ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ, ದನಗಳದ್ದೇ ದರ್ಬಾರು

ಜನಸಾಮಾನ್ಯರು ಹೈರಾಣು; ಕಣ್ಮುಚ್ಚಿ ಕುಳಿತ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಆಡಳಿತ
Last Updated 9 ನವೆಂಬರ್ 2022, 12:04 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ದನಗಳು ಹಾಗೂ ನಾಯಿಗಳ ಹಾವಳಿಯಿಂದ ಜನಸಾಮಾನ್ಯರು ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಸಂಬಂಧಿಸಿದ ಪಂಚಾಯಿತಿ ಆಡಳಿತ ಮಾತ್ರ ಇದರತ್ತ ಗಮನ ಹರಿಸುತ್ತಿಲ್ಲ.

ಪಟ್ಟಣದ ಯಾವುದೇ ರಸ್ತೆಯಲ್ಲಿ ಸಂಚರಿಸಲೂ ಭಯಪಡುವಂತಾಗಿದೆ. ಹಿಂಡು ಹಿಂಡು ನಾಯಿಗಳು ಎಲ್ಲೆಂದರಲ್ಲಿ ತಿರುಗುತ್ತಿವೆ. ದನಗಳು ಹಗಲಿನಲ್ಲಿ ರಸ್ತೆಗಳಲ್ಲಿ ಸಂಚರಿಸಿದರೆ, ರಾತ್ರಿಯಾದೊಡನೆ ಮನೆಗಳ ಬಳಿ ದಾಳಿ ಮಾಡುತ್ತಿವೆ. ಇರುವ ಹೂವಿನ ಗಿಡಗಳು ಸೇರಿದಂತೆ ಎಲ್ಲವನ್ನು ತಿಂದು ಹಾಳು ಮಾಡುತ್ತಿವೆ. ಪ್ರಮುಖ ರಸ್ತೆಗಳಲ್ಲಿಯೇ ವಿಶ್ರಾಂತಿ ಪಡೆಯುವುದರಿಂದ ರಾತ್ರಿ ವಾಹನ ಸವಾರರು ಸಾಕಷ್ಟು ಬಾರಿ ಇವುಗಳಿಗೆ ಗುದ್ದಿ ಬಿದ್ದಿದ್ದಾರೆ. ನಾಯಿಗಳ ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆಗಳಿಗೆ ತೆರಳಬೇಕಿದೆ. ಆದರೂ, ಈ ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಕೆಲವರು ಗ್ರಾಮೀಣ ಭಾಗಗಳಿಂದ ಜಾನುವಾರುಗಳನ್ನು ಬೆಳಿಗ್ಗೆ ಹಾಲು ಕರೆದುಕೊಂಡ ನಂತರ ಪಟ್ಟಣಕ್ಕೆ ತಂದು ಬಿಡುತ್ತಿದ್ದಾರೆ. ಇನ್ನೂ ಕೆಲವು ಜಾನುವಾರುಗಳಿಗೆ ಯಾರು ಮಾಲೀಕರೆಂದೇ ತಿಳಿದಿಲ್ಲ. ಸಾಕಷ್ಟು ಬಾರಿ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ’ ಎಂದು ಪಟ್ಟಣದ ನಿವಾಸಿ ಹರೀಶ್ ತಿಳಿಸಿದರು.

‘ಕಷ್ಟಪಟ್ಟು ಹೂವಿನ ಗಿಡಗಳನ್ನು ಮನೆಯ ಸುತ್ತ ಬೆಳೆಸಲಾಗಿದೆ. ರಾತ್ರಿಯಾದೊಡನೆ ದನಗಳ ಹಿಂಡು ಬೇಲಿಯನ್ನು ನುಗ್ಗಿ ತಿಂದು ಹಾಳುಮಾಡುತ್ತಿವೆ. ಆಸೆಯಿಂದ ದುಡ್ಡುಕೊಟ್ಟು ತಂದ ಗಿಡಗಳು ಹಾಳಾಗುತ್ತಿರುವುದು ಬೇಸರವಾಗಿದೆ. ಇನ್ನಾದರೂ ದನಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ನಿವಾಸಿ ಮಮತಾ ಸೇರಿದಂತೆ ಗೃಹಿಣಿಯರು ಆಗ್ರಹಿಸಿದರು.

‘ಬೆಳಿಗ್ಗೆ ಮತ್ತು ಸಂಜೆ ಶಾಲೆಗೆ ನಡೆದುಕೊಂಡು ತೆರಳಬೇಕಿದೆ. ಯಾವ ರಸ್ತೆಗಳಲ್ಲಿ ನೋಡಿದರೂ, ಹಲವು ನಾಯಿಗಳು ಕಾಣಸಿಗುತ್ತಿವೆ. ಇದರಿಂದ ಶಾಲೆಗೆ ತೆರಳಲು ಭಯವಾಗುತ್ತಿದೆ’ ಎಂದು ವಿದ್ಯಾರ್ಥಿನಿ ಧನ್ಯಾತಿಳಿಸಿದರು.

ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಯಾವ ಕೆಲಸ ಮೊದಲು ಮಾಡಿಸಬೇಕೆಂದು ತಿಳಿದಿಲ್ಲ. ಬೇಡದ ಕೆಲಸ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.

‘ಹಲವು ತಿಂಗಳುಗಳಿಂದ ದನಗಳ ಹಾವಳಿ ಮಿತಿ ಮೀರಿದೆ. ಸಮಸ್ಯೆ ಪಂಚಾಯಿತಿ ಗಮನಕ್ಕೆ ಬಂದರೂ ಪರಿಹರಿಸಲು ಮುಂದಾಗುತ್ತಿಲ್ಲ. ರಾತ್ರಿ ಗೋಕಳ್ಳರು ದನಗಳನ್ನು ಹಿಡಿದು ಸಾಗಿಸುತ್ತಿರುವುದರಿಂದ ಒಂದಷ್ಟು ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನಾದರೂ ದನಗಳ ಮಾಲೀಕರುಗಳನ್ನು ಗುರುತಿಸಿ ಅವರಿಗೆ ಜಾಗೃತಿ ಮೂಡಿಸಿ ದನಗಳನ್ನು ಕಟ್ಟಿ ಸಾಕುವಂತೆ ಮನವರಿಕೆ ಮಾಡಿಕೊಡಬೇಕಿದೆ’ ಎಂದು ವಾಹನ ಚಾಲಕ ಪಿ.ಮಧು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT