ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ |ಕಲ್ಲು ಗಣಿಗಾರಿಕೆಯಿಂದ ರಸ್ತೆಗೆ ಹಾನಿ: ಡಿ.ಸಿಗೆ ದೂರು ನೀಡಲು ನಿರ್ಧಾರ

ಡಿ.ಸಿಗೆ ದೂರು ನೀಡಲು ಕೂಡುಮಂಗಳೂರು ಸಾಮಾನ್ಯ ಸಭೆಯಲ್ಲಿ ನಿರ್ಧಾರ
Published 13 ಫೆಬ್ರುವರಿ 2024, 15:31 IST
Last Updated 13 ಫೆಬ್ರುವರಿ 2024, 15:31 IST
ಅಕ್ಷರ ಗಾತ್ರ

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ಕಲ್ಲು ಗಣಿಗಾರಿಕೆಯಿಂದ ಕಲ್ಲು ಸಾಗಣೆಯಿಂದ ರಸ್ತೆ ಸಂಪೂರ್ಣ ಹಾನಿಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲು ಮಂಗಳವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಲ್ಲು ಗಣಿಗಾರಿಕೆಯಿಂದ ನಿತ್ಯ ಹತ್ತಾರು ದೊಡ್ಡ ಲಾರಿಗಳಲ್ಲಿ ಕಲ್ಲು ಸಾಗಾಟ ಮಾಡಲಾಗುತ್ತಿದ್ದು, ಇದರಿಂದ ರಸ್ತೆಗೆ ಹಾನಿ ಉಂಟಾಗುತ್ತಿದೆ ಎಂದು ಸದಸ್ಯ ಕೆ.ಬಿ.ಶಂಸುದ್ದೀನ್ ದೂರಿದರು.

ಈ ಕುರಿತು ನಡೆದ ಚರ್ಚೆಯಲ್ಲಿ ಎಲ್ಲಾ ಸದಸ್ಯರು ಗಣಿಗಾರಿಕೆ ವಿರುದ್ಧ ದೂರು ನೀಡಬೇಕು ಎಂದು ಒತ್ತಾಯಿಸಿದ್ದರಿಂದ ಪಂಚಾಯಿತಿ ವತಿಯಿಂದ ನಿಯೋಗ ತೆರಳಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಲು ತೀರ್ಮಾನಿಸಲಾಯಿತು.

ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲು ಪಂಚಾಯಿತಿ ಸದಸ್ಯರು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ನೀರು ಪೋಲು ಮಾಡುವವರ ವಿರುದ್ಧ ಅಗತ್ಯ ಕ್ರಮವಹಿಸಲು ತೀರ್ಮಾನಿಸಲಾಯಿತು.

ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

‘ಕೊಳವೆಬಾವಿಯನ್ನು ಮತ್ತು ಅಂತರ್ಜಲ ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಬೇಕು’ ಎಂದು ಸದಸ್ಯರು ಸಲಹೆ ನೀಡಿದರು.

‘15ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಸದಸ್ಯರೊಂದಿಗೆ ಚರ್ಚೆ ನಡೆಸಲಾಯಿತು.
ಕೂಡುಮಂಗಳೂರು ವ್ಯಾಪ್ತಿಯಲ್ಲಿ ಕ್ಲಬ್‌ಗಳು ಆರಂಭವಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ’ ಎಂದು ಸದಸ್ಯರಾದ ಫಿಲೋಮಿನಾ, ಗೌರಮ್ಮ, ಕೆ.ಬಿ.ಶಂಸುದ್ದೀನ್ ದೂರಿದರು.

‘ಚಿಕ್ಕತ್ತೂರಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಸಲುವಾಗಿ ಸರ್ಕಾರ ಜಾಗ ಮಂಜೂರು ಮಾಡಿದ್ದು, ತಾಂತ್ರಿಕ ಸಮಸ್ಯೆಗಳು ಎದುರಾಗಿದೆ. ಆದಷ್ಟು ಬೇಗನೇ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚುವ ಕೆಲಸವನ್ನು ಮಾಡಲಾಗುವುದು’ ಎಂದು ಪಿಡಿಒ ಸಂತೋಷ್ ಸಭೆಗೆ ಮಾಹಿತಿ ನೀಡಿದರು.

ಎಸ್ಸಿ,‌ ಎಸ್ಟಿ ಜನಾಂಗದವರು ಅಧಿಕವಾಗಿರುವ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಕಾಮಗಾರಿಗಳ ಪಟ್ಟಿಯನ್ನು ಐಟಿಡಿಪಿ ಇಲಾಖೆಯಿಂದ ಕೇಳಿದ್ದು, ಆದಷ್ಟು ಬೇಗ ಸದಸ್ಯರು ಅಗತ್ಯ ಕಾಮಗಾರಿಗಳ ಪಟ್ಟಿಯನ್ನು ನೀಡುವಂತೆ ಪಿಡಿಒ ಮನವಿ ಮಾಡಿದರು.

ಈ ಸಂದರ್ಭ ಉಪಾಧ್ಯಕ್ಷೆ ಶಶಿಕಲಾ, ಪಂಚಾಯಿತಿ ಸದಸ್ಯರು, ಲೆಕ್ಕ ಸಹಾಯಕಿ ಮಮತಾ, ಬಿಲ್ ಕಲೆಕ್ಟರ್ ಅವಿನಾಶ್ ಹಾಗೂ ಸಿಬ್ಬಂದಿ ಇದ್ದರು.

ತಡರಾತ್ರಿಯೂ ತೆರೆದಿರುವ ಮದ್ಯದಂಗಡಿ:

ದೂರು ‘ಸುಂದರನಗರದಲ್ಲಿ ತಡರಾತ್ರಿಯಲ್ಲಿಯೂ ಮದ್ಯದಂಗಡಿ ತೆರೆದಿರುತ್ತದೆ. ಇದರಿಂದ ಗಲಾಟೆ ಗದ್ದಲಗಳು ಅಧಿಕವಾಗುತ್ತಿದೆ. ಬಸ್ ತಂಗುದಾಣದಲ್ಲಿ ಮದ್ಯಸೇವನೆಯ ಸ್ಥಳವಾಗಿ ಮಾರ್ಪಟ್ಟಿದೆ. ಇದರ ಬಗ್ಗೆ ಸಂಬಂಧಿಸಿದ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ’ ಸದಸ್ಯರು ಆಗ್ರಹಿಸಿದರು. ‌ ಹಾಗೆಯೇ ಸುಂದರನಗರ ಸಮುದಾಯ ಭವನದಲ್ಲಿ ಗಾಂಜಾ ಹಾಗೂ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ ಎಂದು ಸದಸ್ಯರು ದೂರಿದರು. ಸುಂದರನಗರದಲ್ಲಿ ಬಹು ಅಂತಸ್ತಿನ ಅನಧಿಕೃತ ಕಟ್ಟಡ ನಿರ್ಮಾಣವಾಗಿದ್ದು ಇದರ ಬಗ್ಗೆ ಕ್ರಮವಹಿಸಲು ಕಂದಾಯ ಇಲಾಖೆಗೆ ಪತ್ರ ಬರೆಯುವಂತೆ ವಾರ್ಡ್ ಸದಸ್ಯರಾದ ಆಶಾ ದೀಪ ಒತ್ತಾಯಿಸಿದರು. ನಂತರ ಖರ್ಚು ವೆಚ್ಚದ ಬಗ್ಗೆ ಚರ್ಚೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT