ಮಡಿಕೇರಿ: ‘ಇಲ್ಲಿಯವರೆಗೂ ಯಾವುದೇ ಸರ್ಕಾರ ತೊಂದರೆ ಕೊಡದಷ್ಟು ಕಿರುಕುಳವನ್ನು ರೈತರಿಗೆ ಈ ಸರ್ಕಾರ ಕೊಡುತ್ತಿದೆ’ ಎಂದು ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಆರೋಪಿಸಿದರು.
‘ಇವರು ಈಚೆಗೆ ತಂದಿರುವ ಸುತ್ತೋಲೆಗಳು, ನಿರ್ಧಾರಗಳು ಹಾಗೂ ನಡೆಸುತ್ತಿರುವ ಭ್ರಷ್ಟಾಚಾರಗಳನ್ನು ನೋಡಿದರೆ ‘ಸರ್ಕಾರ ಹಠಾವೊ’ ಎನ್ನುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
‘ವನ್ಯಜೀವಿ ಉತ್ಪನ್ನಗಳನ್ನು ವಾಪಸ್ ಕೊಡಬೇಕು ಎನ್ನುವ ಸುತ್ತೋಲೆಯ ಮೂಲಕ ಇಲ್ಲಿನ ಜನರ ಭಾವನೆಗಳನ್ನು ಸರ್ಕಾರ ಘಾಸಿಗೊಳಿಸಿದೆ. ನೂರಾರು ವರ್ಷಗಳಿಂದ ಬಂದ ಪರಂಪರೆಗೆ ಧಕ್ಕೆ ತಂದಿದೆ’ ಎಂದು ಕಿಡಿಕಾರಿದರು.
‘ರೈತರ ತೋಟಗಳಲ್ಲಿರುವ ಮರಗಳನ್ನು ಸರ್ವೇ ಮಾಡುವ ಮೂಲಕ ಸರ್ಕಾರ ಗೊಂದಲ ಸೃಷ್ಟಿಸಿದೆ. ಮರಗಳ ಮಾಲೀಕತ್ವ ಮತ್ತು ತೆರವುಗೊಳಿಸುವುದು ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡಬಹುದು ಎಂಬ ಭೀತಿಯೂ ಮೂಡಿದೆ. ಈ ಸುತ್ತೋಲೆಯಿಂದ ಬೆಳೆಗಾರರಲ್ಲಿ ಗೊಂದಲ ಮೂಡಿದೆ’ ಎಂದು ದೂರಿದರು.
‘ಇನ್ನು ‘ಸಿ’ ಮತ್ತು ‘ಡಿ’ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಿನ ಶಾಸಕರು ಮಗುವನ್ನೂ ಚಿವುಟುವ ಹಾಗೂ ತೊಟ್ಟಿಲನ್ನೂ ತೂಗುವ ಕೆಲಸ ಮಾಡುತ್ತಿದ್ದಾರೆ. ಅವರದೇ ಸರ್ಕಾರ ‘ಸಿ’ ಮತ್ತು ‘ಡಿ’ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಲು ನಿವೃತ್ತ ಕೆಎಎಸ್ ಅಧಿಕಾರಿಯೊಬ್ಬರನ್ನು ಮೈಸೂರು ವಿಭಾಗಕ್ಕೆ ವ್ಯವಸ್ಥಾಪನಾ ಅಧಿಕಾರಿಯನ್ನಾಗಿ ನೇಮಿಸಿದೆ. ಮಾತ್ರವಲ್ಲ, ಉಪವಿಭಾಗಾಧಿಕಾರಿಗಳು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಪ್ರತಿ ಪಂಚಾಯಿತಿ ವ್ಯಾಪ್ತಿಯ ಮಾಹಿತಿ ಕೇಳಿದ್ದಾರೆ. ಈಗ ನೋಡಿದರೆ, ಶಾಸಕರು ಸೋಮವಾರಪೇಟೆಗೆ ಬಂದು ಪ್ರತಿಭಟನಾನಿರತ ರೈತರಿಂದ ಮನವಿ ಪತ್ರ ಸ್ವೀಕರಿಸಿದರು’ ಎಂದು ಅವರು ವ್ಯಂಗ್ಯವಾಡಿದರು.
‘ಸರ್ಕಾರದ ಈ ಎಲ್ಲ ಸುತ್ತೋಲೆಗಳು ಹಾಗೂ ನಿರ್ಧಾರಗಳು ಜನರಲ್ಲಿ ‘ಸರ್ಕಾರ ಹಠಾವೋ’ ಎನ್ನುವಂತಹ ಪರಿಸ್ಥಿತಿ ಸೃಷ್ಟಿಸಿದೆ’ ಎಂದರು.
ಮುಖಂಡರಾದ ಮಹೇಶ್ ಜೈನಿ, ಅರುಣ್‌ಕುಮಾರ್, ತಳೂರು ಕಿಶೋರ್‌ಕುಮಾರ್ ಭಾಗವಹಿಸಿದ್ದರು.
‘ಬಿಜೆಪಿಯ ಸದಸ್ಯತ್ವ ಅಭಿಯಾನವು ಸೆ. 1ರಿಂದ ಆರಂಭವಾಗಲಿದ್ದು ಕೊಡಗು ಜಿಲ್ಲೆಯಲ್ಲಿ 1.20 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ತಿಳಿಸಿದರು. ‘ಕಳೆದ ಬಾರಿ ಜಿಲ್ಲೆಯಲ್ಲಿ 60 ಸಾವಿರ ಮಂದಿ ನೋಂದಣಿಯಾಗಿತ್ತು.
ಈ ಬಾರಿ ಅದರ ದುಪ್ಪಟ್ಟು ಪ್ರಮಾಣದ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಲಾಗುವುದು’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಪ್ರತಿ ನೂರು ಮಂದಿಯನ್ನು ಸದಸ್ಯರನ್ನಾಗಿ ಮಾಡುವವರು ಸಕ್ರಿಯ ಸದಸ್ಯರು ಎಂಬ ಗೌರವಕ್ಕೆ ಪಾತ್ರರಾಗುತ್ತಾರೆ. ಈ ಬಾರಿ ಅತ್ಯಂತ ಸುಲಭದ ವಿಧಾನದಲ್ಲಿ ನೋಂದಣಿಯಾಗಬಹುದಾಗಿದೆ. 8800002024 ಸಂಖ್ಯೆ ಮಿಸ್‌ಕಾಲ್ ಕೊಟ್ಟರೆ ಸಾಕು ಮೊಬೈಲ್‌ಗೆ ಅರ್ಜಿ ಬರುತ್ತದೆ. ಫೋನ್‌ನಲ್ಲೆ ಅರ್ಜಿ ತುಂಬಿ ಸದಸ್ಯರಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.