ಗುರುವಾರ , ಡಿಸೆಂಬರ್ 8, 2022
18 °C
ವಿರಾಜಪೇಟೆ ಪುರಸಭೆ ತುರ್ತುಸಭೆಯಲ್ಲಿ ತೀರ್ಮಾನ

ವಿರಾಜಪೇಟೆ: ವರ್ತಕರ ಮೇಲೆ ಹಲ್ಲೆ ಸಿಬ್ಬಂದಿ ವಜಾಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಪಟ್ಟಣದ ಅಂಗಡಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿಬ್ಬಂದಿ ಯನ್ನು ವಜಾಗೊಳಿಸಲು ಪುರಸಭೆಯ ತುರ್ತುಸಭೆ ತೀರ್ಮಾನಿಸಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪದ ಅಂಗಡಿಯ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿತ್ತು. ಈ ಕುರಿತು ಪುರಸಭೆಯ ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುರ್ತುಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಸದಸ್ಯೆ ದೇಚಮ್ಮ, ‘ಈ ಘಟನೆಯಿಂದ ಪುರಸಭೆಯ ಎಲ್ಲಾ ಸದಸ್ಯರಿಗೆ ಅವಮಾನವಾಗಿದೆ. ಆ ಸಿಬ್ಬಂದಿ ಈ ರೀತಿಯ ವರ್ತನೆ ತೋರುತ್ತಿರುವುದು ಹೊಸದಲ್ಲ. ಹೀಗಿರುವಾಗ ಪುರಸಭೆಯ ಮುಖ್ಯಾಧಿಕಾರಿಗಳು ಆತನಿಗೆ ಉದ್ದಿಮೆ ಪರವಾನಗಿ ಪರಿಶೀಲನೆಯ ಜವಾಬ್ದಾರಿ ನೀಡಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಪಿ.ರಂಜಿ ಪೂಣಚ್ಚ ಮಾತನಾಡಿ, ‘ಪುರಸಭೆಯ ಸಿಬ್ಬಂದಿ ವರ್ತಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಘಟನೆ ಹಲವು ಬಾರಿ ಆತನಿಂದ ನಡೆದಿದೆ. ಆದ್ದರಿಂದ ಆತನನ್ನು ವಜಾಗೊಳಿಸುವುದೇ ಸೂಕ್ತ’ ಎಂದರು. ಇದಕ್ಕೆ ಸದಸ್ಯ ಮಹ್ಮದ್ ರಾಫಿ ಸಹ ದನಿಗೂಡಿಸಿದರು.

ಹಲ್ಲೆ ನಡೆದ ಘಟನೆ ಸಂದರ್ಭ ಸ್ಥಳದಲ್ಲಿದ್ದ ಪುರಸಭೆಯ ಸದಸ್ಯ ಪೃಥ್ವಿನಾಥ್ ಮಾತನಾಡಿ, ‘ಘಟನೆಯಲ್ಲಿ ನನ್ನ ತಪ್ಪಿಲ್ಲ. ವರ್ತಕ ಪರವಾನಗಿ ಇಲ್ಲದೆ ಅಂಗಡಿ ನಡೆಸುತ್ತಿದ್ದ ಹಾಗೂ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಹಲವು ಬಾರಿ ಎಚ್ಚರಿಸಲಾಗಿತ್ತು. ಆದ್ದರಿಂದ ವರ್ತಕನನ್ನು ತರಾಟೆಗೆ ತೆಗೆದು ಕೊಳ್ಳಲಾಗಿತ್ತು’ ಎಂದು ಘಟನೆಯ ಕುರಿತು ಸಮಜಾಯಿಷಿ ನೀಡಿದರು.

ಸದಸ್ಯರಾದ ಮತ್ತೀನ್, ಕೆ.ಸಚಿನ್, ರಾಜೇಶ್, ಆಶಾ ಸುಬ್ಬಯ್ಯ, ಸುನೀತಾ, ರಜನಿಕಾಂತ್ ಮಾತನಾಡಿದರು.

ಪುರಸಭೆಯ ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾತನಾಡಿ, ‘ಸಭೆಯ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷೆ ಸುಶ್ಮಿತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಎಂಜಿನಿಯರ್ ಹೇಮಕುಮಾರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು