ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ-2020: ಕೊಡಗು ಜಿಲ್ಲೆಗೆ ಸಿಗದ ಹೆಚ್ಚಿನ ಲಾಭ; ಕಾಡಿದ ವರ್ಷ, ಉಳಿದ ನೋವು

Last Updated 30 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಗೆ 2020 ಸಹ ನೋವು ಉಳಿಸಿ ಹೋದ ವರ್ಷ.

ಕೊರೊನಾ, ಲಾಕ್‌ಡೌನ್‌, ಮಹಾಮಳೆ, ಭೂಕುಸಿತ ಶಾಪವಾಗಿ ಕಾಡಿದವು. ಸತತ ಮೂರನೇ ವರ್ಷವು ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು ಮಾತ್ರ ದುರಂತ. ಬಿಕ್ಕಟ್ಟಿಗೆ ಸಿಲುಕಿ ಕಾಫಿ ಕಣಿವೆಯ ಜನರು ಹೈರಾಣಾದರು. ಜಿಲ್ಲೆಗೆ ರಾಜಕೀಯವಾಗಿಯೂ ಅಷ್ಟೇನೂ ಲಾಭವಾಗಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಆಡಳಿತಕ್ಕೆ ಬಂದರೂ, ಸ್ಥಳೀಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ.

ಮಳೆಯಿಂದ ಸಾಕಷ್ಟು ಅನಾಹುತ

ಆಗಸ್ಟ್‌ನಲ್ಲಿ ಭಾರಿ ಮಳೆ ಸುರಿಯಿತು. ಮಡಿಕೇರಿ ತಾಲ್ಲೂಕಿನ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತದಿಂದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಸೇರಿದಂತೆ ಐವರು ಪ್ರಾಣ ಕಳೆದುಕೊಂಡರು. ಈ ದುರಂತ ಜಿಲ್ಲೆಯ ಜನರಿಗೆ ಅತ್ಯಂತ ನೋವು ತರಿಸಿತು. ಪ್ರವಾಹದಲ್ಲಿ 17 ಜಾನುವಾರುಗಳು ತೇಲಿ ಹೋದರೆ, 342 ಮನೆಗಳು ನೆಲಸಮಗೊಂಡಿದ್ದವು. ಅಂದಾಜು 41,026 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಭಾರಿ
ಮಳೆ, ಪ್ರವಾಹದಿಂದ ಮೂಲಸೌಕರ್ಯಕ್ಕೂ ಹಾನಿಯಾಗಿತ್ತು. ₹ 601 ಕೋಟಿಯಷ್ಟು ಮೂಲಸೌಕರ್ಯಕ್ಕೆ ಹಾನಿಯಾಗಿತ್ತು ಎಂದು ಕೊಡಗು ಜಿಲ್ಲಾಡಳಿತ ಅಂದಾಜು ಮಾಡಿದೆ. ಭೂವಿಜ್ಞಾನಿಗಳು ಅಧ್ಯಯನ ನಡೆಸಿ ಗಜಗಿರಿ ಬೆಟ್ಟ ಕುಸಿತಕ್ಕೆ ಇಂಗುಗುಂಡಿ ತೆಗೆದಿರುವುದೇ ಕಾರಣವೆಂದು ವರದಿ ನೀಡಿದ್ದರು.

ಕೊರೊನಾ ಆರ್ಭಟ

ಜಿಲ್ಲೆಯಲ್ಲಿ ಕೊರೊನಾ ವರ್ಷದುದ್ದಕ್ಕೂ ಆರ್ಭಟಿಸಿತು. ದುಬೈನಿಂದ ಜಿಲ್ಲೆಯ ಕೊಂಡಂಗೇರಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು ಮಾರ್ಚ್‌ನಲ್ಲಿ ಪತ್ತೆಯಾಗಿತ್ತು. ಅದಾದ ಮೇಲೆ ನೂರಾರು ಕೊರೊನಾ ಪ್ರಕರಣಗಳು ಪತ್ತೆಯಾದವು. ಸಾವುಗಳು ಸಂಭವಿಸಿದವು. ಲಾಕ್‌ಡೌನ್‌ನಿಂದ ಜನರು ಸಾಕಷ್ಟು ಸಮಸ್ಯೆಗೆ ಒಳಗಾದರು.

ವೈದ್ಯರು, ನರ್ಸ್‌, ಅಂಗನವಾಡಿ ಕಾರ್ಯಕರ್ತರು, ಪೊಲೀಸರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಹಾಕಿದರು.

ಕೊರೊನಾ ಬಿಕ್ಕಟ್ಟಿನಿಂದ ಅಕ್ಟೋಬರ್‌ನಲ್ಲಿ ನಡೆದ ದಸರಾವು ಸರಳ ಆಚರಣೆಗಷ್ಟೇ ಸೀಮಿತವಾಯಿತು. ಕೊರೊನಾದಿಂದ ಕಳೆಗುಂದಿತು. ಕರಗ ಮನೆ ಮನೆಗೆ ಭೇಟಿ ನೀಡಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿಲ್ಲ. ವಿಜಯ ದಶಮಿಯಂದು ದಶ ಮಂಟಪಗಳ ಶೋಭಾಯಾತ್ರೆಯೂ ಇರಲಿಲ್ಲ.

ತೀರ್ಥೋದ್ಭವ ಸಂಭ್ರಮ

ಕೊರೊನಾ ಬಿಕ್ಕಟ್ಟಿನ ನಡುವೆಯೇ ತೀರ್ಥೋದ್ಭವ ಸಂಭ್ರಮವಿತ್ತು. ತೀರ್ಥೋದ್ಭವ ವೀಕ್ಷಣೆಗೆ ಹೆಚ್ಚಿನ ಜನರಿಗೆ ಅವಕಾಶ ಸಿಗಲಿಲ್ಲ. ಕೆಲವರು, ಜಿಲ್ಲಾಡಳಿತ ಆದೇಶವನ್ನು ಲೆಕ್ಕಿಸದೆ ತಲಕಾವೇರಿಗೆ ಬಂದಿದ್ದರು. ಪೊಲೀಸರು ಅವರನ್ನು ದ್ವಾರದಲ್ಲಿಯೇ ತಡೆಯುವ ಪ್ರಯತ್ನ ಮಾಡಿದರು. ಕೊನೆಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರನ್ನು ಒಳಗೆ ಬಿಡಿಸಿದರು. ಇದರಿಂದ ಬೇಸತ್ತು ತಲಕಾವೇರಿ– ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್‌.ತಮ್ಮಯ್ಯ ತೀರ್ಥೋದ್ಭವ ವೇಳೆ ಕ್ಷೇತ್ರದಿಂದ ಹೊರ ನಡೆದಿದ್ದರು.

ಪೊನ್ನಂಪೇಟೆ ತಾಲ್ಲೂಕು ಉದ್ಘಾಟನೆ

ಪೊನ್ನಂಪೇಟೆ ತಾಲ್ಲೂಕು ಅಧಿಕೃತವಾಗಿ ಜಿಲ್ಲೆಗೆ ಸೇರ್ಪಡೆ ಆಯಿತು. ಸಚಿವರಾದ ಆರ್‌.ಅಶೋಕ್‌ ಹಾಗೂ ನಾರಾಯಣಗೌಡ ಅವರು ನೂತನ ತಾಲ್ಲೂಕು ಉದ್ಘಾಟಿಸಿದ್ದರು. ಕುಶಾಲನಗರಕ್ಕೂ ಅಧಿಕೃತ ತಾಲ್ಲೂಕು ಮಾನ್ಯತೆ ಲಭಿಸಿದ್ದು ವಿಶೇಷ. ಇದು ಜನರ ಸಂಭ್ರಮಕ್ಕೆ ಕಾರಣವಾಯಿತು. ಇನ್ನು ಜನವರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಡಿಕೇರಿ ಭೇಟಿ ನೀಡಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಸಚಿವರ ಹೇಳಿಕೆ ಸದ್ದು ಮಾಡಿತು

ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಡಿಸೆಂಬರ್ ಮೊದಲ ವಾರದಲ್ಲಿ ಪೊನ್ನಂಪೇಟೆಯ ಅರಣ್ಯ ಕಾಲೇಜಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’ ಎಂದು ಹೇಳಿದ್ದು ವಿವಾದ ಪಡೆದುಕೊಂಡಿತ್ತು. ಈ ಹೇಳಿಕೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತು.

ಗೋಮಾಂಸ ಸೇವನೆ ವಿಚಾರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಕೊಡವರು ಗೋಮಾಂಸ ತಿನ್ನುತ್ತಾರೆ ಎಂದು ಹೇಳಿದ್ದು ಭಾರಿ ಸದ್ದು ಮಾಡಿತು. ಅವರ ಹೇಳಿಕೆಗೆ ಕೊಡವ ಸಮುದಾಯದಿಂದ ಆಕ್ರೋಶ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತ
ಪಡಿಸಿದ್ದರಿಂದ ವಿವಾದ ತಣ್ಣಗೆ ಆಯಿತು.

ಜಿಲ್ಲೆಯಾದ್ಯಂತ ಕಾಡಾನೆ ಹಾವಳಿ ತೀವ್ರವಾಗಿತ್ತು. ಆನೆ ದಾಳಿಯಿಂದ ಸಾವು– ನೋವಿಗೆ ಕಾರಣವಾಯಿತು. ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಹುಲಿ ದಾಳಿ ನಿರಂತರವಾಗಿತ್ತು. ಹತ್ತಾರು ಜಾನುವಾರುಗಳು ಬಲಿಯಾದವು. ಕೊನೆಗೆ ಕಾರ್ಯಾಚರಣೆ ನಡೆಸಿ ಹುಲಿಯೊಂದನ್ನು ಸೆರೆ ಹಿಡಿಯಲಾಯಿತು. ಡಿಸೆಂಬರ್‌ನಲ್ಲಿ ಹಂದಿ ಸೆರೆಗೆ ಅಳವಡಿಸಿದ್ದ ಉರುಳಿಗೆ ಹುಲಿಯೊಂದು ಬಿದ್ದಿತ್ತು. ಅದನ್ನು ರಕ್ಷಿಸಿ, ಮೈಸೂರಿನ ಕೂರ್ಗಳ್ಳಿಯ ಚಾಮುಂಡಿ ಹುಲಿ ಸಂರಕ್ಷಣಾ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. ನಾಗರಹೊಳೆ ಅಂಚಿನಲ್ಲಿ ವನ್ಯಜೀವಿಗಳ ಬೇಟೆಗಾರರ ಬಂಧನವಾಯಿತು.

ಗ್ರಾಮ ಸಂಗ್ರಾಮ:ವರ್ಷಾಂತ್ಯದಲ್ಲಿ ಗ್ರಾಮೀಣ ಪ್ರದೇಶ ಜನರು ಗ್ರಾಮ ಪಂಚಾಯಿತಿ ಚುನಾವಣೆಗೆ ಸಾಕ್ಷಿಯಾದರು. ಹಳ್ಳಿಯಲ್ಲಿ ಸ್ಥಳೀಯ ರಾಜಕೀಯ ರಂಗು ಪಡೆದುಕೊಂಡಿತ್ತು. ಡಿ.30ರಂದು ಪ್ರಕಟವಾದ ಫಲಿತಾಂಶದಲ್ಲಿ ಗೆದ್ದವರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT