ಮಡಿಕೇರಿ: ಈ ಬಾರಿ ಕೊಡಗು ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವಿಕೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿತ್ತು. ಕಳೆದೆಲ್ಲ ವರ್ಷಗಳಿಗಿಂತ ಉತ್ತಮ ಫಲಿತಾಂಶ ದಾಖಲಿಸಿ, ರಾಜ್ಯದಲ್ಲೇ 4ನೇ ಸ್ಥಾನಕ್ಕೇರಿತ್ತು. ಹೀಗಿದ್ದರೂ, ಯಾವುದೇ ಶಿಕ್ಷಕರಿಗೂ ರಾಜ್ಯಮಟ್ಟದ ಪ್ರಶಸ್ತಿ ನೀಡುವುದಕ್ಕೆ ಸರ್ಕಾರ ಆಸಕ್ತಿ ತೋರಿಲ್ಲ.
ಪ್ರಸಕ್ತ ಸಾಲಿನಲ್ಲಿ ಉಳಿದ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆಗಳಿದ್ದವು. ಆದರೆ, ಕೊಡಗು ಜಿಲ್ಲೆಯಲ್ಲಿ ಒಂದೇ ಒಂದು ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆ ಇರಲಿಲ್ಲ. ಹೀಗಿದ್ದರೂ, ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ ಒಬ್ಬರನ್ನೂ ಪರಿಗಣಿಸಿಲ್ಲ.
ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು 20 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, 11 ಪ್ರೌಢಶಾಲಾ ಶಿಕ್ಷಕರಿಗೆ ಒಟ್ಟು 31 ಶಿಕ್ಷಕರಿಗೆ ನೀಡಿದೆ. ಇದರಲ್ಲಿ ಕನಿಷ್ಠ ಒಬ್ಬರೂ ಕೊಡಗು ಜಿಲ್ಲೆಯ ಶಿಕ್ಷಕರು ಇಲ್ಲ. ಹಾಗಾದರೆ, ಕೊಡಗು ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಜಿಲ್ಲೆಯಲ್ಲಿ ಕನ್ನಡ ಬಾರದ ಅಸ್ಸಾಂ ರಾಜ್ಯದ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕರಿದ್ದಾರೆ, ಉತ್ತಮ ಪ್ರಯೋಗಾಲಯ ರೂಪಿಸಿದವರಿದ್ದಾರೆ, ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡವರಿ ದ್ದಾರೆ, ಸ್ವಂತ ಹಣದಿಂದ ವಾಹನ ಸೌಲಭ್ಯ ಕಲ್ಪಿಸಿಕೊಟ್ಟವರಿದ್ದಾರೆ, ಶಾಲೆಗಾಗಿ ಸ್ವಂತ ಹಣ ಬಳಕೆ ಮಾಡಿದ ಶಿಕ್ಷಕರಿದ್ದಾರೆ. ಆದರೆ, ಅವರನ್ನು ಸರ್ಕಾರ ಗುರುತಿಸಿಲ್ಲ.
ಶಿಕ್ಷಕರಿಲ್ಲದೇ ಬಸವಳಿದಿದ್ದ ಕರಿಕೆಯ ಶಾಲೆಯ ವಿದ್ಯಾರ್ಥಿಗಳಿಗೆ ಸುಳ್ಯದ ಖಾಸಗಿ ಶಾಲೆಯ ಶಿಕ್ಷಕರಿಂದ ಆನ್‌ಲೈನ್ ಮೂಲಕ ಪಾಠ ಹೇಳುವ ವ್ಯವಸ್ಥೆ ಕಲ್ಪಿಸಿ ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣಕರ್ತರಾದ ಅಧಿಕಾರಿಗಳೂ ಕೊಡಗಿನಲ್ಲಿದ್ದಾರೆ. ಆದರೆ, ಅವರೆಲ್ಲ ಪ್ರಶಸ್ತಿಗಳಿಂದ ಮಾರು ದೂರವೇ ಉಳಿದಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಶಿಕ್ಷಕರೊಬ್ಬರನ್ನು ಸಂಪರ್ಕಿಸಿದಾಗ ಅವರು, ‘ಪ್ರಶಸ್ತಿಗಾಗಿ ಅರ್ಜಿ ಹಾಕಿ ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಿಕೊಡಬೇಕು. ಆಗ ಮಾತ್ರ ಪ್ರಶಸ್ತಿ ಸಾಧ್ಯ. ನಮ್ಮಲ್ಲಿರುವ ಬಹಳಷ್ಟು ಶಿಕ್ಷಕರು ಅರ್ಜಿ ಹಾಕದೇ ತಮ್ಮ ಪಾಡಿಗೆ ತಾವಿದ್ದಾರೆ’ ಎಂದು ಹೇಳಿದರು.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ
ಪ್ರಸಕ್ತ ಸಾಲಿನಲ್ಲಿ 15 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನ ಪ್ರಕಟಿಸಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಜೇನುಕಲ್ಲು ಬೆಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಂ.ಎನ್.ರಾಮೇಗೌಡ, ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎ.ಎಸ್.ವಾಸುವರ್ಮ, ಮಡಿಕೇರಿ ತಾಲ್ಲೂಕಿನ ಚೇರಂಡೇಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೆ.ಜಿ.ಚೈತ್ರಾ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್.ಆರ್.ಸುನೀತಾ, ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಎಸ್.ಜಾನ್ಸಿ, ಮಡಿಕೇರಿ ಕೆ.ಪಿ.ಬಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿ.ಕೆ.ಗಂಗಮ್ಮ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿಯ ಗೌಡಳ್ಳಿ ಪ್ರೌಢಶಾಲೆಯ ಎಸ್.ಎನ್.ಪೂವಯ್ಯ, ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನಕೋಟೆ ಸರ್ಕಾರಿ ಪ್ರೌಢಶಾಲೆಯ ಕೆ.ಡಿ.ಕವಿತಾ, ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಅರುಣ ಅನುದಾನಿತ ಪ್ರೌಢಶಾಲೆಯ ಸಿ.ಆರ್.ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಅನುದಾನರಹಿತ ಶಾಲೆಗಳ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು: ಮಡಿಕೇರಿ ತಾಲ್ಲೂಕಿನ ಶ್ರೀರಾಜೇಶ್ವರಿ ವಿದ್ಯಾಲಯದ ಬಿ.ಎ.ಪಾರ್ವತಿ, ವಿರಾಜಪೇಟೆ ತಾಲ್ಲೂಕಿನ ಪ್ರಗತಿ ಶಾಲೆಯ ಎ.ಎನ್.ರೇಖಾ, ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಸಾಂದಿಪನ ಶಾಲೆಯ ವಸಂತ ಕುಮಾರಿ, ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಜ್ಞಾನೋದಯ ಶಾಲೆಯ ಶ್ವೇತನ್ ಚಂಗಪ್ಪ, ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ಜೆ.ಸಿ.ಶಾಲೆಯ ಎನ್.ಬಿ.ಸತೀಶ್, ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಶ್ರೀ ಸದಾಶಿವ ಸ್ವಾಮೀಜಿ ಶಾಲೆಯ ಕೆ.ಎಸ್.ತನುಜಾ ಅವರನ್ನು ಆಯ್ಕೆ ಮಾಡಲಾಗಿದೆ.
ಇವರು ಸೆ. 5ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಗೌಡ ಸಮಾಜದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದು, ಪ್ರಶಸ್ತಿಯನ್ನು ಸ್ವೀಕರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.