ಕಾರ್ಮಿಕರ ಕೊರತೆ; ಪರಿಹಾರದ ಪ್ರಯೋಗ

ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಬಹಳಷ್ಟು ಕೃಷಿ ಭೂಮಿಯನ್ನು ಉಳುಮೆ ಮಾಡದೇ ಬಿಟ್ಟವರೇ ಅಧಿಕ. ಆದರೆ, ಇಲ್ಲೊಬ್ಬರು ಅದಕ್ಕೊಂದು ಪರಿಹಾರ ಕಂಡುಕೊಂಡು ಯಶಸ್ವಿಯಾಗಿದ್ದಾರೆ.
ಇಲ್ಲಿಗೆ ಸಮೀಪದ ಕದನೂರು ಗ್ರಾಮ ಪಂಚಾಯಿತಿಯ ಅರಮೇರಿಯ ಉದಿಯಂಡ ಚಂಗಪ್ಪ ಅವರ 3ನೇ ಪುತ್ರ ನಾಚಪ್ಪ ಎಂಬುವವರೇ ಭತ್ತದ ಕೃಷಿಯಲ್ಲಿ ಪ್ರಯೋಗಶೀಲತೆ ಮೆರೆ ದವರು. ಸಾಂಪ್ರದಾಯಿಕ ವಿಧಾನಕ್ಕಿಂತ ಭಿನ್ನವಾದ ಹಾದಿ ತುಳಿದ ಅವರು ಇತರರಿಗೆ ಮಾದರಿಯಾಗಿದ್ದಾರೆ.
ಶಿಕ್ಷಣ ಮುಗಿಸಿ ಫಲಿತಾಂಶ ಬರುವ ಮುನ್ನವೇ ಮಹಾನಗರಗಳನ್ನು ಸೇರುವ ಇಂದಿನ ದಿನಗಳಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ನಾಚಪ್ಪ ಭತ್ತದ ಕೃಷಿ ಕೈಗೊಂಡರು. ಆದರೆ, ಗದ್ದೆಯನ್ನು ಉಳುಮೆ ಮಾಡು ವುದಕ್ಕೆ, ಬಿತ್ತುವುದಕ್ಕೆ, ಪೈರನ್ನು ಕಿತ್ತು ನಾಟಿ ಮಾಡುವುದಕ್ಕೆ ಕಾರ್ಮಿಕರ ಕೊರತೆ ಎದುರಾಯಿತು.
ಈ ಬಗೆಯ ಸಾಂಪ್ರದಾಯಿಕ ವಿಧಾನದಿಂದ ವೆಚ್ಚವೂ ಅಧಿಕ ಎಂದು ತಿಳಿದ ಅವರು, ಹಳೆಯ ಸಾಂಪ್ರದಾಯಿಕ ಪದ್ಧತಿಗೆ ಜೋತು ಬೀಳದೆ, ಬೀಜ ಎರಚುವ ಕೃಷಿ ವಿಧಾನ ಅಳವಡಿಸಿಕೊಂಡರು. ಅಂದರೆ ಉಳುಮೆ ಮಾಡಿದ ಗದ್ದೆಗೆ ಹದವಾದ ಪ್ರಮಾಣದಲ್ಲಿ ತಾವೇ ಬಿತ್ತನೆ ಮಾಡಿ, ಬೆಳೆದ ಪೈರನ್ನು ಕೀಳದೆ, ನಾಟಿ ಮಾಡದೆ ಅದೇ ಜಾಗದಲ್ಲಿಯೇ ಪೈರಿಗೆ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ನೀಡಿ ಉತ್ತಮ ಫಸಲನ್ನು ಪಡೆಯಲಾರಂಭಿಸಿದರು.
ಮೊದಲ ಬಾರಿ 2 ಎಕರೆಯಲ್ಲಿ ಈ ವಿಧಾನ ಪರೀಕ್ಷಿಸಿ, ನಂತರ ಹಂತಹಂತವಾಗಿ ಹೆಚ್ಚಿನ ಭೂಮಿಯಲ್ಲಿ ಈ ಪದ್ಧತಿ ರೂಢಿಸಿಕೊಂಡರು. ಈ ಬಾರಿ 12 ಎಕರೆಯಲ್ಲಿ ಇದೇ ವಿಧಾನದಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಇದೇ ಮಾದರಿ ಅನುಸರಿಸುತ್ತಿರುವ ಅವರು ಎಕರೆಯೊಂದಕ್ಕೆ ಸುಮಾರು 15ರಿಂದ 17 ಕ್ವಿಂಟಲ್‍ನಷ್ಟು ಇಳುವರಿ ಪಡೆಯುತ್ತಿದ್ದಾರೆ.
ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಇಳುವರಿ ಕೊಂಚ ಕಡಿಮೆಯಾದರೂ ಈ ವಿಧಾನದಿಂದ ಶೇ 30ರಷ್ಟು ವೆಚ್ಚ ಉಳಿಸಬಹುದು. ಜೊತೆಗೆ, ಯಂತ್ರದಿಂದ ಉಳುಮೆ ಹಾಗೂ ಕಟಾವು ಮಾಡುವುದರಿಂದ ಕಾರ್ಮಿಕರ ಅಗತ್ಯವೂ ಹೆಚ್ಚಿಲ್ಲ. ಆದರೆ ಕಳೆ ಕೀಳುವುದು, ಗೊಬ್ಬರ ಮುಂತಾದ ಕಾರ್ಯವನ್ನು ಮಾತ್ರ ಸಮಯಕ್ಕೆ ಸರಿಯಾಗಿ ನೀಡಬೇಕು. ಲಾಭದಾಯಕವಾಗಿರುವ ಈ ವಿಧಾನದಿಂದ ಗದ್ದೆಯನ್ನು ಪಾಳು ಬಿಡುವುದನ್ನು ತಪ್ಪಿಸಬಹುದು. ಕಾರ್ಮಿಕರ ಅಲಭ್ಯತೆಯಿಂದ ಇದೇ ಮಾದರಿಯನ್ನು ಕೆಲವು ರೈತರು ಇದೀಗ ಅನುಸರಿಸಲು ಆರಂಭಿಸಿದ್ದಾರೆ.
ಉಳುಮೆ ಹಾಗೂ ಕಟಾವಿಗೆ ಯಂತ್ರವನ್ನು ಬಳಸುವ ಅವರು ಈ ಬಾರಿ ಅತಿರ ಹಾಗೂ ಆರ್.ಎನ್.ಆರ್ ತಳಿಯನ್ನು ಬಳಸಿದ್ದಾರೆ. ಕೃಷಿಯ ಕುರಿತು ಇನ್ನಷ್ಟು ಹೊಸ ಆಲೋಚನೆಗಳನ್ನು ಅವರು ಹೊಂದಿದ್ದಾರೆ.
ಮಾಹಿತಿಗಾಗಿ 9880025817 ಸಂಪರ್ಕಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.