ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ಧರಾಶಾಯಿಯಾದ ಕಟ್ಟಡ; ಮೊಳಗಿಸೀತೇ ಎಚ್ಚರಿಕೆಯ ಗಂಟೆ?

ಹಳೆಯ ಕಟ್ಟಡಗಳ ಸುರಕ್ಷತೆ ಕಡೆಗೆ ಗಮನ ಕೊಡಲು ಒತ್ತಾಯ
Published 21 ಜೂನ್ 2024, 4:58 IST
Last Updated 21 ಜೂನ್ 2024, 4:58 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಏಕಾಏಕಿ ಧರಾಶಾಯಿಯಾದ ಕಟ್ಟಡದಲ್ಲಿ ಸಿಲುಕಿದ್ದ ಎಲ್ಲರನ್ನೂ ಯಶಸ್ವಿಯಾಗಿ ರಕ್ಷಿಸಲಾಗಿದೆ. ಆದರೆ, ಈ ಘಟನೆ ಇದೇ ಬಗೆಯಲ್ಲಿರುವ ಹಳೆಯ ಕಟ್ಟಡಗಳ ಸುರಕ್ಷತೆ ಕಡೆಗೆ ತುರ್ತು ಗಮನ ನೀಡಬೇಕು ಎನ್ನುವ ಎಚ್ಚರಿಕೆ ಗಂಟೆಯೊಂದನ್ನು ಮೊಳಗಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯಲ್ಲಿರುವ ಅಂಬೂರ್ ದಮ್ ಬಿರಿಯಾನಿ ಹೋಟೆಲ್ ಹಾಗೂ ಸಮೀರ್ ಅವರ ಮಾಂಸದಂಗಡಿ ಇರುವ ಕಟ್ಟಡ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು. ಕುಸಿಯುತ್ತಿದ್ದಂತೆ ಸುತ್ತಮುತ್ತಲಿದ್ದವರೆಲ್ಲ ಓಡಿ ಜೀವ ರಕ್ಷಿಸಿಕೊಂಡರು. ಅಪಾರವಾದ ದೂಳು ಹಾಗೂ ಮಣ್ಣಿನ ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಕ್ಕೆ ಕೇವಲ ಮೂರೇ ನಿಮಿಷದಲ್ಲಿ ತುರ್ತು ಸೇವೆಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದರು. ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯ ಆರಂಭಿಸಿದರು.

ಒಳಗೆ ಎಷ್ಟು ಮಂದಿ ಗ್ರಾಹಕರಿದ್ದರು ಎನ್ನುವ ಖಚಿತ ಮಾಹಿತಿ ತಿಳಿಯದೇ ಹೋಗಿದ್ದುದ್ದರಿಂದ ಅವಶೇಷಗಳನ್ನೆಲ್ಲ ಹುಡುಕಾಡುವ ನಿರ್ಧಾರಕ್ಕೆ ಬರಲಾಯಿತು. ತಕ್ಷಣವೇ ಬಂದ ಗೋಣಿಕೊಪ್ಪಲು ಠಾಣೆಯ ಪೊಲೀಸರೂ ಇವರಿಗೆ ಸಾಥ್ ನೀಡಿದರು.

ಬಿದ್ದಿರುವ ಕಟ್ಟಡದ ರಾಶಿಗಳನ್ನು ಸುಲಭವಾಗಿ ಬೇಧಿಸುವ ಅತ್ಯಾಧುನಿಕ ಉಪಕರಣಗಳಿರುವ ರಕ್ಷಣಾ ವಾಹನವನ್ನು ಮೈಸೂರಿನಿಂದ ಕರೆಸಿಕೊಳ್ಳಲಾಯಿತು. ಮೈಸೂರು, ಪಿರಿಯಾಪಟ್ಟಣ, ಮಡಿಕೇರಿ, ಗೋಣಿಕೊಪ್ಪಲು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಒಟ್ಟಾಗಿ ಸೇರಿ ಕಾರ್ಯಾಚರಣೆ ಮುಂದುವರಿಸಿದರು.

ಇದರ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಹ ಸ್ಥಳಕ್ಕೆ ಬಂದು ಕಾರ್ಯಾಚರಣೆಗೆ ಕೈಜೋಡಿಸಿತು. ಸಂಜೆ ಹೊತ್ತಿಗೆ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಲಾಯಿತು. ಅವರಲ್ಲಿ ಸಣ್ಣಪುಟ್ಟ ಗಾಯಗೊಂಡವರೂ ಸೇರಿದಂತೆ ಒಟ್ಟು 5 ಮಂದಿಗೆ ಗಾಯಗಳಾಗಿದ್ದು, ಅವರಿಗೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್, ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಮೇಲೆ ನಿಗಾ ವಹಿಸಿದ್ದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜೇಶ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಚಂದನ್, ಮೈಸೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್, ಮಡಿಕೇರಿಯ ಶೋಭಿತ್, ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ಅಧಿಕಾರಿ ಮಂಜೇಗೌಡ , ಸಿಬ್ಬಂದಿ ಸುನಿಲ್‌ಕುಮಾರ್, ನಿಂಗನಗೌಡ ಪಾಟೀಲ್, ಬಿ.ಭೀಮೇಶ್, ಶೆಟ್ಟಿ ಪೂಜಾರಿ, ಬಿ.ಸಿ.ಅರುಣ್ ಕುಮಾರ್ ಸೇರಿದಂತೆ ಸುಮಾರು 40ಕ್ಕೂ ಅಧಿಕ ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ‘ಕಟ್ಟಡ ಕುಸಿದ ತಕ್ಷಣ ಸ್ಥಳೀಯರು ನೆರವನಿಂದ ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯ ನಡೆಸಿದರು. ಇಂತಹ ಹಳೆಯ ಕಟ್ಟಡಗಳು ಪಟ್ಟಣದಲ್ಲಿ ಸಾಕಷ್ಟಿದ್ದು, ಈ ಕುರಿತು ಪರಿಶೀಲಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT