ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಎಲ್ಲೆಲ್ಲೂ ರಣ ಬಿಸಿಲು, ಕಾವೇರಿ ತವರಿನಲ್ಲಿ ಜಲಕ್ಷಾಮ ಸನ್ನಿಹಿತ...!

ಫೆಬ್ರುವರಿಯಲ್ಲಿ ಒಂದು ಹನಿಯೂ ಬೀಳದ ಮಳೆ, ಕುಸಿಯುತ್ತಿದೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ
Published 26 ಫೆಬ್ರುವರಿ 2024, 5:02 IST
Last Updated 26 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆ ಮಳೆಯನ್ನು ಕಂಡು ಒಂದೂವರೆ ತಿಂಗಳು ಕಳೆದಿದೆ. ಕಳೆದ ವರ್ಷವಿಡೀ ಮಳೆಯ ಕೊರತೆಯನ್ನು ಅನುಭವಿಸಿದ್ದ ಜಿಲ್ಲೆ ಈ ವರ್ಷ ಜನವರಿ ಮೊದಲ ವಾರದಲ್ಲಿ ಒಂದಿಷ್ಟು ಮಳೆ ಕಂಡಿತು. ಆ ನಂತರ ಇಲ್ಲಿಯವರೆಗೂ ಒಂದು ಹನಿಯೂ ನೆಲಕ್ಕೆ ಬಿದ್ದಿಲ್ಲ. ವಾಡಿಕೆಯಂತೆ ಫೆಬ್ರುವರಿ ತಿಂಗಳಲ್ಲಿ ಬೀಳಬೇಕಿದ್ದ ಅತ್ಯಲ್ಪ ಮಳೆಯೂ ಈ ಬಾರಿ ಬಂದಿಲ್ಲ. ಹೀಗಾಗಿ, ಈ ತಿಂಗಳಿನಲ್ಲಿ ಫೆ. 24ರವರೆಗೂ ಶೇ 100ರಷ್ಟು ಮಳೆ ಕೊರತೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಅನುಭವಿಸುತ್ತಿವೆ.

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ನದಿ, ತೊರೆಗಳು ಒಣಗುತ್ತಿವೆ. ಎಲ್ಲಿ ನೋಡಿದರಲ್ಲಿ ಬಿಸಿಲೇ ಬಿಸಿಲು ಕಣ್ಣಿಗೆ ರಾಚುತ್ತಿದೆ. ಅಂತರ್ಜಲ ದಿನೇ ದಿನೇ ಕಡಿಮೆಯಾಗುತ್ತಿದ್ದು, ಕೊಳವೆಬಾವಿಗಳೂ ಬತ್ತಲಾರಂಭಿಸಿವೆ.

ಜಿಲ್ಲಾ ಪಂಚಾಯಿತಿಯು ಜಿಲ್ಲೆಯ 58 ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಅಂದಾಜಿಸಿದ್ದು, ಅದಕ್ಕಾಗಿ ಸಿದ್ಧತೆಗಳನ್ನು ಕೈಗೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಟೆಂಡರ್ ಸಹ ಆಗಿದೆ. ಆದರೆ, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 2 ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಿ ಟ್ಯಾಂಕರ್‌ನಲ್ಲಿ ನೀರನ್ನು ಪೂರೈಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ಕಾವೇರಿ ನದಿಯು ಮೂಲದಿಂದ ಹಿಡಿದು ಅದು ಹರಿಯುವಗುಂಟ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನು 15 ದಿನಗಳಲ್ಲಿ ಮಳೆಯಾಗದಿದ್ದರೆ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳೇ ಹೇಳುತ್ತಾರೆ.

ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿಯಲ್ಲಿ ಒಂದು ಬಡಾವಣೆಗೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿರುವ ಮಾಲ್ದಾರೆ, ಮಾಯಾಮುಡಿ, ಆರ್ಜಿ ಹಾಗೂ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ.

ಕುಶಾಲನಗರ: ಕುಡಿಯುವ ನೀರಿಗೆ ತತ್ವಾರ

ಕುಶಾಲನಗರ: ಬಿಸಿಲಿನ ತಾಪಮಾನಕ್ಕೆ ಜೀವನದಿ ಕಾವೇರಿ‌ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ‌ ಹರಿವಿನ ಪ್ರಮಾಣ ಕ್ಷೀಣಿಸುತ್ತಿದ್ದು, ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿವ ನೀರಿಗೆ‌ ಹಾಹಾಕಾರ ಉಂಟಾಗುವ ಸಂಭವ ಕಂಡುಬರುತ್ತಿದೆ.

ಕಾವೇರಿ ಹಾಗೂ ಹಾರಂಗಿ ನದಿಗಳ ದಂಡೆ ಮೇಲಿರುವ ನಂಜರಾಯಪಟ್ಟಣ, ರಂಗಸಮುದ್ರ, ಕುಶಾಲನಗರ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮಗಳು ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನು ಅವಲಂಬಿಸಿವೆ.

ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ತಾಲ್ಲೂಕಿನ ಗ್ರಾಮಾಂತರ ಪ್ರದೇಶ ವ್ಯಾಪ್ತಿಗಳಲ್ಲಿ ಈಗಾಗಲೆ‌ ನೀರಿನ ಅಭಾವ ಎದುರಾಗಿದೆ.‌ ನಂಜರಾಯಪಟ್ಟಣ, ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಗುಡ್ಡೆಹೊಸೂರು ವ್ಯಾಪ್ತಿಗಳಲ್ಲಿ ಈಗಾಗಲೆ ಕುಡಿವ ನೀರಿನ ಪೂರೈಕೆಗೆ ತೊಡಕಾಗಿದೆ.

ಕೂಡಿಗೆ,‌ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಗೋಣಿಕೊಪ್ಪಲು: ಕೆಲಸ ಮುಗಿದ ನಂತರ ನೀರು ತರುವ ಜನರು

ಗೋಣಿಕೊಪ್ಪಲು: ಕಳೆದ ವರ್ಷ ಮಳೆ ಕೊರತೆಯಿಂದ ಅಂತರ್ಜಲದ ಮಟ್ಟ ಈ ಬಾರಿ ಕುಸಿದಿದೆ. ಈ ವರ್ಷ ಫೆಬ್ರುವರಿಯಲ್ಲಿಯೇ ಬಿಸಿಲಿನ ತಾಪ ಅತಿಯಾಗಿ ತೊರೆ ತೋಡುಗಳು ಬತ್ತ ತೊಡಗಿವೆ. ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ.

ಜಿಲ್ಲೆಯಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ನಾಗರಹೊಳೆ ಅರಣ್ಯದಂಚಿನ ಗ್ರಾಮಗಳಾದ ಬಾಳೆಲೆ, ನಿಟ್ಟೂರು, ಕಾನೂರು, ತಿತಿಮತಿ, ದೇವರಪುರ ಮೊದಲಾದ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಊರುಗಳೆಲ್ಲವೂ ಕುಡಿಯುವ ನೀರಿಗೆ ಅವಲಂಬಿಸಿರುವುದು ಕೊಳವೆಬಾವಿಯ ನೀರನ್ನು. ಗ್ರಾಮ ಪಂಚಾಯಿತಿಗಳು ನೀರು ಸರಬರಾಜುವಿಗೆ ನೆಚ್ಚಿಕೊಂಡಿರುವುದು ಇದೇ ಕೊಳವೆಬಾವಿಗಳನ್ನು. ಕಳೆದ ವರ್ಷ ಮಳೆ ತೀರ ಕಡಿಮೆ ಬಿದ್ದಿದ್ದರಿಂದ ಅಂತರ್ಜಲದ ಕೊರತೆ ಎದುರಾಗಿ, ಈಗಾಗಲೆ ಕೊಳವೆಬಾವಿಗಳಲ್ಲಿ ನೀರಿನಮಟ್ಟ ಕುಸಿದಿದೆ. ಹೀಗಾಗಿ, ಗ್ರಾಮ ಪಂಚಾಯಿತಿಗಳು ಜನತೆಗೆ 3 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡುತ್ತಿವೆ.

ಬಾಳೆಲೆ, ನಿಟ್ಟೂರು, ಕಾರ್ಮಾಡು, ಕಾನೂರು ಭಾಗಗಳಲ್ಲಿ ಲಕ್ಷ್ಮಣತೀರ್ಥ ನದಿ ಹಾದು ಹೋಗಿದ್ದರೂ, ಇದರ ನೀರನ್ನು ಕುಡಿಯುವುದಕ್ಕಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಿಲ್ಲ. ನದಿ ದಡದ ಜನತೆ ಈಗಲೂ ಅವಲಂಬಿಸಿರುವುದು ಕೊಳವೆಬಾವಿಗಳ ನೀರನ್ನೇ. ಈ ಬಾರಿ ಲಕ್ಷ್ಮಣತೀರ್ಥ ನದಿ ಕೂಡ ಬತ್ತಿ ಹೋಗಿದೆ. ಕಿರುಗೂರು, ನಲ್ಲೂರು, ಬೆಸಗೂರು ಭಾಗದಲ್ಲಿ ಹರಿಯುವ ಕೀರೆಹೊಳೆ ಕೂಡ ಬತ್ತಿ ಹೋಗಿದೆ.

ಇನ್ನು ತಿತಿಮತಿ ಸುತ್ತಮುತ್ತಲಿನ ಗಿರಿಜನ ಹಾಡಿಗಳಾದ ದೇವರಪುರ, ರೇಶ್ಮೆಹಡ್ಲು, ಬೊಂಬು ಹಾಡಿ ಮೊದಲಾದ ಗಿರಿಜನ ಹಾಡಿಗಳಲ್ಲಿರುವ ಕೊಳವೆಬಾವಿಗಳು ಬತ್ತಿವೆ. ಹೀಗಾ, ಇಲ್ಲಿನ ಜನರು ಕಾಫಿ ತೋಟದ ಕೂಲಿ ಕೆಲಸ ಮುಗಿಸಿಕೊಂಡು ಬಂದ ಬಳಿಕ ಸಂಜೆ ಆನೆಕಾಟದ ನಡುವೆಯೂ ಹಳ್ಳದ ತೆರೆದ ಬಾವಿಯಿಂದ ನೀರು ತರುತ್ತಿದ್ದಾರೆ.

ಮಾಹಿತಿ: ಜೆ.ಸೋಮಣ್ಣ, ರೆಜಿತ್‌ಕುಮಾರ್‌ಗುಹ್ಯ, ರಘು ಹೆಬ್ಬಾಲೆ, ಎಂ.ಎನ್.ಹೇಮಂತ್.

ನಾಗರಹೊಳೆ ಅರಣ್ಯದಂಚಿನ ದೇವರಪುರ ಗಿರಿಜನ ಹಾಡಿಯ ಜನರು ಕುಡಿಯುವ ನೀರನ್ನು ಬಹುದೂರದಿಂದ ಹೊತ್ತು ತರುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ದೇವರಪುರ ಗಿರಿಜನ ಹಾಡಿಯ ಜನರು ಕುಡಿಯುವ ನೀರನ್ನು ಬಹುದೂರದಿಂದ ಹೊತ್ತು ತರುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ರೇಶ್ಮೆಹಡ್ಲು ಗಿರಿಜನ ಹಾಡಿಯ ಜನರು ನೀರು ಕಡಿಮೆಯಾಗಿರುವ ಕೊಳವೆಬಾವಿಯ ಮುಂದೆ ನೀರಿಗಾಗಿ ಕೊಡೆಯನ್ನಿರಿಸಿ ಸಾಲುಗಟ್ಟಿ ನಿಂತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ರೇಶ್ಮೆಹಡ್ಲು ಗಿರಿಜನ ಹಾಡಿಯ ಜನರು ನೀರು ಕಡಿಮೆಯಾಗಿರುವ ಕೊಳವೆಬಾವಿಯ ಮುಂದೆ ನೀರಿಗಾಗಿ ಕೊಡೆಯನ್ನಿರಿಸಿ ಸಾಲುಗಟ್ಟಿ ನಿಂತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ಚೊಟ್ಟೆಪಾರಿ ಹಾಡಿಯಲ್ಲಿ ಸಾರ್ವಜನಿಕ ಕೊಳಾಯಿಯೊಂದರ ದೃಶ್ಯ ಶುಕ್ರವಾರ ಹೀಗೆ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ಚೊಟ್ಟೆಪಾರಿ ಹಾಡಿಯಲ್ಲಿ ಸಾರ್ವಜನಿಕ ಕೊಳಾಯಿಯೊಂದರ ದೃಶ್ಯ ಶುಕ್ರವಾರ ಹೀಗೆ ಕಂಡು ಬಂತು
ಕುಡಿಯುವ ನೀರಿನ ಸಮಸ್ಯೆ ಸನ್ನಿಹಿತವಾಗಿರುವ ಈ ದಿನಗಳಲ್ಲೂ ವಿರಾಜಪೇಟೆಯ ಗಾಂಧಿನಗರದಲ್ಲಿ ಕೊಳವೆಬಾವಿಗಳು ದುಸ್ಥಿತಿಯಲ್ಲಿವೆ
ಕುಡಿಯುವ ನೀರಿನ ಸಮಸ್ಯೆ ಸನ್ನಿಹಿತವಾಗಿರುವ ಈ ದಿನಗಳಲ್ಲೂ ವಿರಾಜಪೇಟೆಯ ಗಾಂಧಿನಗರದಲ್ಲಿ ಕೊಳವೆಬಾವಿಗಳು ದುಸ್ಥಿತಿಯಲ್ಲಿವೆ
ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ
ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ

Cut-off box - ಜನಾಭಿಪ್ರಾಯ ಕುಡಿಯುವ ನೀರು ಒದಗಿಸಲಿ ದೇವರಪುರ ಗ್ರಾಮ ಪಂಚಾಯಿತಿ ಹಾಡಿಜನರಿಗೆ ಕುಡಿಯುವ ನೀರಿನ ಸೌಲಭ್ಯ ನೀಡಲಿ. ಹಾಡಿಯಲ್ಲಿ ಇರುವ ಕೊಳವೆಬಾವಿಯಲ್ಲಿ ನೀರೇ ಬರುತ್ತಿಲ್ಲ. ಹೀಗಾಗಿ ಹಳ್ಳದ ತೆರೆದ ಬಾವಿಯಲ್ಲಿ ನೀರು ಮೊಗೆದುಕೊಂಡು ಮಹಿಳೆಯರು ಮನೆಗೆ ನೀರು ತರುತ್ತಿದ್ದಾರೆ. ಜೆ.ಆರ್.ಸುಬ್ರಮಣಿ ಹಾಡಿ ದಲಿತ ಸಂಘರ್ಷ ಸಮಿತಿ ಸಂಚಾಲಕ. ವಿರಾಜಪೇಟೆ ಪುರಸಭೆ ಅಧಿಕಾರಿಗಳು ಗಮನಹರಿಸಿರಿ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕಣ್ಮುಚ್ಚಿ ಕುಳಿತ ಪುರಸಭೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪುರಸಭೆ ವ್ಯಾಪ್ತಿಯಲ್ಲಿನ ಸಾಕಷ್ಟು ಕೊಳವೆ ಬಾವಿಗಳು  ಹದಗೆಟ್ಟ ಸ್ಥಿತಿಯಲ್ಲಿವೆ. ಗಾಂಧಿನಗರ ವಾರ್ಡಿನಲ್ಲೆ ಹಲವು ಕೊಳವೆ ಬಾವಿಗಳಿದ್ದರೂ ಸರಿಯಾಗಿ ನೀರು ಪೂರೈಸುವ ಸ್ಥಿತಿಯಲ್ಲಿಲ್ಲ. ಪುರಸಭೆ ಅಧಿಕಾರಿಗಳು ಈ ಬಗ್ಗೆ ಕಡೆ ಗಮನಹರಿಸಿ ದುರಸ್ತಿಗೊಳಿಸಿದರೆ ನೀರಿನ ಅಭಾವ ಕೊಂಚ ಕಡಿಮೆಯಾಗಬಹುದು. ಪಿ.ಎ.ಮಂಜುನಾಥ್ ವಿರಾಜಪೇಟೆ. ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದಿರಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸದೆ ಪೋಲು ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು. ಸಾರ್ವಜನಿಕರು ನಲ್ಲಿಯನ್ನು ಕಳಚಿ ಉಪಯೋಗಿಸುತ್ತಿದ್ದು ಕಂಡುಬಂದಲ್ಲಿ ಗ್ರಾಮ ಪಂಚಾಯಿತಿಯಿಂದ ದಂಡ ವಿಧಿಸಲಾಗುವುದು. ಭಾಸ್ಕರ್ ನಾಯಕ್ ಅಧ್ಯಕ್ಷ ಕೂಡುಮಂಗಳೂರು ಗ್ರಾಮ ಪಂಚಾಯತಿ. ಮೋಟರ್ ಕೆಟ್ಟಿದೆ ದುಬಾರೆ ಸಾಕಾನೆ ಶಿಬಿರದ ಹಾಡಿಯಲ್ಲಿ ಕಳೆದ ಕೆಲವು ವಾರಗಳಿಂದ ಮೋಟರ್ ಕೆಟ್ಟಿದ್ದು ಕುಡಿಯುವ ನೀರಿಗಾಗಿ ದೂರದ ಕಾವೇರಿ ನದಿಗೆ ತೆರಳುವಂತಾಗಿದೆ. ಹಾಡಿಯಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಮೋಟರ್ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಕಾವೇರಿ ನದಿಗೆ ತೆರಳಿ ನೀರು ತೆಗೆದುಕೊಂಡು ಬರುತ್ತಿದ್ದೇವೆ  ಜೆ.ಕೆ.ಡೋಬಿ ಗ್ರಾಮಸ್ಥ ದುಬಾರೆ ಸಾಕಾನೆ ಶಿಬಿರದ ಹಾಡಿ ಕೊರತೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಬಿಸಿಲು ವಿಪರೀತವಾಗಿದೆ. ಸದ್ಯ ಅಲ್ಲಲ್ಲಿ ಬರುತ್ತಿರುವ ನೀರಿನ ಕೊರತೆಯ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾದ ಕಡೆ ತಕ್ಷಣವೇ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ನೀರು ಬಾರದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಸುರೇಶ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ‌

Cut-off box - ಅಸ್ತಾನ ಹಾಡಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸಿದ್ದಾಪುರ: ಅಸ್ತಾನ ಗಿರಿಜನರ ಹಾಡಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು ಹಾಡಿಯ ನಿವಾಸಿಗಳು ನೀರಿಗಾಗಿ ಸುಮಾರು ಒಂದು ಕಿ.ಮೀ ದೂರ ಕ್ರಮಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆಸ್ತಾನ ಹಾಡಿಯಲ್ಲಿ ಸುಮಾರು 29 ಕುಟುಂಬಗಳ ವಾಸವಾಗಿದ್ದು ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದ ಮಹಿಳೆಯರು ತೋಟ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಬಂದ ಬಳಿಕ ಕಿಲೋಮೀಟರ್ ದೂರ ಕ್ರಮಿಸಿ ನೀರು ತರುತ್ತಿದ್ದಾರೆ. ಹಾಡಿಯಲ್ಲಿ ಈ ಹಿಂದೆಯೇ ಕೊಳವೆಬಾವಿ ನಿರ್ಮಿಸಿದ್ದರೂ ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ಇದೀಗ ಕೆಲವು ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೇ ಪೈಪ್‌ಲೈನ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವ ಕಾರಣ ಹಾಡಿಗೆ ನೀರು ಲಭಿಸುತ್ತಿಲ್ಲ. ಹಲವು ವರ್ಷಗಳ ಹಿಂದೆ ಕೆಲವು ಭಾಗದಲ್ಲಿ ಪೈಪ್‌ಲೈನ್ ಅಳವಡಿಸಿದ್ದು ಇದೀಗ ಅಲ್ಲಲ್ಲಿ ದುರಸ್ಥಿಯಾಗಿದೆ. ಗ್ರಾಮ ಪಂಚಾಯಿತಿ ಶೀಘ್ರದಲ್ಲೇ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT