ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಇಂತೂ ಸಚಿವರಿಗೊಂದು ಕಚೇರಿ!

Last Updated 6 ಡಿಸೆಂಬರ್ 2013, 10:58 IST
ಅಕ್ಷರ ಗಾತ್ರ

ಮಡಿಕೇರಿ: ಅಂತೂ ಇಂತೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆಂದು ಪ್ರತ್ಯೇಕ ಕಚೇರಿಯನ್ನು ನಗರದ ಕೋಟೆ ಆವರಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ತೆರೆಯಲಾಗಿದೆ.

ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡು ನಾಲ್ಕು ತಿಂಗಳ ನಂತರ ಸಚಿವರ ಅಧಿಕೃತ ಕಚೇರಿಯನ್ನು ಜಿಲ್ಲಾಧಿಕಾರಿ ಕೊಠಡಿಯ ಪಕ್ಕದಲ್ಲಿದ್ದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆರಂಭಿಸಲಾಗಿದೆ. ಇದರಿಂದ ಸಚಿವರನ್ನು ಸಂಪರ್ಕಿಸಲು ಹಾಗೂ ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.

ನಾಲ್ಕು ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಡಾ.ಎಚ್‌.ಸಿ. ಮಹದೇವಪ್ಪ ಅವರು ಅದೇಕೋ ಕಚೇರಿಯನ್ನು ತೆರೆಯಲು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಸಾರ್ವಜನಿಕರು ಸಚಿವರನ್ನು ಎಲ್ಲಿ ಸಂಪರ್ಕಿಸಬೇಕು? ತಮ್ಮ ದುಃಖ ದುಮ್ಮಾನಗಳನ್ನು ಎಲ್ಲಿ ದಾಖಲಿಸಬೇಕೆನ್ನುವುದು ತಿಳಿಯದೇ ಪರದಾಡುತ್ತಿದ್ದರು.

ಕೆಲವೊಮ್ಮೆ ಸಚಿವರ ಹೆಸರಿನಲ್ಲಿ ಬರುವ ಪತ್ರಗಳನ್ನು ಸ್ವೀಕರಿಸಲು ಸಹ ಜಿಲ್ಲೆಯಲ್ಲಿ ಯಾವುದೇ ಅಧಿಕೃತವಾದ ಕಚೇರಿಯಾಗಲಿ, ಸಿಬ್ಬಂದಿಯಾಗಿ ಇರಲಿಲ್ಲ. ಇದರಿಂದಾಗಿ ಪೋಸ್ಟ್‌ಮನ್‌ಗಳು ಹಾಗೂ ಕೊರಿಯರ್‌ ಸಿಬ್ಬಂದಿ ಕಷ್ಟಪಡುತ್ತಿದ್ದಾರೆ. ಸಚಿವರ ಹೆಸರಿಗೆ ಬಂದ ಅದೆಷ್ಟೋ ಪತ್ರಗಳನ್ನು ವಾಪಸ್‌ ಕಳುಹಿಸಿದ್ದೂ ಉಂಟು.

ಇದರ ಬಗ್ಗೆ ಹಲವು ಬಾರಿ ಸಚಿವರನ್ನು ಸುದ್ದಿಗಾರರು ಪ್ರಶ್ನಿಸಿದ್ದಾಗ, ‘ಜಿಲ್ಲೆಯಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಕಚೇರಿ ಬೇಕೆಂದೇನೂ ಇಲ್ಲ. ಪ್ರತಿದಿನ ಜಿಲ್ಲಾಧಿಕಾರಿ ಅವರ ಜೊತೆ ಸಂಪರ್ಕದಲ್ಲಿರುತ್ತೇನೆ. ಮೊಬೈಲ್‌ ಮೂಲಕವೇ ಎಲ್ಲ ಕೆಲಸ–ಕಾರ್ಯಗಳನ್ನು ಮಾಡಿಸುತ್ತಿದ್ದೇನೆ’ ಎಂದು ಹೇಳಿಕೆ ನೀಡುತ್ತ ಬಂದಿದ್ದರು. ಒಂದು ಹಂತದಲ್ಲಿ ‘ನನಗೆ ಕಚೇರಿಯ ಅವಶ್ಯಕತೆ ಇಲ್ಲವೇ ಇಲ್ಲ’ ಎಂದೂ ಅವರು ಹೇಳಿದ್ದುಂಟು.

ಪ್ರತಿ ಜಿಲ್ಲೆಯ ಜಿಲ್ಲಾಕೇಂದ್ರಗಳಲ್ಲಿ ಉಸ್ತುವಾರಿ ಸಚಿವರ ಕಚೇರಿಗಳನ್ನು ತೆರೆಯಲಾಗಿರುತ್ತದೆ. ಸಚಿವರನ್ನು ಭೇಟಿ ಮಾಡಲು ನಿಗದಿತ ಸ್ಥಳವಿರಬೇಕೆನ್ನುವ ಉದ್ದೇಶದಿಂದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇಂತಹದೊಂದು ವ್ಯವಸ್ಥೆ ಇರುತ್ತದೆ. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಕೊಡಗು ಜಿಲ್ಲೆಯಲ್ಲಿ ಮಾತ್ರ ಉಸ್ತುವಾರಿ ಸಚಿವರಿಗೆಂದು ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿರಲಿಲ್ಲ.

ಈಗ ಜಿಲ್ಲಾ ಉಸ್ತುವಾರಿ ಸಚಿವರಿಗೆಂದು ಪ್ರತ್ಯೇಕ ಕಚೇರಿಯನ್ನು ತೆರೆಯಲಾಗಿದೆ. ಅಲ್ಲದೇ ಕಚೇರಿಯ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ನಂಜುಂಡಪ್ಪ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಇವರನ್ನು ಮೊಬೈಲ್‌: 94819 27044 ಮೂಲಕ ಸಾರ್ವಜನಿಕರು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT