ಶನಿವಾರ, ಜುಲೈ 31, 2021
21 °C
ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮರುಜೀವ

ಕೊಡಗು: ಪಾಳುಬಿದ್ದ ಕೆರೆಗೆ ಇದೀಗ ಜೀವಕಳೆ

ರೆಜಿತ್ ಕುಮಾರ್ ಗುಹ್ಯ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ದಶಕಗಳಿಂದ ಹೂಳುತುಂಬಿ ಪಾಳುಬಿದ್ದಿದ್ದ ಅಭ್ಯತ್‍ಮಂಗಲ ಸಾರ್ವಜನಿಕರ ಕೆರೆ ಇದೀಗ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಯುವಕರ ತಂಡ ಪುನಶ್ಚೇತ ಕಾರ್ಯ ಕೈಗೊಂಡು, ಕೆರೆಗೆ ಮರುಜೀವ ನೀಡಿದ್ದಾರೆ.

ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಅತ್ತಿಮಂಗಲ ಕೆರೆ ಕಳೆದ ಹಲವು ವರ್ಷಗಳಿಂದ ಹೂಳು ತುಂಬಿದ್ದು, ಕಾಡು ಗಿಡಗಳು ಬೆಳೆದು ಪಾಳುಬಿದ್ದಿತ್ತು. ಮಾತ್ರವಲ್ಲದೇ ಕೆಲವರು ರಾತ್ರಿ ವೇಳೆ ಕೋಳಿ ಮಾಂಸದ ತ್ಯಾಜ್ಯವನ್ನು ಕೆರೆಯ ಬದಿಯಲ್ಲಿ ಎಸೆಯುತ್ತಿದ್ದು, ದುರ್ವಾಸನೆಯಿಂದ ಕೂಡಿತ್ತು. ಇದನ್ನು ಅರಿತ ನೆಲ್ಯಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ ಯುವಕರ ತಂಡ ಕೆರೆಯ ಪುನಶ್ಚೇತನಕ್ಕೆ ಮುಂದಾಗಿತ್ತು. ಗ್ರಾ.ಪಂ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಕೆರೆಯನ್ನು ಅಭಿವೃದ್ಧಿಗೆ ಅನುವು ಮಾಡಿಕೊಡಲಾಗಿದೆ.

ಪಾಳು ಬಿದ್ದಿದ್ದ ಕೆರೆ: ಅತ್ತಿಮಂಗಲ ಸಮೀಪದ ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಕೆರೆಯನ್ನು ಕಳೆದ ಒಂದು ತಿಂಗಳಿನಿಂದ ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದ್ದು, ಕೆರೆಯ ಸುತ್ತಲೂ ಇದ್ದ ಕುರಚಲು ಗಿಡ, ಹುಲ್ಲುಗಳನ್ನು ತೆರವುಗೊಳಿಸಿ, ಕೆರೆಯ ಹೂಳನ್ನು ಹೊರತೆಗೆಯಲಾಗಿದೆ. ರಸ್ತೆಯ ಬದಿಯಲ್ಲಿ ಕಸದ ತ್ಯಾಜ್ಯವನ್ನು ಸುರಿಯಲಾಗಿದ್ದು, ಇದೀಗ ತ್ಯಾಜ್ಯವನ್ನು ಕೆರೆಯಿಂದ ಹೊರತೆಗೆದು, ಶುಚಿಗೊಳಿಸಲಾಗಿದೆ. ಒಂದು ತಿಂಗಳಿನಿಂದ ಯುವಕರ ತಂಡ ಕೆರೆಯ ಅಭಿವೃದ್ಧಿಯಲ್ಲಿ ತೊಡಗಿದ್ದು, ಇದೀಗ ಕೆರೆಗೆ ಜೀವಕಳೆ ಬಂದಿದೆ.

ಕೃಷಿಗೆ ಉಪಯೋಗ: ಬೇಸಿಗೆಗಾಲದಲ್ಲಿ ಗ್ರಾಮದ ಕೃಷಿಕರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಕೆರೆ ಅಭಿವೃದ್ಧಿಯಿಂದಾಗಿ ಸ್ಥಳೀಯ ಕೃಷಿಕರಿಗೆ ಉಪಯೋಗವಾಗಲಿದೆ. ಸುಮಾರು ಒಂದು ಏಕರೆ ವಿಸ್ತೀರ್ಣ ಜಾಗದಲ್ಲಿರುವ ಕೆರೆಯು ಈ ಹಿಂದೆ ಸ್ಥಳೀಯ ಕೃಷಿಕರಿಗೆ ನೀರಿನ ಮುಖ್ಯ ಮೂಲವಾಗಿತ್ತು. ಬಳಿಕ ಕೆರೆಯು ನೀರಿಲ್ಲದೇ ಪಾಳುಬಿದ್ದಿದ್ದು, ಗದ್ದೆಗಳಿಗೆ ನೀರಿನ ಕೊರತೆ ಉಂಟಾಗುತ್ತಿತ್ತು.

ಅಪಘಾತ ವಲಯ: ಅತ್ತಿಮಂಗಲ ಮುಖ್ಯ ರಸ್ತೆಯ ತಿರುವಿನಲ್ಲಿ ಸಾರ್ವಜನಿಕ ಕೆರೆ ಇದ್ದು, ತಿರುವಿನಲ್ಲಿ ಆಗಿಂದಾಗೆ ಅಪಘಾತಗಳು ಸಂಭವಿಸುತ್ತಿದೆ. ಕಾಡು ಗಿಡಗಳು ಬೆಳೆದಿದ್ದು, ಹಲವು ವಾಹನಗಳು ಕೆರೆಯ ಬದಿಗೆ ಜಾರಿದ ಉದಾಹರಣೆಗಳಿದೆ. ಇಗೀಗ ಕೆರೆಯು ಪುನಶ್ಚೇತನಗೊಂಡಿದ್ದು, ಕೆರೆಯ ಸುತ್ತಲೂ ಕಬ್ಬಿಣದ ಬೇಲಿ ಹಗೂ ರಸ್ತೆಯ ಬದಿಯಲ್ಲಿ ಕೆರೆಗೆ ಅಡ್ಡಲಾಗಿ ಕಬ್ಬಿಣದ ತಡೆಗೋಡೆ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು