ಕುಶಾಲನಗರ: ತಾಲ್ಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ₹ 1.25 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಬಸವೇಶ್ವರ ದೇವಾಲಯದ ಉದ್ಘಾಟನೆ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಳಶರೋಹಣ, ಮಹಾರುದ್ರಾಭಿಷೇಕ, ಗೋಪುರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಧಾರ್ಮಿಕ ಪೂಜಾ ವಿಧಿವಿಧಾನ, ಹೋಮ ಹವನಗಳು ನೆರವೇರಿದವು.
ಈ ವೇಳೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅರೆಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ‘ನಶ್ವರವಾದ ಈ ಜೀವನದಲ್ಲಿ ಆಸ್ತಿ, ಅಂತಸ್ತು, ಆಯಸ್ಸು ಶಾಶ್ವತವಲ್ಲ. ಇರುವ ಅತ್ಯಲ್ಪ ಆಯಷ್ಯದಲ್ಲಿ ಧರ್ಮ ಸಂಪಾದನೆಯು ಮುಕ್ತಿಗೆ ಮಾರ್ಗ ಕಲ್ಪಿಸಲಿದೆ. ಸನ್ನಡತೆ, ಸದ್ವಿಚಾರ, ಸಾರ್ಥಕ ಸೇವೆಗಳ ಮೂಲಕ ಭಗವಂತನ ಅನುಗ್ರಹ ಪಡೆದುಕೊಳ್ಳಲು ಸಾಧ್ಯ’ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ಆಸ್ತಿಕ ಭಾವನೆ ಕಾಣಲು ಸಾಧ್ಯ. ಆಧ್ಯಾತ್ಮಿಕ ಪರಂಪರೆಯ ಶಕ್ತಿಯೇ ಅಂತಹದ್ದು. ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆ ಮನುಷ್ಯನ ಬಾಹ್ಯ ಬದಲಾವಣೆಗೆ ಪೂರಕವಾದರೆ ಅಂತರಂಗದ ಪರಿಷ್ಕರಣೆಗೆ, ಶಾಂತಿ, ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ’ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ‘ಭಾರತ ಒಂದು ದೇಗುಲವಿದ್ದಂತೆ. ಧರ್ಮದ ತಳಹದಿ ಮೇಲೆ ಜೀವಿಸುತ್ತಿರುವ ಇಲ್ಲಿನ ನಿವಾಸಿಗಳು ಗಾಳಿ, ನೀರು, ಹಸಿರನ್ನು ದೇವರಂತೆ ಆರಾಧಿಸುತ್ತಾರೆ. ಜಗತ್ತಿನಲ್ಲಿ ಒಂದೇ ಧರ್ಮವನ್ನು ಅನುಸರಿಸುತ್ತಿರುವ ಹಲವು ದೇಶಗಳು ಸಂಘರ್ಷವನ್ನು ಎದುರಿಸುತ್ತಿದೆ. ಭಾರತೀಯರು ವಿವಿಧ ಧರ್ಮ, ಭಾಷೆ, ದೇವರನ್ನು ಅನುಸರಿಸುತ್ತಿದ್ದರೂ ಎಲ್ಲರೂ ಶಾಂತಿ, ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ’ ಎಂದರು.
ಬಸವೇಶ್ವರ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ವಿರಾಜಪೇಟೆ ಆತ್ಯಾನಂದಪುರಿ ಸ್ವಾಮೀಜಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ, ಮುಖಂಡರಾದ ಮಂಜುನಾಥ್ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್, ನಟೇಶ್ ಗೌಡ, ಶ್ರೀನಿವಾಸ್, ರಾಜಶೇಖರ್, ಸಮಿತಿ ಕಾರ್ಯದರ್ಶಿ ಎಚ್.ವಿ.ರಾಜು, ಖಜಾಂಚಿ ಎಚ್.ಟಿ.ನಾರಾಯಣ ಇದ್ದರು.
ದೇವಾಲಯದ ಜೀರ್ಣೋದ್ಧಾರಕ್ಕೆ ಸಹಕರಿಸಿದ ದಾನಿಗಳನ್ನು ಹಾಗೂ ಪೂಜಾ ವಿಧಿ ನೆರವೇರಿಸಿದ ಶಾಸ್ತ್ರಿಗಳ ತಂಡವನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.