

ವೇದಿಕೆಯನ್ನು ಲೋಕೋಪಯೋಗಿ ಹಾಗೂ ಜಿ.ಪಂ ಎಂಜಿನಿಯರ್ ವಿಭಾಗದವರು ಅಚ್ಚುಕಟ್ಟಾಗಿ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಲಾಯಿತು.

ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಕಾರ್ಯಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಶಿವಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ, ಮುದ್ರಾಂಕ ಇಲಾಖೆಯ ಉಪ ನಿರ್ದೇಶಕ ಸಿದ್ದರಾಜು, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಜಗನ್ನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧಿಕಾರಿ ವೆಂಕಟೇಶ್, ನಗರಸಭೆ ಸ್ವಚ್ಛತೆ ವಿಭಾಗದ ಅಧಿಕಾರಿ ನಾಚಪ್ಪ, ಜಿ.ಪಂ ಸಹಾಯಕ ನಿರ್ದೇಶಕ ಜೀವನ್ ಕುಮಾರ್, ಐಟಿಡಿಪಿ ಇಲಾಖೆ ವ್ಯವಸ್ಥಾಪಕ ದೇವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ತಹಶೀಲ್ದಾರ್‌ ಮಹೇಶ್, ಮಲ್ಲೇಶ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಮ್ಮಿ ಸಿಕ್ವೇರಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು