ಭಾನುವಾರ, ಏಪ್ರಿಲ್ 11, 2021
28 °C
ರೊಚ್ಚಿಗೆದ್ದ ಗ್ರಾಮಸ್ಥರು: ಆರು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ

ಹುಲಿಗೆ ಬಾಲಕ ಬಲಿ: ಸೆರೆ ಸಿಗದಿದ್ದರೆ ಗುಂಡಿಕ್ಕಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ (ಕೊಡಗು): ಪೊನ್ನಂಪೇಟೆಯ ಬೆಳ್ಳೂರು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಹುಲಿಯೊಂದು ಇಬ್ಬರ ಮೇಲೆ ದಾಳಿ ನಡೆಸಿದೆ. ಬಾಲಕ ರಂಗಸ್ವಾಮಿ (8) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆತನ ಅಜ್ಜ, ಗುಂಡ್ಲಪೇಟೆಯ ಕೆಂಚ (50) ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹುಲಿ ಸೆರೆಗೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದು, ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದರೆ ಕೊನೆಯ ಆಯ್ಕೆಯಾಗಿ ಗುಂಡಿಕ್ಕಲು ಸೂಚನೆ ನೀಡಲಾಗಿದೆ. ಕಾರ್ಯಾಚರಣೆಗೆ ಬೆಂಗಳೂರಿನಿಂದ, ತಜ್ಞ ಸುಶೀಲ್ ಅವರನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿದೆ. ಪ್ರಾಣ ಹಾನಿಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ರೊಚ್ಚಿಗೆದ್ದ ಗ್ರಾಮಸ್ಥರು: ಇದಕ್ಕೂ ಮುನ್ನ, ವಿಷಯ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಗ್ರಾಮಸ್ಥರು ಮತ್ತು ರೈತ ಸಂಘದ ಮುಖಂಡರು, ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿ ಬೆಳ್ಳೂರು ಗ್ರಾಮದಲ್ಲಿ ಪೊನ್ನಂಪೇಟೆ-ಕುಟ್ಟ ಮೂಲಕ ಕೇರಳ ಸಂರ್ಪಕಿಸುವ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕಾರ್ಯಾಚರಣೆಗೆ ತೆರಳುತ್ತಿದ್ದ ಸಾಕಾನೆಗಳನ್ನೂ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ವೈಫಲ್ಯವೇ ಕಾರಣ ಎಂದು ದೂರಿದ ಅವರು, ‘ನಿಮ್ಮಿಂದ (ಅರಣ್ಯ ಇಲಾಖೆಯ ಸಿಬ್ಬಂದಿ) ಸೆರೆ ಹಿಡಿಯಲಾಗದಿದ್ದರೆ ನಮಗೆ ಅವಕಾಶ ನೀಡಿ. ನಾವೇ ಗುಂಡಿಕ್ಕುತ್ತೇವೆ’ ಎಂದು ಹರಿಹಾಯ್ದರು.‌

‘ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 10 ದಿನಗಳಿಂದ ಹುಲಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಗ್ರಾಮಸ್ಥರನ್ನು ಸಮಾಧಾನಗೊಳಿಸಲು ಯತ್ನಿಸಿದರು. ತೀವ್ರ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಹಾಗೂ ಕಾರ್ಮಿಕರು, ಆರಂಭದಲ್ಲಿ ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಮನವೊಲಿಕೆ ನಂತರ, ಕಾರ್ಯಾಚರಣೆ ನಡೆಸಲು ಸಾಕಾನೆಗಳಿಗೆ ಅನುವು ಮಾಡಿಕೊಟ್ಟರು.

ನಿಷೇಧಾಜ್ಞೆ ಜಾರಿ: ಹುಲಿ ದಾಳಿಯಿಂದ ಕಂಗೆಟ್ಟಿರುವ ಬೆಳ್ಳೂರು, ನಿಟ್ಟೂರು, ಶ್ರೀಮಂಗಲ, ಕುರ್ಚಿ, ಮಂಚಳ್ಳಿ, ಬಾಳೆಲೆ ಭಾಗದ ಜನರ ಆಕ್ರೋಶ ಹೆಚ್ಚಾಗಿದೆ. ಘರ್ಷಣೆ ತಡೆಯುವ ನಿಟ್ಟಿನಲ್ಲಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಾನುವಾರುಗಳ ಮೇಲೂ ದಾಳಿ: ಬೆಳ್ಳೂರು ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದ ಹುಲಿ ದಾಳಿಯಲ್ಲಿ ಒಂದು ಜಾನುವಾರು ಸಾವಿಗೀಡಾಗಿದ್ದು ಮತ್ತೊಂದು ಗಾಯಗೊಂಡಿದೆ. ಈ ಹುಲಿ ಜಾನುವಾರುಗಳ ಮೇಲೂ ನಿರಂತರ ದಾಳಿ ನಡೆಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು