ಬುಧವಾರ, ಮಾರ್ಚ್ 29, 2023
25 °C
ಭರದಿಂದ ನಡೆಯುತ್ತಿದೆ ಜೀರ್ಣೋದ್ಧಾರ ಕಾರ್ಯ, 8 ಶತಮಾನಗಳ ಇತಿಹಾಸ ಹೊಂದಿರುವ ದೇಗುಲ

ವಿರಾಜಪೇಟೆ:ಕಿರುಹೊಳೆಯ ತಟದ ಸಾಶ್ತಾವು ದೇವಾಲಯ

ಹೇಮಂತ್ ಎಂ.ಎನ್. Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಸಮೀಪದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳುಮಾಡು ಮತ್ತು ಕುಂಜಿಲಗೇರಿಗೆ ಹೊಂದಿಕೊಂ ಡಂತಿರುವ ಕಿರು ಹೊಳೆಯ ತಟದ ದೇವರಕಾಡುವಿನಲ್ಲಿರುವ ಅಡುಕೋಣಿ ಶ್ರೀ ಸಾಶ್ತಾವು (ಈಶ್ವರ) ದೇವಾಲಯವು ವಿಶಿಷ್ಟ ಶಕ್ತಿಯನ್ನು ಹೊಂದಿರುವ ದೇವಾಲಯ ಎನಿಸಿದೆ.

ಗ್ರಾಮಸ್ಥರಿಗೆ ಹಾಗೂ ಜಾನುವಾರು ಗಳಿಗೆ ಬರುವ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುವ ದೈವದ ನೆಲೆ ಎಂಬ ನಂಬಿಕೆಗೆ ಪಾತ್ರವಾಗಿದೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ದೇವರಿಗೆ ಗ್ರಾಮಸ್ಥರು ಆಳ್ ರೂಪ ಹಾಗೂ ಜಾನುವಾರು ರೂಪವನ್ನು ಹರಕೆಯಾಗಿ ಇಲ್ಲಿಗೆ ಒಪ್ಪಿಸುವುದು ಪದ್ಧತಿ. ಈ ಕಿರುಹೊಳೆಯ ತಟದಲ್ಲಿನ ದೇವರಕಾಡಿನಲ್ಲಿ ಹಿಂದೆ ಋಷಿಮುನಿಗಳು ತಪಸ್ಸನ್ನು ಮಾಡಿದ್ದರು ಎನ್ನುವ ಪ್ರತೀತಿಯೂ ಇದೆ.

ಸುಮಾರು 8 ಶತಮಾನಗಳ ಇತಿಹಾಸವನ್ನು ಈ ನೆಲೆ ಹೊಂದಿದೆ. 2 ಉತ್ಸವಗಳು ನಡೆಯುವುದು ಇಲ್ಲಿನ ವಿಶೇಷತೆಯಾಗಿದೆ. ಪ್ರತಿ ವರ್ಷ ಮಾರ್ಚ್ 14 ರಂದು ಮೊದಲ ಉತ್ಸವ ನಡೆದರೆ, ಏಪ್ರಿಲ್ 24 ಮತ್ತು 25 ರಂದು 2 ದಿನಗಳ ಕಾಲ ವಿಷ್ಣುಮೂರ್ತಿ ದೇವರ ಉತ್ಸವ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ತಿಂಗಳ ಕಾಲ ನಿತ್ಯ ಪೂಜೆಗಳು ಸಲ್ಲಿಕೆಯಾಗುತ್ತದೆ. ಇಲ್ಲಿನ ಸಾಶ್ತಾವು ಹಾಗೂ ಕರಡ ಗ್ರಾಮದ ಮಲೆತಿರಿಕೆಯ ಈಶ್ವರ ಮತ್ತು ಕುಂಜಿಲಗೇರಿಯ ಪೊವ್ವದಿ ಭದ್ರಕಾಳಿ ದೇವರ ವಾರ್ಷಿಕ ಉತ್ಸವಗಳು ಏಕಕಾಲದಲ್ಲಿ ನಡೆಯುವುದು ವಿಶೇಷವಾಗಿದೆ. ಮಹಿಳೆಯರು ಶ್ವೇತ ವಸ್ತ್ರಧಾರಿಗಳಾಗಿ ಹರಕೆ ಒಪ್ಪಿಸುವುದು ಮತ್ತೊಂದು ವಿಶೇಷ ಎನಿಸಿದೆ.

1995ರಲ್ಲಿ ತೀರ್ಥಮಂಟಪ ನಿರ್ಮಾಣ ಮಾಡುವ ಸಂದರ್ಭ ಸಾನಿಧ್ಯ ಭಾಗವು ಬದಲಾದ ದಿಕ್ಕಿನಲ್ಲಿ ನಿರ್ಮಾಣವಾಯಿತು. ಗ್ರಾಮಸ್ಥರು ಹೂ, ತಾಂಬೂಲ ಮತ್ತು ಸ್ವರ್ಣ ಪ್ರಶ್ನೆಯ ಮೂಲಕ ಇದು ತಿಳಿದು ಬಂದ ಹಿನ್ನೆಲೆಯಲ್ಲಿ ಸಾನಿಧ್ಯವನ್ನು ಪುನರ್ ನಿರ್ಮಾಣ ಮಾಡಲು ಗ್ರಾಮಸ್ಥರು ಹಾಗೂ ದೇವಾಲಯ ಆಡಳಿತ ಮಂಡಳಿ ಮುಂದಾಗಿದೆ. ಕಳೆದ ವರ್ಷದಿಂದಲೇ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.

ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾತಂಡ ನಟೇಶ್ ಕಾಳಪ್ಪ ಮಾತನಾಡಿ, ‘ದೈವ ಸಾನಿಧ್ಯವು ದಿಕ್ಕು ಬದಲಾದ ಹಿನ್ನಲೆಯಲ್ಲಿ ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಉತ್ಸವ ನಡೆಯಲಿರುವುದರಿಂದ ಶೀಘ್ರದಲ್ಲಿ ದೇಗುಲ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಈ ಕಾರ್ಯಕ್ಕೆ ಅಂದಾಜು ₹ 50 ಲಕ್ಷ ವೆಚ್ಚವಾಗಲಿದೆ. ಭಕ್ತಾದಿಗಳು ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಯದರ್ಶಿ ಪಟ್ಟಂಡ ಅರುಣ್ ಕಾವೇರಪ್ಪ ಮಾತನಾಡಿ, ‘ಹಲವು ವರ್ಷಗಳ ಹಿಂದೆಯೇ ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆಸಲು ಮುಂದಾಗಿದ್ದೇವಾದರೂ, ಆರ್ಥಿಕವಾಗಿ ಸಫಲರಾಗದ ಹಿನ್ನೆಲೆಯಲ್ಲಿ ಇದೀಗ ಈ ಕಾರ್ಯ ನಡೆಯುತ್ತಿದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸಾರ್ವಜನಿಕರು ನೆರವು ನೀಡಬಹುದು’ ಎಂದರು. ಮಾಹಿತಿಗೆ 94482 73258 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು