ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯರ ಹಾಕಿ ತಂಡಕ್ಕೆ ಜಿಲ್ಲೆಯ ಇಬ್ಬರು

ವಚನ್‌ ಅಶೋಕ್‌, ಬಿಪಿನ್‌ ರವಿಗೆ ಹಾಕಿ ಇಂಡಿಯಾ ಸ್ಥಾನ
Published 6 ಮೇ 2024, 5:01 IST
Last Updated 6 ಮೇ 2024, 5:01 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮೇ 20 ರಿಂದ ಹತ್ತು ದಿನಗಳು ಯುರೋಪ್‌ ಪ್ರವಾಸಕ್ಕೆ ತೆರಳಲಿರುವ ಭಾರತ ಕಿರಿಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ತಂಡದಲ್ಲಿ ಜಿಲ್ಲೆಯ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

ಸೋಮವಾರಪೇಟೆಯ ಹಾಕಿ ಆಟಗಾರ ವಚನ್‌ ಅಶೋಕ್‌ ಮತ್ತು ಪೊನ್ನಂಪೇಟೆಯ ಬಿಪಿನ್‌ ರವಿ ಆಯ್ಕೆಯಾಗಿದ್ದಾರೆ. ಇಬ್ಬರೂ ಆಟಗಾರರು ಪೊನ್ನಂಪೇಟೆಯ ಕ್ರೀಡಾಶಾಲೆಯಲ್ಲಿ 10ನೇ ತರಗತಿ ಮುಗಿಸಿ, ಬೆಂಗಳೂರಿನಲ್ಲಕಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆಯುತ್ತಿದ್ದು, ಒಟ್ಟಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸೋಮವಾರಪೇಟೆಯ ಡಾಲ್ಫಿನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಅಶೋಕ್‌ ಮತ್ತು ಸುಜಿನಿ ದಂಪತಿ ಪುತ್ರ  ವಚನ್‌, ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಒಲವು ಮೂಡಿಸಿಕೊಂಡು 8ನೇ ತರಗತಿಗೆ ಪೊನ್ನಂಪೇಟೆಯ ಕ್ರೀಡಾಶಾಲೆಗೆ ಆಯ್ಕೆಯಾಗಿದ್ದರು.   ಪಿಯುಸಿಗೆ ಬೆಂಗಳೂರಿನ ಡಿವೈಎಸ್‌ಎಸ್‌ ಕ್ರೀಡಾ ಹಾಸ್ಟೆಲ್‌ಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಬೆಂಗಳೂರಿನ ಮಹಾವೀರ್‌ ಜೈನ್‌ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ವಚನ್‌, ಭಾರತ ತಂಡದ ಭವಿಷ್ಯದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಚನ್‌  ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಒಎಲ್‌ವಿ ಕಾನ್ವೆಂಟ್‌ನಲ್ಲಿ ಪಡೆದಿದ್ದರು.

2019ರಲ್ಲಿ ಛತ್ತೀಸ್‌ಗಡ್‌ನ ಬಿಲಾಸ್‌ಪುರದಲ್ಲಿ ಜರುಗಿದ ಸಬ್‌ ಜೂನಿಯರ್‌ ರಾಷ್ಟ್ರೀಯ ಪಂದ್ಯಾವಳಿ, 2022ರಲ್ಲಿ ಚೆನ್ನೈನ ಕೋವಿಲ್‌ಪಟ್ಟಿಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಒಡಿಶಾದ ರೂರ್ಕೆಲಾದಲ್ಲಿ ಕಿರಿಯರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ವಚನ್‌ ಮತ್ತು ಬಿಪಿನ್‌ ಇಬ್ಬರೂ ಪಾಲ್ಗೊಂಡಿದ್ದರು.

ಪೊನ್ನಂಪೇಟೆಯ ಬಿಲ್ಲವರ ರವಿ ಮತ್ತು ಸುನಂದಾ ದಂಪತಿ  ಪುತ್ರ  ಬಿಪಿನ್‌ ಕಳೆದ ವರ್ಷವೂ ಕಿರಿಯರ ತಂಡದ ಕ್ಯಾಂಪ್‌ನಲ್ಲಿ ಸ್ಥಾನ ಪಡೆದಿದ್ದರು.  ಈ ಬಾರಿ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಭವಿಷ್ಯದಲ್ಲಿ ಉತ್ತಮ ಆಟಗಾರರಾಗಿ ರೂಪುಗೊಳ್ಳುವ ಭರವಸೆ ಮೂಡಿಸಿದ್ದಾರೆ. ಪೊನ್ನಂಪೇಟೆಯ ಕ್ರೀಡಾಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಬಿಪಿನ್‌ ಮತ್ತು ವಚನ್‌ ಒಂದೇ ಬ್ಯಾಚ್‌ನಲ್ಲಿ ಕ್ರೀಡಾಶಾಲೆಗೆ ಆಯ್ಕೆಯಾದವರು. ಬಿಪಿನ್‌ ಎರಡು ಸಬ್‌ಜೂನಿಯರ್‌, ಎರಡು ಜೂನಿಯರ್‌ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿ, ಒಂದು ವರ್ಷದ ಹಿಂದೆಯೇ ಹಾಕಿ ಕ್ಯಾಂಪ್‌ಗೆ ಆಯ್ಕೆಯಾಗಿದ್ದರು.

‘ಪುತ್ರ ವಚನ್‌ ಹಾಗೂ ಪೊನ್ನಂಪೇಟೆಯ ರವಿ ಅವರ ಪುತ್ರ ಬಿಪಿನ್‌ ಇಬ್ಬರೂ ಆಯ್ಕೆಯಾಗಿರುವುದು ಸಂತಸ ತಂದಿದೆ. ನಾನೂ ಕೂಡ ಹಾಕಿ ಕ್ರೀಡೆಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂದು ಕನಸು ಕಂಡಿದ್ದೆ. ಆದರೆ, ನನ್ನ ಕನಸನ್ನು ಮಗ ಈಡೇರಿಸುವ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾನೆ. ಮುಂದಿನ ದಿನಗಳಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಉತ್ತಮ ಹಾಕಿ ಆಟಗಾರನಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೇ, ಜಿಲ್ಲೆಯ ಎಲ್ಲ ಹಾಕಿ ಆಟಗಾರರ ಹಾಗೂ ಹಾಕಿ ಪ್ರೇಮಿಗಳ ಆಶೀರ್ವಾದ ಇಬ್ಬರೂ ಕ್ರೀಡಾಪಟುಗಳ ಮೇಲಿರಲಿ’ ಎಂದು ಡಾಲ್ಫಿನ್‌ ಹಾಕಿ ಕ್ಲಬ್‌ ಅಧ್ಯಕ್ಷ ಹಾಗೂ ವಚನ್‌ ತಂದೆ ಅಶೋಕ್‌ ಮತ್ತು ತಾಯಿ ಸುಜಿನಿ ಸಂತಸ ವ್ಯಕ್ತಪಡಿಸಿದರು.

ಡಿಫೆಂಡರ್‌ ರೋಹಿತ್‌ ನೇತೃತ್ವದಲ್ಲಿ 20 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಉಪನಾಯಕನಾಗಿ ಶೃದ್ಧಾನಂದ್‌ ತಿವಾರಿ ಆಯ್ಕೆಯಾಗಿದ್ದಾರೆ. ಮೇ 20ರಂದು ಪ್ರಥಮ ಪಂದ್ಯವನ್ನು ಬೆಲ್ಜಿಯಂನೊಂದಿಗೆ ಆರಂಭಿಸಲಿರುವ ಭಾರತ ತಂಡ,  22ರಂದು ನೆದರ್‌ಲ್ಯಾಂಡ್ಸ್‌ನ ಕ್ಲಬ್‌ ತಂಡದೊಂದಿಗೆ, 28 ಮತ್ತು 29ರಂದು ಜರ್ಮನಿ ತಂಡದೊಂದಿಗೆ ಆಡಲಿದೆ.

ಭಾರತ ಕಿರಿಯರ ಹಾಕಿ ತಂಡಕ್ಕೆ ಆಯ್ಕೆಯಾದ ಬಿಪಿನ್‌ ಮತ್ತು ಪೋಷಕರು
ಭಾರತ ಕಿರಿಯರ ಹಾಕಿ ತಂಡಕ್ಕೆ ಆಯ್ಕೆಯಾದ ಬಿಪಿನ್‌ ಮತ್ತು ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT