ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಶಿಕ್ಷಕರಿಲ್ಲದೆ ಪರೀಕ್ಷೆ ಗೆದ್ದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು

ಕೊಡಗಿನ ಕರಿಕೆಯ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರಿಂದ ಪಾಠ!
Published 10 ಮೇ 2024, 4:54 IST
Last Updated 10 ಮೇ 2024, 4:54 IST
ಅಕ್ಷರ ಗಾತ್ರ

ಮಡಿಕೇರಿ: ಶೈಕ್ಷಣಿಕ ವರ್ಷದ ಆರಂಭದಲ್ಲೆ ಅತಿಥಿ ಶಿಕ್ಷಕರು ಸಿಗದೇ ಅತಂತ್ರವಾಗಿದ್ದ ತಾಲ್ಲೂಕಿನ ಕೇರಳ ಗಡಿಭಾಗದಲ್ಲಿರುವ ಕರಿಕೆ ಸರ್ಕಾರಿ ಪ್ರೌಢಶಾಲೆ ಶೇ 86.83ರಷ್ಟು ಫಲಿತಾಂಶ ಪಡೆದಿದೆ. ಈ ಶಾಲೆಯ 17 ವಿದ್ಯಾರ್ಥಿಗಳಿಗೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹಶಾಲೆ, ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ವರ್ಚುವಲ್ ಮೂಲಕ ತರಗತಿಗಳನ್ನು ತೆಗೆದುಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಿವೆ.

ವರ್ಚುವಲ್ ತರಗತಿಯಲ್ಲಿ ಭಾಗಿಯಾದ 17 ವಿದ್ಯಾರ್ಥಿಗಳ ಪೈಕಿ ಇಬ್ಬರು ಮಾತ್ರವೇ ಅನುತ್ತೀರ್ಣರಾಗಿದ್ದಾರೆ. ಇಬ್ಬರು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಗಡಿಭಾಗದಲ್ಲಿ ವಿಜ್ಞಾನ ವಿಷಯಕ್ಕೆ ಅತಿಥಿ ಶಿಕ್ಷಕರು ಸಿಗದಿರುವುದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಣ ಇಲಾಖೆಯ ಅಧಿಕಾರಿಗಳ ಚಿಂತೆಗೂ ಕಾರಣವಾಗಿತ್ತು. ಆಗ ಡಿಡಿಪಿಐ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದ ಸೌಮ್ಯಾ ಪೊನ್ನಪ್ಪ ಹಾಗೂ ಬಿಇಒ ದೊಡ್ಡೇಗೌಡ ಅವರು ಸುಳ್ಯದ ಸ್ನೇಹಶಾಲೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರ ನೆರವು ಕೋರಿದರು. ಸುಳ್ಯದ ಸ್ನೇಹಶಾಲೆಯ ಶಿಕ್ಷಕರು ವರ್ಚುವೆಲ್‌ ಮೂಲಕ ಹೇಳುತ್ತಿದ್ದ ಪಾಠವನ್ನು ಕರಿಕೆಯ ಶಾಲೆಯಲ್ಲಿ ಕುಳಿತ ವಿದ್ಯಾರ್ಥಿಗಳು ನೇರವಾಗಿ ಡಿಜಿಟಲ್ ಫಲಕದ ಮೂಲಕ ಆಲಿಸುತ್ತಿದ್ದರು. ಇದಕ್ಕೆ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದರ್ ನಾಯರ್ ಅವರು ವೇಗದ ಇಂಟರ್‌ನೆಟ್ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿಕೊಟ್ಟಿದ್ದರು. 

ಈ ಬಗೆಯ ತಾಂತ್ರಿಕ ಪ್ರಯತ್ನಕ್ಕೆ ಬೆಂಗಳೂರಿನ ‘ರೈಟ್‌ ಟು ಲೀವ್’ ಎಂಬ ಸರ್ಕಾರೇತರ ಸಂಸ್ಥೆ ನೆರವು ನೀಡಿತು. ಕರಿಕೆಯ ಹರೀಶ್ ಎಂಬುವವರು ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ನಿರ್ವಹಣೆ ಮಾಡಿದರು. ಹೀಗೆ, ಶಿಕ್ಷಕರಿಲ್ಲದಿದ್ದಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಷ್ಟವಾಗದಂತೆ ಮಾಡಲು ಸಾಧ್ಯ ಎಂಬ ಪರಿಹಾರದ ಬೆಳಕನ್ನು ಈ ಪ್ರಯೋಗದ ಮೂಲಕ ಕೊಡಗು ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಂಡುಕೊಂಡರು.

‘ಶೈಕ್ಷಣಿಕ ವರ್ಷದ ಆರಂಭದಲ್ಲೇ ಅತಿಥಿ ಶಿಕ್ಷಕರು ಸಿಗದೇ ನಮಗೆ ಆತಂಕ ಎದುರಾಗಿತ್ತು. ಆಗ ಇಲಾಖೆಯ ಅಧಿಕಾರಿಗಳು ನಡೆಸಿದ ಪ್ರಯತ್ನದಿಂದ ಸುಳ್ಯದ ಸ್ನೇಹಶಾಲೆಯ ಶಿಕ್ಷಕರು ನಿತ್ಯವೂ ವರ್ಚುವಲ್‌ ತರಗತಿಗಳ ಮೂಲಕ ವಿಜ್ಞಾನ ವಿಷಯವನ್ನು ಬೋಧಿಸಿದರು. ವಾರದಲ್ಲಿ ಒಂದು ವರ್ಚ್ಯುವಲ್ ತರಗತಿಯನ್ನು ಮೈಸೂರಿನ ಸ್ವಾಮಿ ವಿವೇಕಾನಂದ ಮೂವ್‌ಮೆಂಟ್‌ನವರು ನಡೆಸಿಕೊಟ್ಟರು. ಆಗಾಗ್ಗೆ ಬೇರೆಡೆಯಿಂದ ಶಿಕ್ಷಕರನ್ನು ಕರೆ ತಂದು ಪಾಠ ಮಾಡಿಸಿದರು. ಎಲ್ಲರ ಶ್ರಮ ಫಲ ನೀಡಿತು’ ಎಂದು ಮುಖ್ಯ ಶಿಕ್ಷಕ ಜಿ.ರಾಜಶೇಖರ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಸದ್ಯ, ಇಲ್ಲಿ ಇವರೊಬ್ಬರೇ ಕಾಯಂ ಶಿಕ್ಷಕರಿದ್ದು, ಉಳಿದವರೆಲ್ಲರೂ ಅತಿಥಿ ಶಿಕ್ಷಕರೇ ಆಗಿದ್ದಾರೆ.

ಕೊಡಗು ಜಿಲ್ಲೆಯ ಕರಿಕೆ ಗ್ರಾಮದ ಸರ್ಕಾರಿ  ಪ್ರೌಢಶಾಲೆ
ಕೊಡಗು ಜಿಲ್ಲೆಯ ಕರಿಕೆ ಗ್ರಾಮದ ಸರ್ಕಾರಿ  ಪ್ರೌಢಶಾಲೆ
ಈಗ ಉಚಿತವಾಗಿ ವರ್ಚ್ಯುವಲ್ ಮೂಲಕ ತರಗತಿಗಳನ್ನು ನಡೆಸಿಕೊಡಲಾಗಿದೆ. ಸರ್ಕಾರ ಬೆಂಬಲ ನೀಡಿದರೆ ಶಿಕ್ಷಕರಿಲ್ಲದ ಇನ್ನಿತರ ಶಾಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು
–ಡಾ.ಚಂದ್ರಶೇಖರ ದಾಮ್ಲೆ, ಸ್ನೇಹಶಾಲೆಯ ಸ್ಥಾಪಕ ಅಧ್ಯಕ್ಷ.
ಅತಿಥಿ ಶಿಕ್ಷಕರು ಲಭ್ಯ ಇಲ್ಲದ ಪರಿಸ್ಥಿತಿಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳ ಮೂಲಕ ಸಂಘ ಸಂಸ್ಥೆಗಳು ಗೌರವ ಶಿಕ್ಷಕರ ನೆರವು ಪಡೆದು ಫಲಿತಾಂಶದಲ್ಲಿ ಸುಧಾರಣೆ ಕಾಣಲಾಗಿದೆ
– ಚಂದ್ರಕಾಂತ್, ಡಿಡಿಪಿಐ ಕೊಡಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT