ಗುರುವಾರ , ಮೇ 13, 2021
18 °C
ಗಮನ ಸೆಳೆದ ಚೌರಿ ಕುಣಿತ, ಎತ್ತುಪೋರಾಟ್‌; ದೇವರ ಉತ್ಸವಮೂರ್ತಿಗೆ ಪೂಜಾರಾಧನೆ

ಸುಂಟಿಕೊಪ್ಪ: ಬೆಳ್ಳಾರಿಕಮ್ಮ ಉತ್ಸವಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಸಮೀಪದ ಉಲುಗುಲಿ ಗ್ರಾಮದ ಪನ್ಯ ಬೆಳ್ಳಾರಿಕಮ್ಮ ದೇವಾಲಯದ ವಾರ್ಷಿಕ ಪೂಜೋತ್ಸವ ಸೋಮವಾರ ಅದ್ಧೂರಿಯಾಗಿ ಜರುಗಿತು.

ಉಲುಗುಲಿ ಗ್ರಾಮದ ವಿವಿಧ ಕುಟುಂಬಗಳ ಸದಸ್ಯರು ಸಾಂಪ್ರದಾಯಿಕ ದಿರಿಸಿನಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶಿಸಿದರು.

ಉತ್ಸವದಲ್ಲಿ ಬೆಳ್ಳಾರಿಕಮ್ಮ ದೇವಿಗೆ ನೃತ್ಯದ ಮೂಲಕ ಆರಾಧಿಸಲಾಯಿತು. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಈ ಉತ್ಸವ ನಡೆಯುತ್ತದೆ. ಚೌರಿ ಕುಣಿತ, ಎತ್ತು ಪೋರಾಟ್, ಮೇದತುಟ್ಟಿಗೆ ಬೆಳಕಾಟ್ ಸೇರಿದಂತೆ ಏಳು ವಿಧದ ಕುಣಿತವನ್ನು ದೇವರನ್ನು ಸ್ಮರಿಸುತ್ತಾ ಗ್ರಾಮದ ಕುಟುಂಬಸ್ಥರು ಮಾಡಿದರು.

ಇದಕ್ಕೂ ಮೊದಲು ದೇವಾಲಯದಲ್ಲಿ ದೇವಿಗೆ ವಿವಿಧ ರೀತಿಯ ಆರಾಧನೆ ಮಾಡಿ ನಂತರ ಮಂದನ ಮನೆಯಿಂದ ಭಂಡಾರವನ್ನು ಹೊತ್ತು ಬಸವನೊಂದಿಗೆ ಗ್ರಾಮಸ್ಥರು ವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿ ದೇವತಾ ಕಾರ್ಯದಲ್ಲಿ
ಭಾಗವಹಿಸಿದರು.

ಉಲುಗುಲಿ ಗ್ರಾಮದ ಪಟ್ಟೆಮನೆ, ಓಡಿಯಪ್ಪನ ಮನೆ, ಮಳ್ಳನ ಮನೆ, ನಿರುವಣಿ (ಪಟೇಲರು), ಪಾರೆಮನೆ, ಮಾಗುಲು, ಕಾಳಚೆಟ್ಟೀರ, ಮಂದನ ಮನೆ, ಆರ್‌ಬೈಲ್, ಬಾಲಪ್ಪನ, ಬಾಣೂರು, ಶಾಂತನ, ಕುಂತೋಳಿ, ಮೂಡಳ್ಳಿ... ಹೀಗೆ 14 ಕುಟುಂಬಸ್ಥರು ಒಟ್ಟಾಗಿ ದೇವಾಲಯದ ಪ್ರಾಂಗಣದಲ್ಲಿ ನರ್ತಿಸುವ ಮೂಲಕ ಉತ್ಸವಕ್ಕೆ ಕಳೆತಂದರು.

ಮೇದ ಜನಾಂಗದವರ ವಾದ್ಯಕ್ಕೆ ದೇವರನ್ನು ನೆನೆಯುತ್ತಾ ನೃತ್ಯಕ್ಕೆ ಹೆಜ್ಜೆ ಹಾಕಿದರು.

ನೃತ್ಯ ಆರಾಧನೆಯ ನಂತರ ಈ ವರ್ಷದಿಂದ ಹೊಸದಾಗಿ ಕೆತ್ತಲಾದ ಬೆಳ್ಳಾರಿಕಮ್ಮ ದೇವಿಯ ಉತ್ಸವ ಮೂರ್ತಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಅರ್ಚಕ ಮಂಜುನಾಥ ಉಡುಪ ಅವರು ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣಿ ಹಾಕಿ ಗರ್ಭಗುಡಿಯಲ್ಲಿ ಇರಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು.

ನಂತರ ದೇವಿಗೆ ಮಹಾಪೂಜೆ, ಮಹಾಮಂಗಳಾರತಿ ಮಾಡಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ತೆಂಗಿನಕಾಯಿ ಪೈಪೋಟಿ ಮತ್ತು ಬಾಳೆಹಣ್ಣಿನ ವಿತರಣಾ ಕಾರ್ಯಕ್ರಮಗಳು ನಡೆದವು. ಸೋಮವಾರ ನಡೆದ ದೇವರ ಉತ್ಸವಕ್ಕಾಗಿ 14 ಕುಟುಂಬದ ಕಿರಿಯ, ಹಿರಿಯ ಸದಸ್ಯರು 15 ದಿನಗಳ ಹಿಂದೆಯೇ ಬಾಳೆದಿಂಡು ಕಡಿದು ಉತ್ಸವಕ್ಕೆ ಚಾಲನೆ ನೀಡಿದ್ದರು. ದೇವಾಲಯದ ಪ್ರಾಂಗಣದಲ್ಲಿಯೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದದಲ್ಲದೇ ನೃತ್ಯ ಅಭ್ಯಾಸವನ್ನು ಕೂಡ ನಡೆಸುತ್ತಿದ್ದರು.

ಮಾಗಲು ವಸಂತ, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಅನಿಲ್, ಕಾಳಚೆಟ್ಟಿರ ಮಿಟ್ಟು, ಓಡಿಯಪ್ಪನ ಸುದೇಶ್, ಪಟೇಲರ ಮಧು, ಗಣಪತಿ, ಬಾಲಪ್ಪನ ವಿಜು, ಕುಂತೋಳಿ ಚಂಗಪ್ಪ, ಭಾಣೂರು ಪೂವಯ್ಯ, ಮಾಗುಲು ರವೀಂದ್ರ, ಆರ್‌ಬೈಲ್ ಪೂವಯ್ಯ, ಪಾರಮನೆ ರಘು, ಮಂದನ ದೇವರಾಜು ಸೇರಿದಂತೆ ಇತರರು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು