ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಆಗಮನ: ದುಬಾರೆಯಲ್ಲಿ ಜೀವಕಳೆ

ಕೊರೊನಾ ಆತಂಕದಿಂದ ಸೊರಗಿದ್ದ ಜಿಲ್ಲೆಯ ಪ್ರವಾಸೋದ್ಯಮ
Last Updated 2 ನವೆಂಬರ್ 2020, 20:30 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಭಾನುವಾರ ಪ್ರವಾಸಿಗರ ಕಲರವ ಕಂಡುಬಂದಿತು. ಪ್ರಾಕೃತಿಕ ವಿಕೋಪ ಹಾಗೂ ಕೊರೊನಾ ಲಾಕ್‌ಡೌನ್‌ನಿಂದ ಸಂಪೂರ್ಣ ಸೊರಗಿ ಹೋಗಿದ್ದ ಪ್ರವಾಸಿ ತಾಣಗಳು ಪ್ರವಾಸಿಗರ ಆಗಮನದಿಂದ ಜೀವಕಳೆ ಬಂದಿದೆ.

ಉತ್ತರ ಭಾರತದ ವಿವಿಧ ರಾಜ್ಯಗಳು ಸೇರಿದಂತೆ, ಕೇರಳ, ತಮಿಳುನಾಡು ಹಾಗೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇನ್ನಿತರ ಕಡೆಗಳಿಂದ ಪ್ರವಾಸಿಗರು ವಾಹನಗಳಲ್ಲಿ ಆಗಮಿಸುತ್ತಿದ್ದು, ದುಬಾರೆ ಸಾಕಾನೆ ಶಿಬಿರಕ್ಕೆ ದೋಣಿ ಮೂಲಕ ತೆರಳಲು ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತ್ತಿರುವ ದೃಶ್ಯ ಕಂಡುಬಂದಿತು.

ಅರಣ್ಯ ಇಲಾಖೆಯ 2 ದೋಣಿಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯತ್ತಿದ್ದಾರೆ. ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಮುಗಿಸಿ, ಮರಳಿ ಬಂದಿರುವ ಸಾಕಾನೆಗಳೇ ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿವೆ. ದೂರದ ಊರುಗಳಿಂದ ಆಗಮಿಸಿದ್ದ ಪ್ರವಾಸಿಗರು ಝಳು ಝಳು ನಾದದೊಂದಿಗೆ ಹರಿಯುವ ಕಾವೇರಿ ನದಿಯಲ್ಲಿ ದೋಣಿ ವಿಹಾರ ಮಾಡಿ, ಸಾಕಾನೆ ಶಿಬಿರದಲ್ಲಿನ ದಸರಾ ಆನೆಗಳಾದ ವಿಕ್ರಂ, ಕಾವೇರಿ, ವಿಜಯಾ ಹಾಗೂ ಗೋಪಿ ಆನೆಗಳ ಚಟುವಟಿಕೆಗಳನ್ನು ವೀಕ್ಷಿಸಿದರು. ಶಿಬಿರದ ಸುತ್ತಲು ಸುತ್ತಾಡಿ ಹಸಿರು ವನಸಿರಿಯ ನಡುವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದರು. ಕೆಲವು ಪ್ರವಾಸಿಗರು ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸಿದರು.

ಪ್ರವಾಸಿಗರು ಸಾಕಾನೆಗಳ ಬಳಿಗೆ ಬಾರದಂತೆ 20 ಅಡಿ ದೂರದಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು, ದೂರದಿಂದಲೇ ಆನೆಗಳನ್ನು ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರವಾಸಿ ಕೇಂದ್ರ ವೀಕ್ಷಣೆಗೆ ನಿರ್ಬಂಧ: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ರಜಾದಿನಗಳಲ್ಲಿ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಕುಶಾಲನಗರ ಸುತ್ತಮುತ್ತಲಿನ ದುಬಾರೆ, ನಿಸರ್ಗಧಾಮ, ಚಿಕ್ಲಿಹೊಳೆ ಭೇಟಿ ನೀಡುತ್ತಿದ್ದಾರೆ.
ಆದರೆ, ಪಟ್ಟಣದ ಸಮೀಪವಿರುವ ಗೋಲ್ಡನ್ ಟೆಂಪಲ್ ಮತ್ತು ಹಾರಂಗಿ ಜಲಾಶಯ ಹಾಗೂ ಸಂಗೀತ ಕಾರಂಜಿ ವೀಕ್ಷಣೆಗೆ ನಿರ್ಬಂಧ ಹೇರಿರುವುದರಿಂದ ಪ್ರವಾಸಿಗರಿಗೆ ನಿರಾಸೆ ಆಗುತ್ತಿದೆ.

ಕೊರೊನಾ ಮುಂಜಾಗ್ರತಾ ಕ್ರಮ: ಕೊರೊನಾ ವೈರಸ್ ಚಳಿಗಾಲದಲ್ಲಿ ಹೆಚ್ಚಾಗಿ ವ್ಯಾಪಿಸಿ, ಅನಾಹುತ ಉಂಟು ಮಾಡಲಿದೆ ಎಂದು ತಜ್ಞರು ಸಲಹೆ ನೀಡಿದ್ದು, ಸರ್ಕಾರ ಕೂಡ ಎಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.

ಪ್ರವಾಸಿಗರಿಗೆ ಥರ್ಮಲ್ ಸ್ಕ್ಯಾನಿಂಗ್, ದೋಣಿಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡುತ್ತಿದ್ದರೂ ಕೆಲವು ಪ್ರವಾಸಿಗರು ಮಾತ್ರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್ ಹೇಳಿದರು.

ಪ್ರವಾಸೋದ್ಯಮಕ್ಕೆ ಹಿನ್ನಡೆ:ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸೋದ್ಯಮಿಗಳು ಸಾಲಸೋಲ ಮಾಡಿ ರ್‍ಯಾಫ್ಟಿಂಗ್‌ ಖರೀದಿಸಿ ಕಾವೇರಿ ನದಿಯಲ್ಲಿ ಜಲಕ್ರೀಡೆ ನಡೆಸುತ್ತಿದ್ದರು. ಜೊತೆಗೆ ಹತ್ತಾರು ಕಾರ್ಮಿಕರು ಇಲ್ಲಿ ಉದ್ಯೋಗ ಕಂಡುಕೊಂಡಿದ್ದರು. ಜಲಕ್ರೀಡೆ ಹಾಗೂ ದೋಣಿ ವಿಹಾರ ಸ್ಥಗಿತಗೊಂಡಿರುವ ಹಿನ್ನೆಲೆ, ಉದ್ಯಮಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗವಿಲ್ಲದೇ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಆದ್ದರಿಂದ, ನಿಯಮಾನುಸಾರ ರ್‍ಯಾಫ್ಟಿಂಗ್‌ ನಡೆಸಲು ಅನುಮತಿ ನೀಡುವ ಮೂಲಕ ಪ್ರವಾಸೋದ್ಯಮ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಕಾವೇರಿ ರಿವರ್ ರ್‍ಯಾಫ್ಟಿಂಗ್‌ ಅಸೋಸಿಯೇಷನ್‌ ಅಧ್ಯಕ್ಷ ಸಿ.ಎಲ್.ವಿಶ್ವ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT