ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ ಆಸುಪಾಸಿನಲ್ಲಿ ಕಾಡಾನೆ ದಾಳಿ

ಮನೆಯ ಬಾಗಿಲು ಮುರಿದು ಹಾಕಿದ ಒಂಟಿ ಸಲಗ
Published 27 ಮಾರ್ಚ್ 2024, 6:40 IST
Last Updated 27 ಮಾರ್ಚ್ 2024, 6:40 IST
ಅಕ್ಷರ ಗಾತ್ರ

ಶನಿವಾರಸಂತೆ: ಕಾಡಾನೆಯೊಂದು ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮಕ್ಕೆ ಮಂಗಳವಾರ ನುಗ್ಗಿದ್ದು, ಅತಂಕ ಸೃಷ್ಟಿಸಿತು. ಆನೆ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಹಸನಬ್ಬ ಎಂಬುವವರು ಬಿದ್ದು ಗಾಯಗೊಂಡರು.

ಹಸನಬ್ಬ ಅವರು ಮಧ್ಯಾಹ್ನ ಎಂದಿನಂತೆ ತಮ್ಮ ಮನೆಯ ಮುಂದೆ ಕುರ್ಚಿಯಲ್ಲಿ ಕುಳಿತಿದ್ದರು. ರಸ್ತೆಯಲ್ಲಿ ಮನೆಯತ್ತ ಬರುತ್ತಿದ್ದ ಆನೆ ಕಂಡು ಗಾಬರಿಗೊಂಡ ಅವರು ಓಡುವಾಗ ಬಿದ್ದು ಗಾಯಗೊಂಡರು. ಮಕ್ಕಳು ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡರು. ಆನೆಯು ಬಾಗಿಲನ್ನು ಮುರಿದು ಹಾಕಿ, ಅಲ್ಲೇ ಇದ್ದ ಕುರ್ಚಿಯನ್ನು ಮುರಿದು, ಚರಂಡಿಗೆ ಎಸೆದು ಶನಿವಾರಸಂತೆಯತ್ತ ಹೊರಟಿತು. ಇದಕ್ಕೂ ಮುನ್ನ ನೀರುಗುಂದ ಗ್ರಾಮದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಮಂದಣ್ಣ ಎಂಬುವವರ ಬೈಕ್‌ನ್ನು ಜಖಂಗೊಳಿಸಿತ್ತು. ಸಮೀಪದ ಲಕನಿ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೂ ಆನೆ ಕಂಡು ಗಾಬರಿಗೊಂಡು ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಂತರ, ಆನೆಯು ಶನಿವಾರಸಂತೆ ಅರಣ್ಯ ಇಲಾಖೆಯ ಕಚೇರಿಯ ಸಮೀಪದ ತೋಟವೊಂದರಲ್ಲಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿತು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಗೂ ಇತರರು ಆನೆ ಸಂಚಾರ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ವಲಯ ಅರಣ್ಯಾಧಿಕಾರಿ ಗಾನಶ್ರೀ ನೇತೃತ್ವದಲ್ಲಿ ಅರಣ್ಯ ಇಲಾಖೆಯ ತಂಡ ಸ್ಥಳಕ್ಕೆ ಬಂದಿದ್ದು, ಕಾಡಿಗೆ ಓಡಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಡಿಸಿಎಫ್ ಭಾಸ್ಕರ್ ಅವರನ್ನು ಸಂಪರ್ಕಿಸಿದಾಗ ಅವರು, ‘ಹಾಸನದ ಆಲೂರು ಕಡೆಯಿಂದ ಬಹುಶಃ ಒಂಟಿ ಸಲಗ ಬಂದಿರುವ ಸಾಧ್ಯತೆ ಇದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಕೋಪಗೊಂಡಿರುವ ಕಾಡಾನೆ ಅದಾಗೇ ಶಾಂತಗೊಂಡು ವಾಪಸ್ ಕಾಡಿನತ್ತ ತೆರಳುವಂತೆ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT