ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ದಿಮ್ಮಿ ಸಾಗಣೆ: ಅವಕಾಶಕ್ಕೆ ಆಗ್ರಹ

ಕಾಫಿ ಬೆಳೆಗಾರರು, ಟಿಂಬರ್ ಕೆಲಸಗಾರರ ಪ್ರತಿಭಟನೆ
Last Updated 5 ಸೆಪ್ಟೆಂಬರ್ 2018, 9:55 IST
ಅಕ್ಷರ ಗಾತ್ರ

ಮಡಿಕೇರಿ: ಮರದ ದಿಮ್ಮಿಗಳ ಸಾಗಾಟಕ್ಕೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಟಿಂಬರ್ ಅಸೋಸಿಯೇಷನ್, ಟಿಂಬರ್‌ ಕೆಲಸಗಾರರ ಸಂಘ ಹಾಗೂ ಸೋಮವಾರಪೇಟೆ ಕಾಫಿ ಬೆಳೆಗಾರರ ಹೋರಾಟ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಮರದ ದಿಮ್ಮಿ ಸಾಗಾಟಕ್ಕೆ ಜಿಲ್ಲಾಡಳಿತ ಎರಡು ತಿಂಗಳ ಕಾಲ ನಿರ್ಬಂಧ ಹೇರಿರುವ ಕ್ರಮ ಸರಿಯಲ್ಲ. ಆದೇಶವನ್ನು ಪುನರ್ ಪರಿಶೀಲಿಸುವಂತೆ ಪದಾಧಿಕಾರಿಗಳು ಒತ್ತಾಯಿಸಿದರು.

ಟಿಂಬರ್‌ ಅಸೋಸಿಯೇಷನ್‌ ಸದಸ್ಯ ಸಮೀರ್ ಮಾತನಾಡಿ, ‘ಈ ಆದೇಶದಿಂದ ಬೆಳೆಗಾರರು, ಮರದ ವ್ಯಾಪಾರಿಗಳು ಹಾಗೂ ಕಾರ್ಮಿಕರು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮರದ ದಿಮ್ಮಿಗಳ ಸಾಗಾಟದ ಮೇಲೆ ಆ. 31ರವರೆಗೆ ಇದ್ದ ನಿರ್ಬಂಧವನ್ನು ಮತ್ತೆ ಎರಡು ತಿಂಗಳುಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಮರಗಳು ಬೇಗನೆ ಹಾಳಾಗಲಿದ್ದು, ಸರಿಯಾದ ಸಮಯಕ್ಕೆ ವಿಲೇವಾರಿ ಆಗದೆ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ಬಿದ್ದ ಮರಗಳಿಗೆ ಹುಳು ಹಿಡಿದು ಕೊಳೆತರೆ ನಷ್ಟವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

20 ಟನ್ ಮೇಲ್ಪಟ್ಟ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಸಿಮೆಂಟ್, ಕಬ್ಬಿಣ, ಇತ್ಯಾದಿ ಸರಕು ವಾಹನಗಳು 40 ಟನ್ ತೂಕವಿದ್ದರೂ ಜಿಲ್ಲೆಗೆ ಬರುತ್ತಿವೆ. ಅವುಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಸಮೀರ್ ಆರೋಪಿಸಿದರು.

‘ಮರದ ವ್ಯಾಪಾರವನ್ನು ಟಿಂಬರ್ ಲಾಬಿ ಎಂದು ಜಿಲ್ಲಾಡಳಿತ ಬಿಂಬಿಸುತ್ತಿರುವುದು ಸರಿಯಲ್ಲ. ಸಾಕಷ್ಟು ವರ್ಷಗಳಿಂದ ಈ ವ್ಯಾಪಾರದಿಂದಲೇ ಜೀವನ ನಿರ್ವಹಿಸುತ್ತಿದ್ದೇವೆ. ಬೆಟ್ಟಗುಡ್ಡ, ಅರಣ್ಯ ಪ್ರದೇಶದಿಂದ ಮರಗಳನ್ನು ಕೊಂಡೊಯ್ಯುತ್ತಿಲ್ಲ’ ಎಂದು ಹೇಳಿದರು.

ಕಾಫಿ ಬೆಳೆಗಾರರಾದ ಚಂಗಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಗಾಳಿಯಿಂದ ಕಾಫಿ ತೋಟಗಳಲ್ಲಿ ಬೆಳೆಸಿದ ಸಿಲ್ವರ್, ಬಳಂಜಿ, ಬೆಲೆಬಾಳುವ ಮರಗಳು ನೆಲಕಚ್ಚಿವೆ. ರೈತಾಪಿ ಜನರು ಜೀವನೋಪಾಯಕ್ಕಾಗಿ ಅಗತ್ಯ ಸಹಕಾರ ನೀಡುವ ಉದ್ದೇಶದಿಂದ ಆದೇಶವನ್ನು ಹಿಂಪಡೆಯಬೇಕು’ ಎಂದು ಮನವಿ ಮಾಡಿದರು.

ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಮಾತನಾಡಿ, ‘ಎರಡು ತಿಂಗಳ ಕಾಲ ಮರಗಳನ್ನು ಹಾಗೆ ತೋಟದಲ್ಲಿಯೇ ಉಳಿಸಿಕೊಂಡರೆ ಮಾರಾಟ ಮಾಡಲು ಸಾಧ್ಯವಿಲ್ಲ. ಅತಿವೃಷ್ಟಿಯಿಂದ ರೈತರು ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದು, ಕೂಲಿ ಕಾರ್ಮಿಕರು ಕೆಲಸ ಸಿಗದೆ ಪರಿತಪಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿದ್ದ ಮರಗಳ ದಿಮ್ಮಿಗಳ ಸಾಗಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲ್ ಸುಬ್ರಮಣಿ, ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಸಾಜಿ, ಬೆಳ್ಯಪ್ಪ, ಅರವಿಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT