ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಆರೋಗ್ಯ ಕಾರ್ಯಕರ್ತ ಸೇರಿ ಇಬ್ಬರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಮಡಿಕೇರಿ ನಗರದ ಅಜಾದ್ ನಗರದ ನಿವಾಸಿ, 54 ವರ್ಷದ ಮಹಿಳೆ ಸಹ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಜ್ವರವಿದ್ದು ನಗರದ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಬುಧವಾರ ರಾತ್ರಿ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡ ಕಾರಣ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಚಿಕಿತ್ಸೆ ನೀಡಿದರೂ ಸಹ ಫಲಕಾರಿಯಾಗದೆ ಬುಧವಾರ ರಾತ್ರಿಯೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.
ಅವರ ಗಂಟಲು ದ್ರವದ ಮಾದರಿಯನ್ನು ‘ಆಂಟಿಜೆನ್ ಕಿಟ್’ ಮೂಲಕ ಪರೀಕ್ಷಿಸಲಾಗಿತ್ತು. ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಗ್ರಾಮದ ನಿವಾಸಿ, ಸಮುದಾಯ ಆರೋಗ್ಯ ಕೇಂದ್ರ, ಪಾಲಿಬೆಟ್ಟದಲ್ಲಿ ಆರೋಗ್ಯ ಕಾರ್ಯಕರ್ತರಾಗಿ (ಗ್ರೂಪ್ ‘ಡಿ’ ನೌಕರರು) ಕಾರ್ಯ ನಿರ್ವಹಿಸುತ್ತಿದ್ದ 45 ವರ್ಷದ ಪುರುಷ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಅವರಿಗೆ ಬೇರೆ ಕಾಯಿಲೆಯೂ ಇತ್ತು. ಅದಕ್ಕೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 19ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
21ರಂದು ಇವರಿಗೆ ನೆಗೆಟಿವ್ ವರದಿ ಬಂದಿತ್ತು. ಹೀಗಾಗಿ, ಅಶ್ವಿನಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮಧುಮೇಹ ಮತ್ತು Sytemic Lupus Erythematosus ಕಾಯಿಲೆಯಿಂದ ಬಳಲುತ್ತಿದ್ದರಿಂದ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣಕ್ಕೆ ಅವರನ್ನು ಮತ್ತೆ ಕೋವಿಡ್ ಐಸಿಯುಗೆ ದಾಖಲು ಮಾಡಲಾಗಿತ್ತು. ಅವರೂ ಬುಧವಾರ ರಾತ್ರಿಯೇ ಮೃತಪಟ್ಟಿದ್ದಾರೆ. ಬಳಿಕ ಮತ್ತೊಮ್ಮೆ ಅವರ ಗಂಟಲು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸಂಭವಿಸಿದ 9 ಮೃತ ಪ್ರಕರಣಗಳ ಪೈಕಿ 2 ಪ್ರಕರಣಗಳು ಕೋವಿಡ್ ಆಸ್ಪತ್ರೆಯ ಚಿಕಿತ್ಸಾ ನಿರ್ಧಾರ ಪ್ರದೇಶಕ್ಕೆ ಬಂದ ಒಂದರಿಂದ ಎರಡು ಗಂಟೆ ಅವಧಿಯಲ್ಲಿ ಸಂಭವಿಸಿದೆ. 1 ಪ್ರಕರಣವು ಕೋವಿಡ್ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಮೃತಪಟ್ಟ ಪ್ರಕರಣವಾಗಿದೆ. ಮೃತಪಟ್ಟ ಎಲ್ಲಾ ಪ್ರಕರಣಗಳಲ್ಲೂ ಉಸಿರಾಟದ ತೊಂದರೆಯಿದ್ದು, ಕೋವಿಡ್ ಆಸ್ಪತ್ರೆಗೆ ತಡವಾಗಿ ಬಂದ ಪ್ರಕರಣಗಳಾಗಿವೆ. ಉಸಿರಾಟದ ಸಮಸ್ಯೆ ಇರುವವರು ತಕ್ಷಣವೇ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
25 ಮಂದಿಗೆ ಸೋಂಕು:
ಜಿಲ್ಲೆಯಲ್ಲಿ ಗುರುವಾರ 25 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಹೆಬ್ಬಾಲೆ ಹುಲುಸೆಯ 45 ವರ್ಷದ ಮಹಿಳೆ, 52 ವರ್ಷದ ಪುರುಷ, 33 ವರ್ಷದ ಪುರುಷ, 23 ವರ್ಷದ ಮಹಿಳೆ, 2 ವರ್ಷದ ಬಾಲಕಿ, 27 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಮಡಿಕೇರಿಯ ನಾಪೋಕ್ಲು ಎಮ್ಮೆಮಾಡುವಿನಲ್ಲಿ 52 ವರ್ಷದ ಪುರುಷ, ಸಿದ್ದಾಪುರದ 64 ವರ್ಷದ ಮಹಿಳೆ, ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿಯ 33 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ ಎ.ಬಿ ಸ್ಕೂಲ್ ಬಳಿಯ 54 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ಮೊಗರಗಳ್ಳಿಯ 37 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕ, ವಿರಾಜಪೇಟೆಯ ಕಾಕೋಟು ಪರಂಬುವಿನ 14 ವರ್ಷದ ಬಾಲಕಿ, ಮಡಿಕೇರಿಯ ಮೇಕೇರಿ ಬಳಿಯ ಸುಭಾಷ್ ನಗರದ 31 ವರ್ಷದ ಪುರುಷ, ಪಾಲಿಬೆಟ್ಟ ಆರೋಗ್ಯ ವಸತಿಗೃಹದ 45 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತ, ಸುಂಟಿಕೊಪ್ಪದ ಕಾನ್‌ಬೈಲ್ ಗ್ರಾಮ ಅಂಚೆಯ ಮಂಜಿಕೆರೆಯ 50 ವರ್ಷದ ಪುರುಷ, ಕುಶಾಲನಗರ ಬಳಿಯ ಬಸವನಹಳ್ಳಿಯ 51 ವರ್ಷದ ಪುರುಷ, ಮಡಿಕೇರಿಯ ಚೆಂಗಪ್ಪ ಪಾಳಂಗಲ ಕರದ್ ಪೋಸ್ಟ್‌ನ 60 ವರ್ಷದ ಮಹಿಳೆ ಮತ್ತು 34 ವರ್ಷದ ಪುರುಷ, ಮಡಿಕೇರಿಯ ಚೆಯ್ಯಂಡಾಣೆ ಅಂಚೆಯ ಮರಂದೋಡು ಗ್ರಾಮದ 9ನೇ ಮೈಲಿನ 40 ವರ್ಷದ ಮಹಿಳೆಗೂ ಸೋಂಕು ದೃಢವಾಗಿದೆ.
ಚೆಯ್ಯಂಡಾಣೆ ಅಂಚೆಯ ಮರಂದೋಡು ಗ್ರಾಮದ 56 ವರ್ಷದ ಪುರುಷ, ಮಡಿಕೇರಿ ಎಫ್‌ಎಂಸಿ ಬಳಿಯ 32 ವರ್ಷದ ಮಹಿಳೆ, ಗದ್ದಿಗೆ ಸಮೀಪದ ತ್ಯಾಗರಾಜ ಕಾಲೊನಿಯ 68 ವರ್ಷದ ಮಹಿಳೆ, ಮಡಿಕೇರಿ ಮಹದೇವ ಪೇಟೆಯ 25 ವರ್ಷದ ಮಹಿಳೆಗೆ ಕೋವಿಡ್-19 ದೃಢಪಟ್ಟಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.