ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ| ಹೋಂಸ್ಟೇ, ತೋಟದ ಮಾಲೀಕರಿಗೆ ಎಸ್ಪಿ ಸೂಚನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಹತ್ವದ ಸಭೆ
Last Updated 3 ಮಾರ್ಚ್ 2023, 5:56 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಹೋಂಸ್ಟೇ ಮಾಲೀಕರು ಹಾಗೂ ತೋಟದ ಮಾಲೀಕರೊಂದಿಗೆ ಗುರುವಾರ ಮಹತ್ವದ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಹಲವು ಸೂಚನೆಗಳನ್ನು ನೀಡಿದರು.

ಹೋಂಸ್ಟೇಗಳಲ್ಲಿ ತಂಗಲು ಬರುವವರ ಹೆಸರು, ವಿಳಾಸ, ಗುರುತಿನ ಚೀಟಿ, ಭಾವಚಿತ್ರ, ಆಧಾರ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಪಡೆದು ಕಡತದಲ್ಲಿ ನಮೂದಿಸಿ ಅದನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಗಾಂಜಾ ಸೇವನೆ ಕುರಿತು ದೂರುಗಳು ಕೇಳಿ ಬರುತ್ತಿದ್ದು, ಗಾಂಜಾ ಕುರಿತು ತಪಾಸಣೆ ನಡೆಸಬೇಕು ಎಂದು ಹೇಳಿದರು.

ಹೋಂಸ್ಟೇ ಒಳ ಆವರಣ, ಹೊರ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು, ಪ್ರವಾಸೋದ್ಯಮ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿರಬೇಕು, ಸಂಬಂಧಪ‍ಟ್ಟ ಇಲಾಖೆಯಿಂದ ನಿರಾಪೇಕ್ಷಣ ಪತ್ರ ಪಡೆದಿರಬೇಕು, ಕಾಲಕಾಲಕ್ಕೆ ನವೀಕರಣ ಮಾಡಿರಬೇಕು ಎಂದು ತಿಳಿಸಿದರು.

ಪೊಲೀಸ್ ಅಧಿಕಾರಿಗಳ ಜತೆಗೆ ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳಾದ ಜೋಸೆಫ್ ಸಾಮ್, ಬಿ.ಸಿ.ಚೆಂಗಪ್ಪ, ಸಿ.ಎಸ್.ಧನಂಜಯ, ಬಿ.ಜಿ.ಅನಂತಶಯನ, ನಳಿನಿ ಅಚ್ಚಯ್ಯ, ಮೊಹಂತಿ ಗಣೇಶ್, ನವೀನ್ ಅಂಬಿಕ್, ಭರತ್, ವಿದ್ಯಾಚಂಗಪ್ಪ‍ ಇದ್ದರು.

ತೋಟದ ಮಾಲೀಕರಿಗೆ ಸೂಚನೆ

ಕೊಡಗು ಜಿಲ್ಲೆಯ ಪ್ಲಾಂಟರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಲವು ಸೂಚನೆಗಳನ್ನು ನೀಡಿದರು.

ಅಲ್ಯುಮಿನಿಯಂ ಏಣಿಯನ್ನು ಬಳಕೆ ಮಾಡಬಾರದು, ಬಿದಿರಿನ ಏಣಿ ಅಥವಾ ಫೈಬರ್‌ ಏಣಿಗಳನ್ನು ಬಳಕೆ ಮಾಡಬೇಕು, ಕಾರ್ಮಿಕರ ಪೂರ್ವಾಪರಗಳನ್ನು ತಿಳಿದುಕೊಂಡು, ಅವರ ಗುರುತಿನಚೀಟಿ, ವಿಳಾಸ, ಭಾವಚಿತ್ರಗಳನ್ನು ಪಡೆದುಕೊಂಡ ನಂತರವಷ್ಟೇ ಅವರಿಗೆ ಕೆಲಸ ನೀಡಬೇಕು ಎಂದು ಹೇಳಿದರು.

ತೋಟದ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಕಾರ್ಮಿಕರು ಕಾನೂನು ಬಾಹಿರ ಕೃತ್ಯ ನಡೆಸಿರುವುದು ಗಮನಕ್ಕೆ ಬಂದಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಡಿವೈಎಸ್‌ಪಿ ಜಗದೀಶ್, ಇನ್‌ಸ್ಪೆಕ್ಟರ್ ಶಿವಶಂಕರ್, ಯು.ಉಮೇಶ್, ಎನ್.ಸಿ.ನಾಗೇಗೌಡ, ಪ್ಲಾಂಟರ್ಸ್ ಅಸೋಸಿಯೇಷನ್‌ ಪ‍ದಾಧಿಕಾರಿಗಳಾದ ಸಿ.ಯು.ಅಶೋಕ್, ಎ.ನಂದ ಬೆಳ್ಳಿಯಪ್ಪ, ಎಂ.ಎಂ.ಚಂಗಪ್ಪ, ಬಿ.ವಿ.ಮೋಹನದಾಸ್, ಸಿ.ಕೆ.ಬೆಳ್ಳಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT