ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೇಲಾವರದ ಪ್ರತಿರೂಪ ಈ ಚೆಲುವಿನ ಜಲಪಾತ!

Published 7 ಜುಲೈ 2024, 8:01 IST
Last Updated 7 ಜುಲೈ 2024, 8:01 IST
ಅಕ್ಷರ ಗಾತ್ರ

ನಾಪೋಕ್ಲು: ಮಳೆಗಾಲದಲ್ಲಿ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ. ಸೊಗಸಾದ ಜಲಪಾತದ ಸೌಂದರ್ಯ ವೀಕ್ಷಿಸಲು ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.

ಚೇಲಾವರದ ಪ್ರತಿರೂಪಸಂತಿರುವ ಮತ್ತೊಂದು ಜಲಪಾತ ಅಲ್ಲಿಂದ ಕೂಗಳತೆಯ ದೂರದಲ್ಲಿದೆ. ಕಾಫಿಯ ತೋಟದೊಳಗಿನ ಜಲಪಾತವಿದು. ಅಲ್ಲಿನ ಕಾಫಿ ಬೆಳೆಗಾರ ಮನಿಯಪಂಡ ಧೀರಜ್ ತಿಮ್ಮಯ್ಯ ಅವರ ತೋಟದಲ್ಲಿ ಭೋರ್ಗರೆಯುವ ಅಪರೂಪದ ಜಲಪಾತವಿದು. ಹೆಚ್ಚಿನವರ ಕಣ್ಣಿಗೆ ಬೀಳದೇ ಅಜ್ಞಾತವಾಗಿದೆ.

ಚೆಯ್ಯಂಡಾಣೆಯಿಂದ 4 ಕಿ.ಮೀ ದೂರದಲ್ಲಿದೆ ಈ ಜಲಪಾತ. ಚೇಲಾವರ ಜಲಪಾತದ ವೀಕ್ಷಣೆಗೆ ತೆರಳಿದವರು ಮಾಲೀಕರ ಅನುಮತಿ ಪಡೆದು ಈ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಂತೂ ಈ ಜಲಪಾತದ ಸೊಬಗು ವರ್ಣನಾತೀತ. ಹಾಲಿನ ಹೊಳೆಯೇ ಹರಿದು ಬರುತ್ತಿರುವಂತೆ ಗೋಚರಿಸುತ್ತದೆ. ಮುಂದುವರಿದು ರಸ್ತೆಯಂಚಿನಲ್ಲಿ ಇದೇ ಪ್ರಸಿದ್ಧ ಜಲಪಾತವಾಗಿದೆ. ತೋಟದೊಳಗಿನ ಜಲಪಾತ ಅನಾಮಧೇಯ ಜಲಪಾತ. ತೋಟದ ಮಾಲೀಕರನ್ನು ಕೇಳಿದರೆ ಇದು ಮನಿಯಪಂಡ ಜಲಪಾತ ಎಂದು ಹೇಳುತ್ತಾರೆ.

ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಜಲಪಾತ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟ ಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ.

ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಚೋಮಕುಂದು ಬೆಟ್ಟದಿಂದ ಸೋಮನ ನದಿ ಹರಿದುಬರುತ್ತದೆ. ಈ ನದಿ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತವಾಗಿ ಧುಮುಕುತ್ತವೆ. ಹಾಗೆಯೇ, ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.

ಚೇಲಾವರ ಜಲಪಾತದ ಮನಮೋಹಕ ನೋಟ.
ಚೇಲಾವರ ಜಲಪಾತದ ಮನಮೋಹಕ ನೋಟ.

ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಚೇಲಾವರದ ಜಲಪಾತಕ್ಕೆ ಏಮೆಪಾರೆ ಎಂದು ಹೆಸರು. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನಮನೋಹರ. ವಿರಾಜಪೇಟೆಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 4 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಯ ಸೊಬಗು ಸವಿಯಬಹುದು. ಸುತ್ತಲಿನ ಬೆಟ್ಟಗುಡ್ಡಗಳತ್ತ ದೃಷ್ಟಿ ಹಾಯಿಸುತ್ತಾ ತೂಂಗು ಕೊಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕಪ್ಪು ಬಂಡೆಯ ಮೇಲಿಂದ ಭೋರ್ಗರೆಯುತ್ತಾ ಧುಮುಕುವ ರಮಣೀಯವಾದ ಸೋಮನ ನದಿಯ ಜಲಪಾತದ ದರ್ಶನವಾಗುತ್ತದೆ. ಸ್ಥಳೀಯ ಜನರು ಈ ಜಲಪಾತವನ್ನು ಏಮೆಪಾರೆ ಎಂದು ಕರೆಯುತ್ತಾರೆ.

ಎಡಬದಿಯಲ್ಲಿರುವ ಕಾಫಿಯ ತೋಟಗಳ ನಡುವೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದು. ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಈ ಕಾನನ ಬೆಡಗಿಯ ಸೌಂದರ್ಯ ವರ್ಣನಾತೀತ. ಸುಮಾರು 100 ಅಡಿ ಎತ್ತರದಿಂದ ಧುಮುಕುವ ಜಲಧಾರೆ ಶ್ವೇತ ವೈಭವದಿಂದ ಕಂಗೊಳಿಸುತ್ತದೆ.

ಮಡಿಕೇರಿಯಿಂದ ಚೆಯ್ಯಂಡಾಣೆಗೆ ಬಸ್‌ ಸೌಕರ್ಯವಿದೆ. ಅಲ್ಲಿಂದ ಚೇಲಾವರಕ್ಕೆ ಆಟೊಗಳು ಸಿಗುತ್ತವೆ. ಅಲ್ಲಿಂದ ಕೂಗಳತೆಯ ದೂರದಲ್ಲಿದೆ ಅದರದ್ದೇ ಪ್ರತಿರೂಪ ಎಂಬಂತಿರುವ ಜಲಪಾತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT