ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಹಾರಂಗಿಯಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ

Published 10 ಸೆಪ್ಟೆಂಬರ್ 2023, 6:14 IST
Last Updated 10 ಸೆಪ್ಟೆಂಬರ್ 2023, 6:14 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಜಲಾಶಯ ಎನಿಸಿದ ಹಾರಂಗಿಯಲ್ಲಿ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಮಳೆಗಾಲ ಮುಗಿಯುವ ಮುನ್ನವೇ ನೀರಿನ ಮಟ್ಟ ಕುಸಿಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತಿತ್ತು. ಮಳೆಗಾಲದಲ್ಲಿ ಜಲಾಶಯ ತುಂಬಿ ನಿರಂತರವಾಗಿ ನೀರನ್ನು ನದಿಗೆ ಹಾಗೂ ಕಾಲುವೆಗೆ ಬಿಡಲಾಗುತ್ತಿತ್ತು. ಇದರಿಂದ ನದಿ ಹಾಗೂ ಕಾಲುವೆ ಹರಿವಿನ ಇಕ್ಕೆಲಗಳ ಗ್ರಾಮಗಳ ಗದ್ದೆಗಳು ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ, ಈಗ ನದಿಗೆ ನೀರು ಬಿಡುವುದು ಇರಲಿ, ನಾಲೆಗಳಿಗೆ ಸಂಪೂರ್ಣ ನೀರು ಬಿಡಲಾಗದ ಸ್ಥಿತಿ ಉದ್ಭವಿಸಿದೆ.

2,859 ಗರಿಷ್ಠ ಅಡಿಯ ಈ ಜಲಾಶಯವು ಜುಲೈ ತಿಂಗಳಲ್ಲಿ ಸುರಿದ ಬಿರುಸಿನ ಮಳೆಗೆ ತುಂಬಿತ್ತು. ಆದರೆ, ನಂತರ ಮಳೆ ಬಿರುಸು ಪಡೆಯದೇ ಇದ್ದುದ್ದರಿಂದ ಒಳ ಅರಿವು 10 ಸಾವಿರ ಕ್ಯೂಸೆಕ್‌ನ್ನು ಮುಟ್ಟಲೇ ಇಲ್ಲ. ಪ್ರಸಕ್ತ ಸಾಲಿನಲ್ಲಿ ಒಮ್ಮೆ ಮಾತ್ರ ಗರಿಷ್ಠ ಮಟ್ಟ ತಲುಪಿದ ಜಲಾಶಯದ ಮಟ್ಟ ನಂತರದ ದಿನಗಳಲ್ಲಿ ನಿರಂತರವಾಗಿ ಕಡಿಮೆಯಾಗುತ್ತಿದೆ.

ಮಳೆಯ ತೀವ್ರತರವಾದ ಕೊರತೆಯಿಂದ ಹಾರಂಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿಗಾಗಿ ‘ಕಟ್ಟು ನೀರು ಪದ್ಧತಿ’ಯಲ್ಲಿ (ತಿಂಗಳಲ್ಲಿ 15 ದಿನ ಹರಿಸಿ, 15 ದಿನ ನಿಲ್ಲಿಸುವುದು) ಕಾಲುವೆಗಳಿಗೆ ನೀರು ಹರಿಸಲು ಆಗಸ್ಟ್ 13ರಂದು ನಿರ್ಧರಿಸಲಾಯಿತು. ಆ ನಂತರ ಇದೇ ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ.

ಹಾರಂಗಿ ಜಲಾಶಯದಿಂದ ಕೊಡಗು ಜಿಲ್ಲೆಯ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕುಗಳಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಇದೆ. ಮಳೆಯ ಕೊರತೆಯಿಂದ ಆಗಸ್ಟ್ ಅಂತ್ಯದ ವೇಳೆಗೂ ಇಲ್ಲಿ ಕನಿಷ್ಠ ಒಂದು ಹೆಕ್ಟೇರ್‌ನಷ್ಟೂ ನಾಟಿ ಕಾರ್ಯ ಆಗಿರಲಿಲ್ಲ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಒಂದೆಡೆ ಕಾಲುವೆಗಳಿಗೆ ನೀರು ಹರಿಸುತ್ತಿದ್ದರೆ ಮತ್ತೊಂದೆಡೆ ಒಳ ಅರಿವಿನ ಪ್ರಮಾಣ ಕಡಿಮೆಯಾಗುತ್ತಾ ಹೋಯಿತು. ಹಲವು ದಿನಗಳ ಕಾಲ ಕೇವಲ 200ರಿಂದ 400 ಕ್ಯೂಸೆಕ್‌ಗೆ ನೀರಿನ ಹರಿವು ಕಡಿಮೆಯಾಯಿತು. ಇದರ ಪರಿಣಾಮವಾಗಿ ನೀರಿನ ಮಟ್ಟ 2,855ಕ್ಕೂ ಕುಸಿದಿತ್ತು.

ಒಂದೆರಡು ದಿನಗಳಿಂದ ನದಿಪಾತ್ರದಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣ ತುಸು ಏರಿಕೆಯಾಗಿದ್ದು, ನೀರಿನ ಮಟ್ಟ 2,856ಕ್ಕೆ ತಲುಪಿದೆ.

ಹಾರಂಗಿ ಜಲಾಶಯದಿಂದ ಸೋಮವಾರಪೇಟೆ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರು ಸೇರಿದಂತೆ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು ಹಾಗೂ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲ್ಲೂಕಿನ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ಅಚ್ಚುಕಟ್ಟು ವ್ಯಾಪ್ತಿಯ ಕೃಷಿ ಚಟುವಟಿಕೆಗಳು ಜೂನ್‌ನಲ್ಲಿ ಆರಂಭಗೊಂಡು ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ನಾಲೆಗಳ ಮೂಲಕ ನೀರು ಹರಿಸಬೇಕಿತ್ತು. ಆದರೆ, ಮುಂಗಾರಿನ ಕೊರತೆಯಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿದೆ.

ಈ ಮೊದಲೆಲ್ಲ ನಾಲೆಗಳಲ್ಲಿ ನಿರಂತರವಾಗಿ ನೀರು ಹರಿಯುತ್ತಿತ್ತು. ಇದರಿಂದ ಸಹಜವಾಗಿಯೇ ಅಂತರ್ಜಲದ ಏರಿಕೆಯಾಗುತ್ತಿತ್ತು. ಸಮೃದ್ಧವಾದ ಮೇವೂ ಬೆಳೆಯುತ್ತಿತ್ತು. ಆದರೆ, ಈಗ ನೀರಿನ ಕೊರತೆಯಿಂದ ಬೇಸಿಗೆಗೂ ಮುನ್ನವೇ ಮೇವಿನ ಸಮಸ್ಯೆ ಕಾಡುವ ಭೀತಿ ಮೂಡಿದೆ. ಜತೆಗೆ, ಅಂತರ್ಜಲದ ಮಟ್ಟ ಕುಸಿಯುವ ಆತಂಕವೂ ಎದುರಾಗಿದೆ.

ಕೊಡಗಿನ ನಂಜರಾಯಪಟ್ಟಣ ಸಮೀಪದ ರಂಗಸಮುದ್ರ ಬಳಿ ಇರುವ ‘ನಯಾ‌ಗರ ಫಾಲ್ಸ್’ ಎಂದೇ ಖ್ಯಾತಿ ಪಡೆದಿರುವ ಚಿಕ್ಲಿಹೊಳೆ ಜಲಾಶಯ ಜುಲೈ 24ರಂದು ಭರ್ತಿಯಾಗಿ, ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಜಲಧಾರೆ ಧುಮ್ಮಿಕ್ಕುತ್ತಿತ್ತು. ಆದರೆ, ಮಳೆ ಕೊರತೆಯಿಂದ ಧುಮ್ಮಿಕ್ಕುವ ಈ ಜಲಧಾರೆ ಕಾಣದಾಯಿತು. ಇದರಿಂದ ಈ ವ್ಯಾಪ್ತಿಯಲ್ಲಿರುವ 400 ಹೆಕ್ಟೇರ್‌ನಷ್ಟು ಪ್ರದೇಶದಲ್ಲೂ ಬಿತ್ತನೆ ನಡೆದಿಲ್ಲ.

ಕೂಡಿಗೆ ಬಳಿ ನದಿ ಹರಿವು ಶನಿವಾರ ಕಂಡು ಬಂದಿದ್ದು ಹೀಗೆ
ಕೂಡಿಗೆ ಬಳಿ ನದಿ ಹರಿವು ಶನಿವಾರ ಕಂಡು ಬಂದಿದ್ದು ಹೀಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT