ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಬೆಟ್ಟಶ್ರೇಣಿಗಳಲ್ಲಿ ಜಲಪಾತಗಳ ನರ್ತನ

ಸುರಿದ ಮಳೆಗೆ ಭೋರ್ಗರೆಯುತ್ತಿರುವ ನಾಲ್ಕುನಾಡಿನ ಜಲಧಾರೆಗಳು
Published 30 ಜೂನ್ 2024, 7:29 IST
Last Updated 30 ಜೂನ್ 2024, 7:29 IST
ಅಕ್ಷರ ಗಾತ್ರ

ನಾಪೋಕ್ಲು: ಸುರಿಯುತ್ತಿರುವ ಮಳೆಯಿಂದ ನಾಲ್ಕುನಾಡಿನ ಜಲಪಾತಗಳು ಮೈದುಂಬಿಕೊಂಡು ಅಪೂರ್ವ ಸೌಂದರ್ಯವನ್ನು ಸೂಸುತ್ತಿವೆ.

ನಾಲ್ಕುನಾಡಿನ ಯವಕಪಾಡಿ, ಕಕ್ಕಬ್ಬೆ, ಪೇರೂರು ಗ್ರಾಮಗಳ ಬೆಟ್ಟಶ್ರೇಣಿಗಳಲ್ಲಿ ಇದೀಗ ಜಲಪಾತಗಳ ನರ್ತನ ಆರಂಭವಾಗಿದೆ. ಕೆಲವು ಪ್ರಮುಖ ಜಲಪಾತಗಳು ಬೆಳ್ನೊರೆಯಲ್ಲಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಅನಾಮಧೇಯ ಜಲಪಾತಗಳು ಕಾನನದ ನಡುವೆ ತಮ್ಮದೇ ಆದ ವಯ್ಯಾರ ಬೀರುತ್ತಾ ಧುಮುಕುತ್ತಿವೆ.

ಮಳೆಯ ಬಿರುಸಿನ ನಡುವೆ ಬೆಟ್ಟಶ್ರೇಣಿಗಳಲ್ಲಿ ಹರಿದು ಬರುತ್ತಿರುವ ಜಲಧಾರೆಗಳು ಇದೀಗ ಮನಸೆಳೆಯುತ್ತಿವೆ. ಶ್ವೇತ ವೈಭವದಿಂದ ಕಂಗೊಳಿಸುವ ಜಲಪಾತಗಳು, ಮೈದುಂಬಿ ಹರಿಯುತ್ತಿರುವ ಝರಿ ತೊರೆಗಳು ವೀಕ್ಷಕರಿಗೆ ಮುದ ನೀಡುತ್ತಿವೆ.

ಸಮೀಪದ ಕಕ್ಕಬ್ಬೆಯ ಮೇದುರ ಜಲಪಾತ, ಚೆಯ್ಯಂಡಾಣೆ ಬಳಿಯ ಚೇಲಾವರ ಜಲಪಾತ, ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ, ಪೇರೂರು ಗ್ರಾಮದ ದೇವರಗುಂಡಿ ಜಲಪಾತ, ತಡಿಯಂಡಮೋಳ್ ಬೆಟ್ಟ ಶ್ರೇಣಿಯ ನೀಲಕಂಡಿಜಲಪಾತ, ಯವಕಪಾಡಿ ಗ್ರಾಮದ ಚಿಂಗಾರ ಜಲಪಾತಗಳು ವೀಕ್ಷಣೆಗೆ ಪ್ರಮುಖವಾದ ಜಲಪಾತಗಳು. ಇವುಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಹಲವು ಅನಾಮಧೇಯ ಜಲಪಾತಗಳು ಇದೀಗ ಮೈದುಂಬಿ ಧುಮುಕುತ್ತಿವೆ. ಬೆಟ್ಟಶ್ರೇಣಿಗಳಲ್ಲಿ, ಗುಡ್ಡಗಳಲ್ಲಿ, ಇಳಿಜಾರು ಸ್ಥಳಗಳಲ್ಲಿ ಹರಿದು ತೋಡು, ನದಿಗಳನ್ನು ಸೇರುತ್ತಿವೆ.

ಭೋರ್ಗರೆವ ಮಳೆಗೆ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ. ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ.

ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ. ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಉಗಮಿಸಿದರೆ ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನನದಿಗಳು ಹರಿದುಬರುತ್ತವೆ. ಈ ಎರಡು ನದಿಗಳು ವಿರಾಜಪೇಟೆ ತಾಲೂಕಿನ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ. ಹಾಗೆಯೇ, ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.

ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಚೇಲಾವರದ ಪ್ರಮುಖ ಜಲಪಾತ ಏಮೆಪಾರೆ ಜಲಪಾತ. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನಮನೋಹರ. ಮಳೆಗಾಲದಲ್ಲಿ ತಮ್ಮ ವೈಭವವನ್ನು ಮೆರೆಯುವ ಜಲಪಾತಗಳಲ್ಲಿ ಚೇಲಾವರ ಜಲಪಾತಗಳಿಗೆ ವಿಶೇಷ ಆಕರ್ಷಣೆ. ದಕ್ಷಿಣಕೊಡಗಿನ ವಿರಾಜಪೇಟೆಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ಸೊಬಗು ಸವಿಯಬಹುದು. ಸಮೀಪದಲ್ಲಿಯೇ ಬಲಿಯಟ್ರ ಜಲಪಾತವಿದೆ.

ಕಕ್ಕಬ್ಬೆ ಬಳಿಯ ಮೇದುರ ಜಲಪಾತ ಮತ್ತೊಂದು ಮನಮೋಹಕ ಜಲಧಾರೆ. ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹೆಜ್ಜೆ ಹಾಕತೊಡಗಿದರೆ ಕಪ್ಪು ಬಂಡೆಯ ಮೇಲಿಂದ ಭೋರ್ಗರೆಯುತ್ತಾ ಧುಮುಕುವ ರಮಣೀಯವಾದ ಜಲಪಾತದ ದರ್ಶನವಾಗುತ್ತದೆ. ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ ಈಗ ವೀಕ್ಷಣೆಗೆ ಮನಮೋಹಕ. ಇನ್ನು ಪೇರೂರು ಗ್ರಾಮ ಬೆಟ್ಟಗಳಲ್ಲಿ ಸಾಲು ಸಾಲು ಜಲಧಾರೆಗಳು ಕಾಣಸಿಗುತ್ತವೆ. ಬೆಟ್ಟಗಳಿಂದ ಹರಿದು ಬರುವ ಜಲಧಾರೆ ಅಲ್ಲಲ್ಲಿ ಬಂಡೆಗಳ ಮೇಲೆ ಬೆಳ್ನೊರೆಯಾಗಿ ಧುಮುಕುವ ದೃಶ್ಯ ಕಣ್ಮನ ಸೆಳೆಯುತ್ತದೆ. ಧಾರಾಕಾರ ಮಳೆ ಸುರಿದು ಬಿಡುವು ಕೊಟ್ಟ ದಿನಗಳು ಜಲಪಾತಗಳ, ಝರಿ, ತೊರೆಗಳ ವೀಕ್ಷಣೆಗೆ ಸಕಾಲ.

ಈ ಜಲಧಾರೆಗಳಿಗಿಂತ ಭಿನ್ನವಾಗಿ ಮಡಿಕೇರಿ-ಸಂಪಾಜೆ ಹಾದಿಯ ಎರಡನೇ ಮೊಣ್ಣಂಗೇರಿಯಲ್ಲಿ ಹರಿದು ಬರುವ ಅಬ್ಬಿ ಜಲಧಾರೆ ನೂರಾರು ವೀಕ್ಷಕರ ಮನಸೂರೆಗೊಂಡಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೆಟ್ಟಶ್ರೇಣಿಗಳಿಂದ ಧುಮುಕುವ ಜಲಧಾರೆಗಳು ನಿಸರ್ಗದ ಸೌಂದರ್ಯಕ್ಕೆ ಮೆರುಗು ತುಂಬಿವೆ.

ನಾಪೋಕ್ಲು ಸಮೀಪದ ಪೇರೂರು ಬೆಟ್ಟದಲ್ಲಿ ಬೆಳ್ಳೇರಿ ಹೊಳೆ ಮೈದುಂಬಿ ಹರಿಯುತ್ತಿದೆ
ನಾಪೋಕ್ಲು ಸಮೀಪದ ಪೇರೂರು ಬೆಟ್ಟದಲ್ಲಿ ಬೆಳ್ಳೇರಿ ಹೊಳೆ ಮೈದುಂಬಿ ಹರಿಯುತ್ತಿದೆ
 ನಾಪೋಕ್ಲು ಸಮೀಪದ  ಯವಕಪಾಡಿ ಗ್ರಾಮದ ಚಿಂಗಾರ ಜಲಪಾತದ ಸೊಬಗು.
 ನಾಪೋಕ್ಲು ಸಮೀಪದ  ಯವಕಪಾಡಿ ಗ್ರಾಮದ ಚಿಂಗಾರ ಜಲಪಾತದ ಸೊಬಗು.
ನಿಸರ್ಗದ ಚೆಲುವಿಗೆ ಮೆರುಗು ತುಂಬಿದ ಜಲಪಾತಗಳು ಎಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ ಜಲಧಾರೆಗಳ ಸಂಖ್ಯೆ ನಾಲ್ಕುನಾಡಿನಲ್ಲಿ ಎಲ್ಲಿ ನೋಡಿದರಲ್ಲಿ ನಿಸರ್ಗದ ಚೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT