ಬುಧವಾರ, ನವೆಂಬರ್ 13, 2019
28 °C
ದಕ್ಷಿಣ ರಾಜ್ಯಗಳ ಬುಡಕಟ್ಟು ಜನರೊಂದಿಗೆ ಪ್ರಾದೇಶಿಕ ಸಂವಾದ

‘ಬುಡಕಟ್ಟು ಜನರಿಗೆ ಸನಿಹದಲ್ಲೇ ಪುನರ್ವಸತಿ’

Published:
Updated:

ಮಡಿಕೇರಿ: ‘ಬುಡಕಟ್ಟು ಜನಾಂಗದವರನ್ನು ಸ್ಥಳಾಂತರಿಸುವುದು ಅನಿವಾರ್ಯವಾದರೆ ಅವರಿಗೆ ಹತ್ತಿರದಲ್ಲೇ ಪುನರ್ವಸತಿ ಕಲ್ಪಿಸಿದರೆ ಅವರು ತಮ್ಮ ವಿಶಿಷ್ಟ ಗುರುತಿಸುವಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಸಿ.ಜಿ.ಕುಶಾಲಪ್ಪ ಅಭಿಪ್ರಾಯಪಟ್ಟರು.

ರಾಜ್ಯ ಅರಣ್ಯ ಬುಡಕಟ್ಟು ವಿದ್ಯಾರ್ಥಿ ಯುವ ಸಂಘಟನೆ ಸಹಯೋಗದಲ್ಲಿ ಟಾಟಾ ಸ್ಟೀಲ್ಸ್‌ನ ಸಿಎಸ್‍ಆರ್ ವಿಭಾಗ ಅರಣ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಾದೇಶಿಕ ಮಟ್ಟದ ಬುಡಕಟ್ಟು ಸಂವಾದದಲ್ಲಿ ಅವರು ಮಾತನಾಡಿದರು.

ಟಾಟಾ ಸ್ಟೀಲ್‍ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಸ್ಥ ಸೌರವ್ ರಾಯ್ ಮಾತನಾಡಿ, ‘ಬುಡಕಟ್ಟು ಜನಾಂಗ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು; ಈ ಸಂವಾದ ಅದಕ್ಕೆ ಸಹಕಾರಿ. ದೇಶದಾದ್ಯಂತ ಬುಡಕಟ್ಟು ಜನಾಂಗದವರ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳುವುದೇ ಈ ಸಂವಾದದ ಉದ್ದೇಶ’ ಎಂದು ಹೇಳಿದರು.

ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಕರ್ನಾಟಕದ 19 ಬುಡಕಟ್ಟು ಜನಾಂಗಗಳ 78 ಪ್ರತಿನಿಧಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಮೊದಲ ದಿನ ಬುಡಕಟ್ಟು ಜನಾಂಗಗಳ ಗುರುತಿಸುವಿಕೆ ಸಮಸ್ಯೆ, ನಿರುದ್ಯೋಗ ಮತ್ತು ಆರೋಗ್ಯ ವಿಷಯಗಳ ಬಗ್ಗೆ ಗುಂಪು ಚರ್ಚೆ ನಡೆಯಿತು. ಎರಡನೇ ದಿನದ ಸಂವಾದದಲ್ಲಿ ಭಾರತದ ಮೊಟ್ಟಮೊದಲ ಬುಡಕಟ್ಟು ಮಹಿಳಾ ಪೈಲಟ್ ಎನಿಸಿದ ಅಜ್ಮೀರಾ ಬಾಬಿ ಪಾಲ್ಗೊಂಡಿದ್ದರು.

ಟಾಟಾ ಸಮೂಹದ ಕಂಪನಿಗಳ ಸಹಭಾಗಿತ್ವದ ಬಗ್ಗೆ ಮಡಿಕೇರಿ ತಾಜ್ರೆ ಸಾರ್ಟ್‌ ಮತ್ತು ಸ್ಪಾದ ಮುಖ್ಯಸ್ಥ ಜೋಸ್ ಅವರು ವಿಶೇಷ ಸಂವಾದ ನಡೆಸಿಕೊಟ್ಟರು.

ಬುಡಕಟ್ಟು ಜನಾಂಗಗಳ ಖಾದ್ಯ ವೈವಿಧ್ಯವನ್ನು ವಿಸ್ತೃತವಾಗಿ ಅಧ್ಯಯನ ಮಾಡಿದ ಬಳಿಕ ಪರಿಚಯಿಸಿದ ವಿಶಿಷ್ಟ ಊಟದ ಸ್ವಾದದ ಅನುಭವಗಳನ್ನು ಹಂಚಿಕೊಂಡರು. ಕುಡಿಯ ಸಮುದಾಯದ ಗೋಪಮ್ಮ, ಬುಡಕಟ್ಟು ಸಮುದಾಯಗಳ ನಡುವೆಯೇ ಸಂಪರ್ಕ ಬೆಸೆಯುತ್ತಿರುವ ತಮ್ಮ ಸಾಧನೆಯ ವಿವರ ಬಿಚ್ಚಿಟ್ಟರು.

ಮುಂದಿನ ಸಂವಾದಗಳು ಒಡಿಶಾದ ಕಾಳಹಂದಿ, ಅರುಣಾಚಲ ಪ್ರದೇಶದ ಇಟಾನಗರ, ಮಧ್ಯಪ್ರದೇಶದ ಜಬೂವಾ, ಮಹಾರಾಷ್ಟ್ರಗಳಲ್ಲಿ ನಡೆಯಲಿವೆ. 

ಪ್ರತಿಕ್ರಿಯಿಸಿ (+)