ಶನಿವಾರ, ಅಕ್ಟೋಬರ್ 24, 2020
28 °C
ಕಾವೇರಿ ದರ್ಶನದ ವೇಳೆ ದೇವಸ್ಥಾನ ಸಮಿತಿ, ಪ್ರಮುಖರು, ಅರ್ಚಕರ ಉಪಸ್ಥಿತಿ, ನೇರ ಪ್ರಸಾರದ ವ್ಯವಸ್ಥೆ

ತೀರ್ಥೋದ್ಭವದ ಬಳಿಕ ಸಾರ್ವಜನಿಕರಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಅ.17ರಂದು ಬೆಳಿಗ್ಗೆ ತೀರ್ಥೋದ್ಭವ ನಡೆಯಲಿದ್ದು, ಕೋವಿಡ್‌–19 ಕಾರಣದಿಂದ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ.

ಬೆಳಿಗ್ಗೆ 7.03ಕ್ಕೆ ಕಾವೇರಿಯು ತೀರ್ಥ ರೂಪಿಣಿಯಾಗಿ ದರ್ಶನ ನೀಡಲಿದ್ದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಅರ್ಚಕರು ಹಾಗೂ ಪ್ರಮುಖರಿಗೆ ಆ ವೇಳೆ ಅವಕಾಶ ನೀಡಲಾಗುವುದು. ತೀರ್ಥೋದ್ಭವದ ಬಳಿಕವೂ ಕ್ಷೇತ್ರದಲ್ಲಿ ಪೂಜಾ ಕಾರ್ಯಗಳು ನಡೆಯಲಿದ್ದು, ಸಾರ್ವಜನಿಕರು ಅಂತರ ಕಾಯ್ದುಕೊಂಡು ತಲಕಾವೇರಿಗೆ ಭೇಟಿ ನೀಡಲು ಅವಕಾಶವಿದೆ. ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಮಾರ್ಗಸೂಚಿ ಪಾಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಕೋವಿಡ್‌ ಕಾರಣದಿಂದ ಕೆಲವು ನಿರ್ಬಂಧ ಹೇರಲಾಗಿದೆ. ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ತೀರ್ಥೋದ್ಭವದ ನೇರ ಪ್ರಸಾರವಿದ್ದು ಸಾರ್ವಜನಿಕರು ಮನೆಯಲ್ಲೇ ವೀಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಸ್ವಯಂ ಸೇವಕರಿಗೆ ಬುಧವಾರ, ಗುರುವಾರ ಭಾಗಮಂಡಲದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುವುದು. ನೆಗೆಟಿವ್‌ ವರದಿ ತಂದವರಿಗೆ ಕ್ಷೇತ್ರಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ 19 ಪರಿಸ್ಥಿತಿ ಕಳೆದ ಎರಡು ವಾರಗಳಿಂದ ಹೆಚ್ಚಾಗುತ್ತಿದ್ದು, ಪರೀಕ್ಷೆಗೆ ಒಳಪಟ್ಟ ನೂರು ಜನರಲ್ಲಿ ಹದಿನೆಂಟು ಮಂದಿಗೆ ಪಾಸಿಟಿವ್ ಬರುತ್ತಿದೆ. ಜೊತೆಗೆ ಮರಣ ಪ್ರಮಾಣ ಶೇ 1.4ರಷ್ಟು ಇದ್ದು, ಇದನ್ನು 1ಕ್ಕಿಂತ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಆದ್ದರಿಂದ, ದಸರಾ ಮತ್ತು ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಸಂದರ್ಭದಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದಸರಾ ಸಮಿತಿ ಹಾಗೂ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅವರ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೋರಿದರು.

ದಸರಾ ಮತ್ತು ತಲಕಾವೇರಿ ಪವಿತ್ರ ತೀರ್ಥೋದ್ಭವವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ. ಗಣೇಶೋತ್ಸವ ಸಂದರ್ಭದಲ್ಲಿ ಅನುಸರಿಸಿದ ಮಾರ್ಗಸೂಚಿಗಳನ್ನು ಈ ಸಂದರ್ಭದಲ್ಲಿಯೂ ಪಾಲಿಸಬೇಕಿದೆ ಎಂದು ಹೇಳಿದರು.

ಮಡಿಕೇರಿ, ಗೋಣಿಕೊಪ್ಪ ದಸರಾಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದಂತೆ ಹಣ ಬಿಡುಗಡೆಯಾಗಲಿದೆ. ಕರಗ ಉತ್ಸವದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ಅಕ್ಟೋಬರ್, 14 ಮತ್ತು 15ರಂದು ಕೋವಿಡ್ ಪರೀಕ್ಷೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ನಿರ್ದೇಶನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ದಸರಾ ಸಂದರ್ಭದ ವಿಜಯ ದಶಮಿಯಂದು ರಾತ್ರಿ 10 ಗಂಟೆಯೊಳಗೆ ಮಂಟಪ ಪೂಜಾ ಕಾರ್ಯಗಳು ಕೊನೆಗೊಳ್ಳಲಿದೆ ಎಂದು ಹೇಳಿದರು.

ಕರಗ ಉತ್ಸವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸುವುದು, ಅಂತರ ಕಾಯ್ದುಕೊಳ್ಳಬೇಕು. ಮಡಿಕೇರಿ ನಗರದಲ್ಲಿ ಬೀದಿ ದೀಪ ಅಳವಡಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ಅ. 17 ಮತ್ತು 26ರಂದು ಎರಡು ದಿನದ ಮಟ್ಟಿಗೆ ರಾಜಾಸೀಟು ಮತ್ತು ಅಬ್ಬಿಪಾಲ್ಸ್ ಪ್ರವಾಸಿ ಕೇಂದ್ರಗಳು ಮುಚ್ಚಿರುತ್ತವೆ. ಆದ್ದರಿಂದ ಪ್ರವಾಸಿಗರು ಸಹಕರಿಸುವಂತೆ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.

ದಸರಾ ಸಂದರ್ಭದಲ್ಲಿ ಬೀದಿ ಬದಿ ತಾತ್ಕಾಲಿಕ ಶೆಡ್ಡು ನಿರ್ಮಿಸಿ, ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಹೋಮ್‌ಸ್ಟೇ, ರೆಸಾರ್ಟ್‌, ಲಾಡ್ಜ್‌ಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸಂಬಂಧ ದಿಢೀರ್ ಭೇಟಿ ನೀಡಲು ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಮಡಿಕೇರಿ, ಭಾಗಮಂಡಲ ಮತ್ತು ತಲಕಾವೇರಿ ಮಾರ್ಗ ಪ್ರತಿನಿತ್ಯ ಓಡಾಡುವ ಬಸ್‍ಗಳು ಇರಲಿವೆ. ಉಳಿದಂತೆ ವಿಶೇಷ ಬಸ್‍ಗಳು ಇರುವುದಿಲ್ಲ ಎಂದು ಅವರು ತಿಳಿಸಿದರು.

ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶವಿದೆ. ಆ ಸಂದರ್ಭದಲ್ಲಿಯೂ ನಿಯಮಗಳನ್ನು ಪಾಲಿಸಬೇಕು. ಬೀದಿ ದೀಪ ಅಳವಡಿಸಲಾಗುತ್ತದೆ. ಭಾಗಮಂಡಲ-ತಲಕಾವೇರಿಯಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು