ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು, ನೀರು ಸಂರಕ್ಷಣೆಯ ಮಹತ್ವ ಸಾರಿದ 41 ವಿದೇಶಿ ಬೈಕ್ ಸವಾರರು

ಮಂಜಿನ ನಗರಿ ಪ್ರವೇಶಿಸಿದ ರೈಡ್ ಫಾರ್ ರೋಟರಿ
Last Updated 24 ಜನವರಿ 2023, 12:59 IST
ಅಕ್ಷರ ಗಾತ್ರ

ಮಡಿಕೇರಿ: ಮಣ್ಣು ಮತ್ತು ನೀರಿನ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು 16 ದೇಶಗಳ 41 ಬೈಕ್‌ ಸವಾರರು ನಡೆಸುತ್ತಿರುವ ‘ರೈಡ್ ಫಾರ್ ರೋಟರಿ’ ಜಾಥಾ ಮಂಗಳವಾರ ನಗರಕ್ಕೆ ಬಂದಿತು. ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸ್ವಾಗತ ಕೋರಲಾಯಿತು.

ರೋಟರಿ ಜಿಲ್ಲೆ 3181ನ ಈ ಬೈಕ್ ಜಾಥಾದಲ್ಲಿ ಭಾಗಹಿಸಿದ್ದ ನ್ಯೂಯಾರ್ಕ್‌ನ ಜೈನ್ಸಿ ಕ್ಲೇವರ್ಡ್ ಮಾತನಾಡಿ, ‘ಭಾರತದಲ್ಲಿ ಹಿಂದೆಂದಿಗಿಂತಲೂ ಈಗ ಶುಚಿತ್ವಕ್ಕೆ ಆದ್ಯತೆ ನೀಡುತ್ತಿರುವುದು ಸಮಾಧಾನದ ಅಂಶ. ಜಗತ್ತಿನ ಪ್ರತೀ ಜೀವಿಯೂ ನೀರು ಮತ್ತು ಮಣ್ಣಿನ ರಕ್ಷಣೆಗೆ ಪ್ರತೀಯೊಬ್ಬರೂ ಪಣ ತೊಡಬೇಕಾಗಿದೆ’ ಎಂದು ಹೇಳಿದರು.

ಜಾಥಾದ ಮಾರ್ಗದರ್ಶಕ ರಾಘವೇಂದ್ರ ಯಾರಂಗಲ್ ಮಾತನಾಡಿ, ‘ಜ.15 ರಂದು ತಮಿಳುನಾಡಿನ ಮಹಾಬಲೀಪುರಂನಲ್ಲಿ ರೈಡ್ ಫಾರ್ ರೋಟರಿಯ ಜಾಥಾ ಆರಂಭವಾಗಿ ತಮಿಳುನಾಡು, ಆಂಧ್ರ ಮೂಲಕ ಕರ್ನಾಟಕ ಪ್ರವೇಶಿಸಿದೆ. ಜ. 27 ರಂದು ಮಂಗಳೂರಿನಲ್ಲಿ ನಡೆಯಲಿರುವ ರೋಟರಿ ಜಿಲ್ಲಾ ಸಮಾವೇಶದಲ್ಲಿ ಸಮಾಪನಗೊಳ್ಳಲಿದೆ. ಈ ವರ್ಷವೂ ರೈಡ್ ಫಾರ್ ರೋಟರಿಗೆ ಅತ್ಯುತ್ತಮ ಸ್ಪಂದನೆ ದೊರಕಿದೆ’ ಎಂದು ತಿಳಿಸಿದರು.

ರೋಟರಿ ಸಹಾಯಕ ಗವರ್ನರ್ ಕೆ.ಎಸ್.ರತನ್ ತಮ್ಮಯ್ಯ ಮಾತನಾಡಿ, ‘ಕಾಫಿ ಕರಿಮೆಣಸು ಬೆಳೆಗಳ ಕೊಡಗನ್ನು ವಿದೇಶಿ ಪ್ರತಿನಿಧಿಗಳು ಅಪಾರವಾಗಿ ಮೆಚ್ಚಿದ್ದು ಕೊಡಗಿನ ಆತಿಥ್ಯವನ್ನು ಮತ್ತೊಮ್ಮೆ ರೋಟರಿ ಮೂಲಕ ಪರಿಚಯಿಸಿದ್ದೇವೆ. ಕೊಡಗಿನ ಹಲವು ರೋಟರಿ ಸದಸ್ಯರು ತಮ್ಮ ಸಂಸ್ಥೆಗಳ ಧ್ವಜಗಳನ್ನು ವಿದೇಶಿ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ವಿದೇಶದ ರೋಟರಿ ಸಂಸ್ಥೆಗಳ ಅನೇಕ ಯೋಜನೆಗಳಿಗೆ ರೈಡ್ ಫಾರ್ ರೋಟರಿ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಫಲಕದೊಂದಿಗೆ ತಮ್ಮ ಜಾಥಾದ ಉದ್ದೇಶದ ಮಾಹಿತಿ ನೀಡಿದ ಸವಾರರು ತರುವಾಯ ಕಾಲೇಜು ರಸ್ತೆ, ರಾಜಾಸೀಟ್ ಮೂಲಕ ಮೇಕೇರಿ ಗ್ರಾಮಕ್ಕೆ ತೆರಳಿದರು.

12 ಮಹಿಳಾ ಬೈಕ್ ಸವಾರರೂ ಸೇರಿದಂತೆ 16 ದೇಶಗಳ 41 ಬೈಕ್ ಸವಾರರು ಜಾಥಾದಲ್ಲಿ ಇದ್ದರು.

ರೋಟರಿ ರೈಡ್ ಫಾರ್ ರೋಟರಿಯ ಜಿಲ್ಲಾ ಸಮಿತಿ ಅಧ್ಯಕ್ಷ ಕೖಷ್ಣ ನಾರಾಯಣ ಮುಳಿಯ, ರೋಟರಿ ಮಾಜಿ ಗವರ್ನರ್ ಡಾ.ರವಿ ಅಪ್ಪಾಜಿ, ರೋಟರಿ ವಲಯ 6 ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿ ಅಧ್ಯಕ್ಷ ಕಾಂಡಂಡ ಕಾರ್ಯಪ್ಪ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಅಂತರರಾಷ್ಟ್ರೀಯ ಸೇನಾ ಸಮಿತಿ ಅಧ್ಯಕ್ಷ ದೇವಣೀರ ಕಿರಣ್, ಮುಖಂಡರಾದ ಗೀತಾ ಗಿರೀಶ್, ಶರತ್, ಅಮರ್, ಇನ್ನರ್ ವೀಲ್ ಸಂಸ್ಥೆಯ ಮುಂದಿನ ವರ್ಷದ ನಿಯೋಜಿತ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT