ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು | ಮೂರು ತಿಂಗಳು ಉಚಿತ ನೀರು ಪೂರೈಕೆ: ಶಾಸಕ ಪೊನ್ನಣ್ಣ

Published 8 ಮಾರ್ಚ್ 2024, 15:02 IST
Last Updated 8 ಮಾರ್ಚ್ 2024, 15:02 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪೊನ್ನಂಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಶಾಸಕ ಎ.ಎಸ್.ಪೊನ್ನಣ್ಣ ತಾವೇ ಖುದ್ದು ನೀರಿನ ಟ್ಯಾಂಕ್ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಜನರಿಗೆ ನೀರು ಒದಗಿಸಿದರು.

‘ನಮ್ಮ ತಂದೆ ತಾಯಿ ಹೆಸರಿನ ಪೊನ್ನಮ್ಮ ಸುಬ್ಬಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೇಸಿಗೆಯ ಮೂರು ತಿಂಗಳ ಕಾಲ ಉಚಿತವಾಗಿ ನೀರು ಒದಗಿಸಲಾಗುವುದು’ ಎಂದು ಶಾಸಕರು ಹೇಳಿದರು.

ಪೊನ್ನಂಪೇಟೆ ಪಟ್ಟಣದಲ್ಲಿ ಅಂದಾಜು 5 ಸಾವಿರ ಜನಸಂಖ್ಯೆ ಇದೆ. ತಾಲ್ಲೂಕು ಕೇಂದ್ರವಾದರೂ ಗ್ರಾಮ ಪಂಚಾಯಿತಿ ಆಗಿಯೇ ಉಳಿದಿದೆ. ಪಂಚಾಯಿತಿ ಇಲ್ಲಿನ ಜನತೆಗೆ ನೀರು ಒದಗಿಸಲು ಬೋರ್‌ವೆಲ್‌ಗಳನ್ನೇ ಅವಲಂಬಿಸಿದೆ. ಕಳೆದ ವರ್ಷ ಮಳೆ ಕಡಿಮೆಯಾದ ಕಾರಣ ಜಲಮೂಲಗಳು ಬತ್ತಿವೆ. ಹೀಗಾಗಿ ಹಳ್ಳದಲ್ಲಿದ್ದ ಕೊಳವೆ ಬಾವಿಗಳಲ್ಲಿಯೂ ನೀರಿಲ್ಲದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದನ್ನು ನೀಗಿಸಲು ಮುಂದಾದ ಶಾಸಕ ಶಾಸಕರು, ನೀರಿನ ಸಮಸ್ಯೆ ನೀಗುವವರೆಗೆ ಟ್ರಸ್ಟ್ ವತಿಯಿಂದ ನೀರು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಶಾಶ್ವತ ನೀರು ಒದಗಿಸಿ: ಪೊನ್ನಂಪೇಟೆ ಸುತ್ತಮುತ್ತ ವರ್ಷ ಪೂರ್ತಿ ಹರಿಯುವ ಹತ್ತಾರು ತೊರೆ ತೋಡುಗಳಿವೆ. ಇವುಗಳಲ್ಲಿ ಶುದ್ಧವಾದ ನೀರು ಲಭಿಸಲಿದೆ. ದಟ್ಟ ಕಾಡು ಮತ್ತು ಕಾಫಿ ತೋಟದ ನಡುವೆ ಹಾದುಹೋಗುವ ಆಡುಗುಂಡಿ ಹೊಳೆ, ಕೊಂಗಣ ಹೊಳೆ, ಬರಪೊಳೆ, ಲಕ್ಷ್ಮಣತೀರ್ಥ ನದಿಗಳಲ್ಲಿ ಶುದ್ಧ ನೀರು ಲಭಿಸಲಿದೆ. ಇವುಗಳಿಗೆ ಪಿಕಪ್ ಮಾದರಿಯಲ್ಲಿ ಕಟ್ಟೆ ಕಟ್ಟಿ ನೀರು ಸಂಗ್ರಹಿಸಿಕೊಂಡು ಬೇಸಿಗೆಯಲ್ಲಿ ಪೊನ್ನಂಪೇಟೆ, ಗೋಣಿಕೊಪ್ಪಲು ಪಟ್ಟಣಕ್ಕೆ ಶಾಶ್ವತ ನೀರು ಒದಗಿಸಬಹುದು. ಇದರಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆ ನೀಗಿಸಬಹುದು ಎಂದು ಸಾರ್ವಜನಿಕರಾದ ಬಿದ್ದಪ್ಪ, ಸೋಮಯ್ಯ, ತಮ್ಮಯ್ಯ ತಿಳಿಸಿದರು.

ಈ ಬಗ್ಗೆ ಶಾಸಕ ಪೊನ್ನಣ್ಣ ಅವರ ಗಮನ ಸೆಳೆದಾಗ, ‘ಇದುವರೆಗೂ ಈ ಬಗ್ಗೆ ಜನಪ್ರತಿನಿದಿಗಳು ಹಾಗೂ ಜಿಲ್ಲಾಡಳಿತ ಚಿಂತಿಸದಿರುವುದೇ ಇಂದಿನ ಸಮಸ್ಯೆಗೆ ಕಾರಣ. ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು. ಸಣ್ಣ ನೀರಾವರಿ ಇಲಾಖೆ ಮೂಲಕ ಕುಡಿಯುವ ನೀರಿನ ಮೂಲಕ ಹುಡುಕಿ ಶಾಸ್ವತ ಪರಿಹಾರ ದೊರಕಿಸಲಾಗುವುದು’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೆರಿರ ನವೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT